ಭೀಮಾ ನದಿ ನೀರಿಗಾಗಿ ಅಫಜಲ್ಪುರ ಭಾಗಶಃ ಬಂದ್

| Published : Mar 21 2024, 01:03 AM IST

ಸಾರಾಂಶ

ಅಫಜಲ್ಪುರ ಪಟ್ಟಣ ಬಂದ್‌ಗೆ ಕರೆ ನೀಡಿದ್ದ ಹಿನ್ನಲೆಯಲ್ಲಿ ವರ್ತಕರು, ವ್ಯಾಪಾರಿಗಳು, ಮಠಾಧೀಶರು, ಸಾರ್ವಜನಿಕರು, ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತ ಪಡಿಸಿದ್ದು ಅಫಜಲ್ಪುರ ಪಟ್ಟಣ ಭಾಗಶಃ ಬಂದ್ ಆಗಿತ್ತು.

ಕನ್ನಡಪ್ರಭ ವಾರ್ತೆ ಚವಡಾಪುರ

ಭೀಮಾ ನದಿಗೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ 5 ಟಎಂಸಿ ನೀರು ಹರಿಸಬೇಕೆಂದು ಜೆಡಿಎಸ್ ಮುಖಂಡ ಶಿವಕುಮಾರ ನಾಟಿಕಾರ ಅಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದು, ಬುಧವಾರ ಅಫಜಲ್ಪುರ ಪಟ್ಟಣ ಬಂದ್‌ಗೆ ಕರೆ ನೀಡಿದ್ದ ಹಿನ್ನಲೆಯಲ್ಲಿ ವರ್ತಕರು, ವ್ಯಾಪಾರಿಗಳು, ಮಠಾಧೀಶರು, ಸಾರ್ವಜನಿಕರು, ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತ ಪಡಿಸಿದ್ದು ಅಫಜಲ್ಪುರ ಪಟ್ಟಣ ಭಾಗಶಃ ಬಂದ್ ಆಗಿತ್ತು.

ಅಫಜಲ್ಪುರ ಪಟ್ಟಣದ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಲಕ್ಷ್ಮೀ ದೇವಾಲಯ ವೃತ್ತಗಳ ಬಳಿ ಪ್ರತಿಭಟನಾಕಾರರು ವಾಹನಗಳನ್ನು ತಡೆದು ಟೈರ್‌ಗಳಿಗೆ ಬೆಂಕಿ ಹಚ್ಚಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ನಮ್ಮ ಪಾಲಿನ ನೀರು ಬಿಡಿ ಎಂದು ಆಗ್ರಹಿಸಿದರು.

ಇನ್ನೊಂದೆಡೆ ಶಿವಕುಮಾರ ನಾಟಿಕಾರ ನೇತೃತ್ವದಲ್ಲಿ ಅಂಬೇಡ್ಕರ್ ವೃತ್ತದಲ್ಲಿ ನಡೆದ ಹೆದ್ದಾರಿ ತಡೆ ಪ್ರತಿಭಟನೆಯಲ್ಲಿ ಬಡದಾಳದ ಡಾ. ಚನ್ನಮಲ್ಲ ಶಿವಯೋಗಿಗಳು, ಅಫಜಲ್ಪುರದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಚಿನ್ಮಯಗಿರಿಯ ವೀರಮಹಾಂತ ಶಿವಾಚಾರ್ಯರು, ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಕುಮಸಗಿಯ ಶಿವಾನಂದ ಶಿವಾಚಾರ್ಯರು, ಅಳ್ಳಗಿ ಶಿವಾಚಾರ್ಯರು, ಮಾಶಾಳದ ಮರುಳಾರಾಧ್ಯ ಶಿವಾಚಾರ್ಯರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ನಮ್ಮ ಜನ ಕಷ್ಟದಲ್ಲಿದ್ದಾರೆ, ಜನ ಜಾನುವಾರುಗಳಿಗೆ ಕುಡಿಯಲು ನೀರು ಸಿಗದಂತಾಗಿದೆ. ಬಚಾವತ್ ಜಲತೀರ್ಪಿನ ಪ್ರಕಾರ ಭೀಮಾ ನದಿಗೆ ಬರಬೇಕಾದ ನ್ಯಾಯಯುತ ನೀರನ್ನು ಮಹಾರಾಷ್ಟ್ರ ರಾಜ್ಯದವರು ಬಿಡುಗಡೆ ಮಾಡಲಿ. ಶಿವಕುಮಾರ ನಾಟಿಕಾರ ಅವರು ಜನಪರ ಹೋರಾಟ ರೂಪಿಸಿದ್ದಾರೆ. ಎಲ್ಲರೂ ಇಂತಹ ಹೋರಾಟಗಳಿಗೆ ಬೆಂಬಲವಾಗಿ ನಿಂತಿರುವುದು ನಮ್ಮ ಒಗ್ಗಟ್ಟು ಪ್ರದರ್ಶನ ಮಾಡುತ್ತದೆ ಎಂದರು.

ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಮಾತನಾಡಿ, ನಾವು ಈಗಾಗಲೇ ಸೊಲ್ಲಾಪುರ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಭೀಮಾ ನದಿಗೆ ನೀರು ಬಿಡುವ ಕುರಿತು ಮನವಿ ಮಾಡಿದ್ದೇವೆ. ಜೊತೆಗೆ ಎರಡು ದಿನಗಳಲ್ಲಿ ಆಲಮಟ್ಟಿ ಜಲಾಶಯದಿಂದ ಕಾಲುವೆ ಮೂಲಕ ಭೀಮಾ ನದಿಗೆ 2 ಟಿಎಂಸಿ ನೀರು ಹರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಫಜಲ್ಪುರದ ಸಾರ್ವಜನಿಕರು ಶಾಂತಿಯುತವಾಗಿ ಪ್ರತಿಭಟನೆ, ಸತ್ಯಾಗ್ರಹ ಮಾಡಿದ್ದೀರಿ, ಯಾವುದೇ ಸಮಸ್ಯೆ ಉಲ್ಬಣಿಸದಂತೆ ಸೌಜನ್ಯಯುತವಾಗಿ ವರ್ತಿಸಿದ್ದೀರಿ. ಎರಡು ದಿನಗಳಲ್ಲಿ ನೀರು ಭೀಮೆಗೆ ಬರಲಿದೆ ಹೀಗಾಗಿ ಶಿವಕುಮಾರ ನಾಟಿಕಾರ ಅವರು ಉಪವಾಸ ಸತ್ಯಾಗ್ರಹ ಕೈಬಿಡಬೇಕು ಎಂದು ಮನವಿ ಮಾಡಿದರು.

ಶಿವಕುಮಾರ ನಾಟಿಕಾರ ಮಾತನಾಡಿ, ಜನ, ಜಾನುವಾರುಗಳಿಗೆ ಕುಡಿಯಲು ನೀರು ಬೇಕಾಗಿದೆ. ಇದಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ಭೀಮಾ ನದಿಗೆ ನೀರು ಹರಿಯುವ ತನಕ ಉಪವಾಸ ಕೈಬಿಡುವುದಿಲ್ಲ ಎಂದ ಅವರು, ಜಿಲ್ಲಾಧಿಕಾರಿಗಳು ಹಾಗೂ ಉನ್ನತ ಅಧಿಕಾರಿಗಳ ತಂಡ ಉಜನಿ ಜಲಾಶಯಕ್ಕೆ ನಿಯೋಗ ತೆರಳಿ ನೀರಿನ ಮಟ್ಟದ ಕುರಿತು ತನಿಖೆ ನಡೆಸಲಿ. ಬಚಾವತ್ ತೀರ್ಪಿನ ಪ್ರಕಾರ ನಮ್ಮ ಪಾಲಿನ ನೀರು ನಮಗೆ ಸಿಗುವಂತೆ ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಳ್ಳಲಿ ಎಂದು ಆಗ್ರಹಿಸಿದರು.

ಅಫಜಲ್ಪುರ ಬಂದ್‌ನಿಂದಾಗಿ ದುಧನಿ ರಸ್ತೆ, ಕಲಬುರಗಿ ರಸ್ತೆ, ಸಿಂದಗಿ ರಸ್ತೆ, ಘತ್ತರಗಿ ರಸ್ತೆಗಳಲ್ಲಿ ಪಟ್ಟಣದ ಹೊರಭಾಗದಲ್ಲೇ ಸಾರಿಗೆ ಬಸ್‌ಗಳು, ಖಾಸಗಿ ವಾಹನಗಳು ನಿಲ್ಲುವಂತಾಯಿತು. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿ ಬಸ್‌ಗಳಿಗಾಗಿ ಪಟ್ಟಣದ ಹೊರವಲಯದ ತನಕ ಬಿಸಿಲಲ್ಲಿ ನಡೆದುಕೊಂಡು ಹೋಗುವಂತಾಯಿತು. ಅಲ್ಲದೆ ಹಿರಿಯರು, ಮಹಿಳೆಯರು ಕೂಡ ತಮ್ಮ ತಮ್ಮ ಊರುಗಳಿಗೆ ತೆರಳಲು ಪರದಾಡುವಂತಾಯಿತು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಪ್ರಮುಖರಾದ ಪಪ್ಪು ಪಟೇಲ್, ಚಂದು ದೇಸಾಯಿ, ಸಂತೋಷ ದಾಮಾ, ಅವ್ವಣ್ಣ ಮ್ಯಾಕೇರಿ, ಚಿದಾನಂದ ಮಠ, ನಾಗೇಶ ಕೊಳ್ಳಿ, ಭೀಮರಾವ ಗೌರ, ಬಾಬುರಾವ ಜಮಾದಾರ, ರಾಜು ಚವ್ಹಾಣ,ರಾಣಿ ಬುಕ್ಕೆಗಾರ, ಪ್ರಭಾವತಿ ಮೇತ್ರೆ, ಸಂತೋಶ್ರೀ ಕಾಳೆ, ಮಹಾದೇವ ಬಂಕಲಗಿ, ಮಹಾಂತೇಶ ಬಳೂಂಡಗಿ, ಸಾಗರ ಇಸ್ಪೂರ, ಗೌತಮ ಸಕ್ಕರಗಿ, ಮಹಾಲಿಂಗ ಅಂಗಡಿ, ಶಂಕು ಮ್ಯಾಕೇರಿ, ದಯಾನಂದ ದೊಡ್ಮನಿ, ಮಹಾರಾಯ ಅಗಸಿ, ಈರಣ್ಣ ಪಂಚಾಳ ಸೇರಿದಂತೆ ತಾಲೂಕಿನ ಹತ್ತಾಋು ಹಳ್ಳಿಗಳಿಂದ ಆಗಮಿಸಿದ ಸಾರ್ವಜನಿಕರು ಇದ್ದರು.