ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಹೋಬಳಿಯ ಮಾರ್ಗೋನಹಳ್ಳಿಯಲ್ಲಿ ಸುಮಾರು 113.13ಎಕರೆ ಗೋಮಾಳದ ಜಮೀನನ್ನು ಬೇಸಾಯ ಮಾಡುತ್ತಿರುವ ರೈತರಿಗೆ ನೀಡದೆ ಬೇಸಾಯ ಮಾಡದ ಪ್ರಭಾವಿ ವ್ಯಕ್ತಿ ವಕೀಲರೊಬ್ಬರಿಗೆ ಭೂ-ಕಬಳಿಕೆಗೆ ಸಹಾಯ ಮಾಡಲಾಗಿದೆ ಎಂದು ಆರೋಪಿ ರೈತರು ಪ್ರತಿಭಟನೆ ನಡೆಸಿದರು.

ಮಾರ್ಗೋನಹಳ್ಳಿ ರೈತರು ಗೋಮಾಳ ಜಾಗಕ್ಕೆ ಆಗಮಿಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ನಮ್ಮ ಭೂಮಿ ಹಕ್ಕು ಎಂದು ಶಾಮಿಯಾನ ಹಾಕಿಕೊಂಡು ನೆರಳಿನ ವ್ಯವಸ್ಥೆ ಮಾಡಿಕೊಂಡು ಮಳೆಗೆ ಜಗ್ಗದೆ ಧರಣಿ ಕುಳಿತರು. ಮಹಿಳೆಯರು, ವಯೋವೃದ್ಧರು ತಮ್ಮ ಹಕ್ಕಿನ ಭೂಮಿ ಉಳಿವಿಗೆ ಪ್ರತಿಜ್ಞೆ ಮಾಡಿದರು.

ನಮ್ಮ ಅಜ್ಜಂದಿರ ಕಾಲದಿಂದಲೂ ಗ್ರಾಮದ ನೂರಾರು ರೈತರು ತಲಾ ಒಂದೆರಡು ಎಕರೆಯಂತೆ ಈ ಗೋಮಾಳದ ಭೂಮಿಯಲ್ಲಿ ಸುಮಾರು 60 ವರ್ಷದಿಂದ ಬೇಸಾಯ ಮಾಡಿಕೊಂಡು ಬರಲಾಗುತ್ತಿದೆ. ನಮ್ಮದು ಇನಾಂ ಗ್ರಾಮ. ಈಗಿರುವಾಗ ಮಂಡ್ಯದ ವಕೀಲ ಡಿ.ರಾಮಲಿಂಗಯ್ಯರ ಹೆಸರಿಗೆ ದಾಖಲೆ ಸೃಷ್ಟಿಸಿ ಅಕ್ರಮವಾಗಿ 1969ರಲ್ಲಿ 95.13 ಎಕರೆಗೆ ಖಾತೆ ಮಾಡಿಕೊಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತದನಂತರ ವಕೀಲರು ಶ್ರೀಕೃಷ್ಣಾನಂದ ಗೋಸ್ವಾಮಿ ಅವರಿಗೆ ಹಕ್ಕು ಖುಲಾಸೆ ಮಾಡಿಕೊಟ್ಟಿದ್ದಾರೆ. ಈಗಿರುವಾಗ ವಕೀಲರ ಮಕ್ಕಳಿಗೆ ಈ ಜಮೀನಿನ ಹಕ್ಕಿಲ್ಲವಾಗಿದೆ. ಆದರೂ ಜಮೀನು ತಮ್ಮದು ಎಂದು ಸ್ವಾಧೀನಾನುಭವದಲ್ಲಿರುವ ಗ್ರಾಮದ ರೈತರಿಗೆ ಬೆದರಿಕೆ ಹಾಕುವುದು ಸರಿಯಲ್ಲ ರೈತ ನಾಗರಾಜು ದೂರಿದರು.


ಮಂಡ್ಯದ ವಕೀಲರು ಸುಮಾರು 80 ಕಿ.ಮೀ. ದೂರದಿಂದ ನಮ್ಮೂರಿನ ಗೋಮಾಳದಲ್ಲಿ ಇಷ್ಟೊಂದು ಎಕರೆ ಭೂಮಿ ಉಳುಮೆ ಮಾಡಲು ಹೇಗೆ ಸಾಧ್ಯ. ಗೋಮಾಳ ಉಳ್ಳವರ ಪಾಲಾಗಿದೆ. ವಕೀಲರಿಗೆ ಯಾವುದೇ ದರಾಖಾಸ್ತು ಕಮಿಟಿ ಮಂಜೂರಾತಿ, ಕ್ರಯಪತ್ರ, ಸಾಗುವಳಿ ಚೀಟಿ ಇಲ್ಲದಿರುವಾಗ ಕಾನೂನು, ನಿಯಮಗಳನ್ನು ಅಧಿಕಾರಿಗಳು ಗಾಳಿಗೆ ತೂರಿದ್ದಾರೆ ಎಂದು ದೂರಿದರು.

ಬರೋಬ್ಬರಿ 95.13 ಎಕರೆ ಜಮೀನನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಮಂಜೂರು ಮಾಡಿರುವುದು ತರವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏಕ ವ್ಯಕ್ತಿಗೆ ಇಷ್ಟೊಂದು ಎಕರೆ ಗೋಮಾಳ ಜಾಗ ಮಂಜೂರು ಮಾಡಲು ಕಾನೂನೇ ಇಲ್ಲ ಎಂದು ಆಕ್ರೋಶಿಸಿದರು.

ವಕೀಲರ ಮಗ ಆರಕ್ಷಕ ಇಲಾಖೆ ಅಧಿಕಾರಿಯಾಗಿದ್ದು, ಇಲ್ಲಸಲ್ಲದ ಆರೋಪ ಹೊರಿಸಿ ಗ್ರಾಮದ ರೈತರಿಗೆ ಕ್ರಿಮಿನಲ್ ಕೇಸು ಹಾಕಿಸಿ ಬೆದರಿಸಲಾಗುತ್ತಿದೆ. ರೈತರ ಹತ್ತಿಕ್ಕುವ ಕೆಲಸಕ್ಕೆ ಕಡಿವಾಣ ಹಾಕಬೇಕು. ಸ್ಥಳಕ್ಕೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳು ಆಗಮಿಸಿ ವಾಸ್ತವ ಸಂಗತಿ ತಿಳಿಯಬೇಕು. ನೈಜ್ಯವಾದ ರೈತರಿಗೆ ನ್ಯಾಯ ಒದಗಿಸಬೇಕು. ನ್ಯಾಯ ದೊರಕುವ ತನಕ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಎಂ.ಕೆ.ನಾಗರಾಜು, ರಮೇಶ್, ನರಸೇಗೌಡ, ಎಂ.ಕೆ.ರಾಜಶೇಖರ್, ಕಾಳೇಗೌಡ, ಎಂ.ಡಿ.ಶಿವಣ್ಣ, ಮಂಜು, ಚಂದ್ರು, ಶಿವಣ್ಣ, ಅಜ್ಜೇಗೌಡ, ಶಂಕರ್, ರಮೇಶ್, ಪುಟ್ಟೇಗೌಡ, ಜಯಣ್ಣ ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ರೈತರು ಇದ್ದರು. ಬಹಳ ವರ್ಷಗಳ ಹಿಂದೆ ಮಂಡ್ಯ ಜಿಲ್ಲಾ ವಿಶೇಷ ಜಿಲ್ಲಾಧಿಕಾರಿಗಳ ಕಾಲಾವಧಿಯಲ್ಲಿ ಈ ಖಾತೆ ಆಗಿದೆ. ಸಕ್ಷಮ ಪ್ರಾಧಿಕಾರದಲ್ಲಿ ರೈತರು ತಮ್ಮ ಅಹವಾಲು ಸಲ್ಲಿಸಬೇಕಿದೆ. ರೈತರು ತಮ್ಮ ಅಹವಾಲುಗಳನ್ನು ತೋಡಿಕೊಂಡಿದ್ದು, ಎಲ್ಲವನ್ನು ಮೇಲಾಧಿಕಾರಿಗಳಿಗೆ ತಿಳಿಸಿ ರೈತರಿಗೆ ಸೂಕ್ತ ನ್ಯಾಯವನ್ನು ಕಾನೂನು ಪ್ರಕಾರವಾಗಿ ನೀಡಲು ಕೋರಲಾಗುವುದು.

- ವೀಣಾ, ಉಪತಹಸೀಲ್ದಾರ್. ನಾಡಕಚೇರಿ, ಕಿಕ್ಕೇರಿ