ಅಫಜಲ್ಪುರ ರಸ್ತೆ ಅಗಲೀಕರಣ ಕಾಮಗಾರಿಗೆ ಗ್ರಹಣ

| Published : Apr 21 2025, 12:47 AM IST

ಸಾರಾಂಶ

ನಗರೋತ್ಥಾನ 4ನೇ ಹಂತದ ₹3 ಕೋಟಿ ಅನುದಾನದಲ್ಲಿ ಅಫಜಲ್ಪುರ ಪಟ್ಟಣದ ಮುಖ್ಯರಸ್ತೆಯ ಅಗಲೀಕರಣ, ಚರಂಡಿ ನಿರ್ಮಾಣ ಮತ್ತು ಬೀದಿ ದೀಪಗಳ ಅಳವಡಿಕೆ ಕಾಮಗಾರಿ ಕಳೆದ 2 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಅಫಜಲ್ಪುರದ ಜನ ನಿತ್ಯ ಹೈರಾಣಾಗುವಂತಾಗಿದೆ.

ರಾಹುಲ್ ಜೀ ದೊಡ್ಮನಿ

ಕನ್ನಡಪ್ರಭ ವಾರ್ತೆ ಚವಡಾಪುರ

ನಗರೋತ್ಥಾನ 4ನೇ ಹಂತದ ₹3 ಕೋಟಿ ಅನುದಾನದಲ್ಲಿ ಅಫಜಲ್ಪುರ ಪಟ್ಟಣದ ಮುಖ್ಯರಸ್ತೆಯ ಅಗಲೀಕರಣ, ಚರಂಡಿ ನಿರ್ಮಾಣ ಮತ್ತು ಬೀದಿ ದೀಪಗಳ ಅಳವಡಿಕೆ ಕಾಮಗಾರಿ ಕಳೆದ 2 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಅಫಜಲ್ಪುರದ ಜನ ನಿತ್ಯ ಹೈರಾಣಾಗುವಂತಾಗಿದೆ.

ಅಫಜಲ್ಪುರ ಪಟ್ಟಣದ ಮುಖ್ಯರಸ್ತೆ ಅಗಲೀಕರಣಗೊಳಿಸಬೇಕೆಂದು ನಗರೋತ್ಥಾನ ಯೋಜನೆಯಡಿ ಕ್ರೀಯಾಯೋಜನೆ ಸಿದ್ದಪಡಿಸಿ 2023ರ ಅ.12ರಂದು ಪುರಸಭೆ ವತಿಯಿಂದ ಬಸವೇಶ್ವರ ವೃತ್ತ, ದುಧನಿ ರಸ್ತೆ, ಅಂಬೇಡ್ಕರ್ ವೃತ್ತ, ತಹಸಿಲ್ ಕಚೇರಿ ಸೇರಿದಂತೆ ಮುಖ್ಯರಸ್ತೆಯ ಎರಡು ಬದಿಯಲ್ಲಿದ್ದ ಗೂಡಂಗಡಿಗಳು, ಹಣ್ಣು, ತರಕಾರಿ ಬಂಡಿಗಳು, ಫಾಸ್ಟ್ ಫುಡ್ ಅಂಗಡಿಗಳನ್ನು ಏಕಾಏಕಿ ತೆರವುಗೊಳಿಸಲಾಯಿತು. ಅದಾದ ಬಳಿಕ ಇಂದಿನ ತನಕ ಕಾಮಗಾರಿ ಮುಗಿಯುವ ಲಕ್ಷಣಗಳೇ ಗೋಚರಿಸುತ್ತಿಲ್ಲ.

₹3 ಕೋಟಿ ವೆಚ್ಚದಲ್ಲಿ ಮುಖ್ಯರಸ್ತೆಯ ಅಗಲೀಕರಣ, ಎರಡು ಬದಿಯ ಚರಂಡಿ, ಬೀದಿದೀಪಗಳ ಅಳವಡಿಕೆ ಮಾಡಿಸಬೇಕು. ಆದರೆ ವರ್ಷಾನುಗಟ್ಟಲೇ ಚರಂಡಿಗಾಗಿ ನೆಲ ಅಗೆದು ಹಾಗೆ ಬಿಟ್ಟವರು ಇತ್ತಿಚಿಗೆ ಚರಂಡಿ ಪೂರ್ಣಗೊಳಿಸಿದ್ದಾರೆ. ಚರಂಡಿಗಾಗಿ ಅಗೆದ ಗುಂಡಿಯಿಂದ ಪಟ್ಟಣದ ಜನ, ವಾಹನ ಸವಾರರು, ವ್ಯಾಪಾರಿಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ವೃದ್ದರು, ಮಹಿಳೆಯರು, ಮಕ್ಕಳು ವರ್ಷಗಟ್ಟಲೇ ಸಮಸ್ಯೆ ಅನುಭವಿಸುವಂತಾಯಿತು. ಈಗ ರಸ್ತೆ ಅಗಲೀಕರಣಕ್ಕಾಗಿ ಮುಖ್ಯರಸ್ತೆಯ ಎರಡು ಬದಿಗಳಲ್ಲಿ ನೆಲ ಅಗೆಯಲಾಗುತ್ತಿದೆ.

ಈ ಕೆಲಸ ಕೂಡ ಆಮೆಗತಿಯಲ್ಲಿ ಸಾಗಿದ್ದು ವಾಹನ ಸವಾರರಿಗೆ ಭಾರಿ ಸಮಸ್ಯೆ ತಂದೊಡ್ಡಿದೆ. ಮೊದಲೇ ಪಟ್ಟಣದ ಮುಖ್ಯರಸ್ತೆ ಕಿರಿದಾಗಿದ್ದು ಈ ನಡುವೆ ಅಗಲೀಕರಣಕ್ಕಾಗಿ ಎರಡು ಬದಿಯಲ್ಲಿ ಅಗೆದು ಹೊಂಡ ತೋಡಲಾಗಿದ್ದು ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಮುರುಮ್, ಕಂಕರ್ ಚೆಲ್ಲಿದ್ದಾರೆ. ಏ.18ರ ತನಕ ಅಂಬೇಡ್ಕರ್ ವೃತ್ತದ ಬಳಿಯಲ್ಲಿ ಜೆಸಿಬಿಯಿಂದ ನೆಲ ಅಗೆಯಲಾಗುತ್ತಿದೆ. ಇಡೀ ರಸ್ತೆ 2 ಕಿ.ಮೀಗಿಂತಲೂ ಹೆಚ್ಚು ಉದ್ದವಿಲ್ಲ, ಇಷ್ಟು ಸಣ್ಣ ರಸ್ತೆ ನಿರ್ಮಿಸಲು ಪುರಸಭೆಯವರು ಎರಡು ವರ್ಷ ಸಮಯ ಬೇಕೆನ್ನುವದಾದರೆ ಇವರಿಂದ ಇಡೀ ಪಟ್ಟಣದ ಅಭಿವೃದ್ದಿ ಬಯಸಲು ಎಷ್ಟು ವರ್ಷಗಳು ಕಾಯಬೇಕೆನ್ನುವುದು ಊಹಿಸಲು ಸಾಧ್ಯವಾಗದಂತಾಗಿದೆ.

ಜಿಲ್ಲಾಧಿಕಾರಿ ತಾಕೀತಿಗಿಲ್ಲ ಕಿಮ್ಮತ್ತು

ಪಟ್ಟಣದ ರಸ್ತೆ ಅಗಲೀಕರಣ, ಚರಂಡಿ ನಿರ್ಮಾಣ,ಬೀದಿ ದೀಪ ಅಳವಡಿಕೆ ಕಾಮಗಾರಿ ನಿಗದಿತ ಅವಧಿ ಒಳಗಾಗಿ ಪೂರ್ಣಗೊಳ್ಳಬೇಕೆಂದು ಅಫಜಲ್ಪುರ ಪಟ್ಟಣಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ಬಿ. ತರನ್ನುಮ್ ಭೇಟಿ ನೀಡಿದ್ದಾಗ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ತಾಕೀತು ಮಾಡಿದ್ದರು. ಜಿಲ್ಲಾಧಿಕಾರಿಗಳು ತಾಕೀತು ಮಾಡಿಯೇ ವರ್ಷ ಕಳೆದರೂ ಇನ್ನೂ ಕಾಮಗಾರಿ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಜಿಲ್ಲಾಧಿಕಾರಿಗಳ ಮಾತಿಗೂ ಕಿಮ್ಮತ್ತಿಲ್ಲ, ಜನಪ್ರತಿನಿಧಿಗಳಿಗೂ ಮುತುವರ್ಜಿ ಇಲ್ಲವೆಂದು ಕಾಣುತ್ತಿದೆ.

ಒಳರಸ್ತೆಗಳಿಗೆಲ್ಲ ಮುಕ್ತಿ ಯಾವಾಗ? ಪಟ್ಟಣದ ಮುಖ್ಯರಸ್ತೆಯ ಅಗಲೀಕರಣಕ್ಕಾಗಿ ನಡೆದ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದರಿಂದ ಸುಗಮ ಸಂಚಾರಕ್ಕೆ ಸಂಚಕಾರ ತಂದೊಡ್ಡಿದಂತಾಗಿದೆ. ಇನ್ನೊಂದೆಡೆ ಪಟ್ಟಣದ ಒಳ ರಸ್ತೆಗಳು ತೀರಾ ಕಿರಿದಾಗಿದ್ದು ದ್ವಿಚಕ್ರ ವಾಹನ ರಸ್ತೆ ಪಕ್ಕದಲ್ಲಿ ನಿಲ್ಲಿಸಿದರೆ ಇನ್ನೊಂದು ವಾಹನ ಹೋಗುವುದಕ್ಕು ಕಷ್ಟವಾಗುವ ಪರಿಸ್ಥಿತಿ ಇದೆ. ಇಂತಹ ಕಿರಿದಾದ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡುವುದರಿಂದ ಸಾರ್ವಜನಿಕರು ಇತ್ಯ ನರಕ ಯಾತನೆ ಅನುಭವಿಸುವಂತಾಗಿದೆ.2024ರ ಜೂನ್ 12 ರಂದು ಪಟ್ಟಣದ ಬಸವೇಶ್ವರ ವೃತ್ತದ ಬಳಿ ಇರುವ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರ ಮನೆ ಒಳಗೆ ಮಳೆ ನೀರು ಬರುತ್ತಿವೆ ಎಂದು ಪಿಡ್ಬ್ಲೂಡಿ ಇಲಾಖೆ, ಪುರಸಭೆಯವರು ಹಾಗೂ ತಾಲೂಕು ಆಡಳಿತದವರೆಲ್ಲ ಕೂಡಿಕೊಂಡು ರಾತೋ ರಾತ್ರಿ ಅಲ್ಲಿದ್ದ ಅಂಗಡಿ ಮುಂಗಟ್ಟುಗಳನ್ನು ಜೆಸಿಬಿಯಿಂದ ನೆಲಸಮಗೊಳಿಸಿ ಒಂದೆರಡು ದಿನಗಳಲ್ಲಿ ಚರಂಡಿ, ಕಂಪೌಂಡ ಗೋಡೆ ಕಟ್ಟಿಸಿದರು. ಆದರೆ ಪಟ್ಟಣದ ಸಾವಿರಾರು ನಿವಾಸಿಗಳು ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದರೂ ಕೂಡ ರಸ್ತೆಗಳ ಅಗಲೀಕರಣವಿಲ್ಲ, ಬೀದಿ ದೀಪಗಳಿಲ್ಲ, ಚರಂಡಿಗಳು ತುಂಬಿ ದುರ್ನಾತ ಬೀರುತ್ತವೆ, ಆದರೆ ಅನುದಾನದ ಖರ್ಚು ಮಾತ್ರ ಆಗುತ್ತಿದೆ. ಇದೆಲ್ಲಾ ನೋಡಿದರೆ ಇಲ್ಲಿ ವಾಸವಿರುವ ಜನರಿಗೆ ಕಣ್ಣಿಲ್ಲವೋ? ಅಥವಾ ಸೌಲಭ್ಯಗಳು ಕೇಳುವುದೇ ಅಪರಾಧವೋ ಎನ್ನುವಂತಾಗಿದೆ. ಬಸವರಾಜ್ ಮಾಲಗತ್ತಿ ನಿವಾಸಿ

ಪಟ್ಟಣದಲ್ಲಿನ ಚರಂಡಿಗಳು ಕೊಳಚೆಯಿಂದ ತುಂಬಿ ನಿಂತು ದುರ್ನಾತ ಬೀರುತ್ತಿವೆ. ಮಳೆಗಾಲ ಬರುವ ಮುನ್ನ ಚರಂಡಿಗಳನ್ನು ಸ್ವಚ್ಚಗೊಳಿಸಿದರೆ ಜನರಿಗೆ ಸಮಸ್ಯೆ ಆಗುವುದಿಲ್ಲ. ನಿರ್ಲಕ್ಷ್ಯ ವಹಿಸಿದರೆ ಸಮಸ್ಯೆ ಅನುಭವಿಸುವುದು ಪಟ್ಟಣದ ನಿವಾಸಿಗಳೇ ಹೊರತು ಅಧಿಕಾರಿಗಳಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ವಿಷಯದಲ್ಲಿ ಗಂಭೀರವಾಗಿ ಚಿಂತನೆ ಮಾಡಲಿ.

ಸುರೇಶ ಅವಟೆ

ವಕೀಲ ಅಫಜಲ್ಪುರ