- ಚಿನ್ನ ನೀಡುವುದಾಗಿ ಹೇಳಿ ಹಣಪಡೆದು ವಂಚನೆ- ಕೋರ್ಟ್‌ಗೆ ಇ.ಡಿ. ಅಧಿಕಾರಿಗಳಿಂದ ಮಾಹಿತಿಸ್ಮಗ್ಲರ್‌ಗೆ ಸ್ಮಗ್ಲರ್ ವಂಚನೆ!
- ದುಬೈನಿಂದ ಚಿನ್ನ ಕಳ್ಳಸಾಗಣೆಗೂ ಮುನ್ನ ಆಫ್ರಿಕಾ ದೇಶಗಳಲ್ಲಿ ದಂಧೆ- ಉಗಾಂಡಾ, ಕೀನ್ಯಾದಿಂದ ಚಿನ್ನ ಕಳ್ಳಸಾಗಣೆಗೆ ರನ್ಯಾರಾವ್ ಪ್ರಯತ್ನ- ಆದರೆ ಹಣ ಪಡೆದು, ಚಿನ್ನ ನೀಡದೇ ಉಗಾಂಡಾ ವ್ಯಕ್ತಿಯಿಂದ ವಂಚನೆ
- ಬಳಿಕ ಕೀನ್ಯಾದಲ್ಲೂ ಇದೇ ರೀತಿ ವಂಚನೆಗೆ ಒಳಗಾಗಿದ್ದ ನಟಿ ರನ್ಯಾ- ಈ ಬಗ್ಗೆ ದೂರು ನೀಡಿದರೂ ಫಲ ಕೊಡದ ಹಿನ್ನೆಲೆಯಲ್ಲಿ ದುಬೈಗೆ ದಂಧೆ
- ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪಟ್ಟಿಯಲ್ಲಿ ಇ.ಡಿ. ಅಧಿಕಾರಿಗಳ ಮಾಹಿತಿ
===
ನವದೆಹಲಿ: ಕನ್ನಡದ ನಟಿ ರನ್ಯಾ ರಾವ್‌ರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಕಳೆದ ವರ್ಷ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ಆರೋಪದ ಮೇಲೆ ಬಂಧಿಸುವುದಕ್ಕಿಂತ ಸುಮಾರು 2 ವರ್ಷಗಳ ಮೊದಲು, ರನ್ಯಾ ಮತ್ತು ಆಕೆಯ ಸಹಚರ, ಉಗಾಂಡಾದ ಚಿನ್ನದ ಮಧ್ಯವರ್ತಿಯಿಂದ 2 ಕೋಟಿ ರು.ಗಿಂತ ಹೆಚ್ಚು ಮೊತ್ತದ ವಂಚನೆಗೆ ಒಳಗಾಗಿದ್ದರು ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.2025ರ ಮಾರ್ಚ್‌ನಲ್ಲಿ ರನ್ಯಾ ದುಬೈಯಿಂದ ಬೆಂಗಳೂರಿಗೆ ಮರಳುತ್ತಿದ್ದಾಗ ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ಬಂಧಿಸಲಾಗಿತ್ತು. ಈ ವೇಳೆ ದೇಹದಲ್ಲಿ ಬಚ್ಚಿಟ್ಟುಕೊಂಡು ಸಾಗಿಸುತ್ತಿದ್ದ 12.56 ಕೋಟಿ ರು. ಮೌಲ್ಯದ 14 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಕಳೆದ ತಿಂಗಳು ಆರೋಪಪಟ್ಟಿ ಸಲ್ಲಿಸಿದ್ದಾರೆ. ರನ್ಯಾ ಮತ್ತು ಆಕೆಯ ಸಹಚರ 2024ರ ಮಾರ್ಚ್‌ನಿಂದ 2025ರ ಮಾರ್ಚ್‌ವರೆಗೆ 102.55 ಕೋಟಿ ರು. ಮೌಲ್ಯದ 127.28 ಕೆಜಿ ಚಿನ್ನವನ್ನು ಭಾರತಕ್ಕೆ ಕಳ್ಳಸಾಗಣೆ ಮಾಡಿದ್ದರು ಎಂದು ಉಲ್ಲೇಖಿಸಲಾಗಿದೆ. ಅದರ ಜೊತೆಗೆ ದುಬೈ ಜಾಲಕ್ಕೂ ಮುನ್ನ, ಉಗಾಂಡಾ ಸೇರಿದಂತೆ ಆಫ್ರಿಕಾ ದೇಶಗಳಿಂದಲೂ ಕಳ್ಳಸಾಗಣೆಗೆ ಯತ್ನಿಸಿ ವಂಚನೆಗೆ ಒಳಗಾದ ಬಗ್ಗೆ ಪ್ರಸ್ತಾಪಿಸಿದ್ದಾರೆ.₹2 ಕೋಟಿ ವಂಚನೆ:ರನ್ಯಾ ಮತ್ತು ಆಕೆಯ ಸಹಚರ ತರುಣ್ ಕೊಂಡೂರು ರಾಜು ದುಬೈಯಿಂದ ಚಿನ್ನ ಕಳ್ಳಸಾಗಣೆ ಮಾಡುವ ಮೊದಲು ಆಫ್ರಿಕಾ ದೇಶಗಳಾದ ಉಗಾಂಡಾ, ಕೀನ್ಯಾ ಮತ್ತು ತಾಂಜೇನಿಯಾದಿಂದ ನೇರವಾಗಿ ಚಿನ್ನ ಖರೀದಿಗೆ ಯತ್ನಿಸಿದ್ದರು. ಇದಕ್ಕಾಗಿ 2023ರಲ್ಲಿ ದುಬೈಯಲ್ಲಿ ‘ವೀರಾ ಡೈಮಂಡ್ಸ್ ಟ್ರೇಡಿಂಗ್ ಎಲ್ಎಲ್‌ಸಿ’ ಎಂಬ ಕಂಪನಿ ತೆರೆದಿದ್ದರು. ದುಬೈ ಅನ್ನು ವ್ಯಾಪಾರ ಮತ್ತು ಟ್ರಾನ್ಸಿಟ್ ಹಬ್ ಆಗಿ ಬಳಸುವ ಯೋಜನೆಯಾಗಿತ್ತು. ಆಫ್ರಿಕನ್ ಗಣಿಗಳೇ ದುಬೈ ಮಾರುಕಟ್ಟೆಗೆ ಚಿನ್ನದ ಪ್ರಮುಖ ಮೂಲ ಎಂದು ತಿಳಿದ ನಂತರ ನೇರವಾಗಿ ಆಫ್ರಿಕಾದಿಂದ ಖರೀದಿಸಲು ಪ್ರಯತ್ನಿಸಿದ್ದರು ಎಂದು ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ.
ರನ್ಯಾ ಮತ್ತು ತರುಣ್, ಉಗಾಂಡಾದ ಏಜೆಂಟ್ ಬೆನ್ ಎಂಬಾತನನ್ನು ಸಂಪರ್ಕಿಸಿದ್ದರು. ಈ ವೇಳೆ ಮೊದಲಿಗೆ 5 ಕೆಜಿ ಚಿನ್ನ ಖರಿದಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ನಂತರ 50 ಕೆಜಿ ಚಿನ್ನದ ದೊಡ್ಡ ಒಪ್ಪಂದಕ್ಕೆ ಯೋಜಿಸಿದ್ದರು. ಅದರಂತೆ ಮೊದಲು ಬೆನ್‌ಗೆ 23.5 ಲಕ್ಷ ರು. ಮುಂಗಡ ಪಾವತಿಸಿದ್ದರು. ನಂತರ 2 ಬಾರಿ ತಲಾ 9.4 ಲಕ್ಷ ರು. ನೀಡಿದ್ದರು. ಆದರೆ ಏಜೆಂಟ್ ಚಿನ್ನ ನೀಡದೇ ವಂಚಿಸಿದ್ದ. ಈ ಹಿನ್ನೆಲೆಯಲ್ಲಿ ತರುಣ್, ಉಗಾಂಡಾದ ರಾಜಧಾನಿ ಕಂಪಾಲಾಕ್ಕೆ ಭೇಟಿ ನೀಡಿದ್ದ. ಅಲ್ಲಿ ಏಜೆಂಟ್ ಚಿನ್ನವನ್ನು ತೋರಿಸಿ, ಅದನ್ನು ನೀಡಲು ಹೆಚ್ಚುವರಿ 1.7 ರು. ಕೋಟಿ ಪಾವತಿಸುವಂತೆ ಕೇಳಿದ. ರನ್ಯಾ ಹಣದ ವ್ಯವಸ್ಥೆ ಮಾಡಿದ್ದಳು. ಹೀಗೆ ಒಟ್ಟಾರೆ 2 ಕೋಟಿ ರು.ಗಿಂತ ಹೆಚ್ಚು ವಂಚನೆಗೆ ಒಳಗಾದರು ಎಂದು ತಿಳಿದುಬಂದಿದೆ.ಕೀನ್ಯಾದಲ್ಲೂ ವ್ಯವಹಾರಕ್ಕೆ ಯತ್ನ:
ಉಗಾಂಡಾದಲ್ಲಿ ಮೋಸಕ್ಕೊಳಗಾದ ನಂತರ ರನ್ಯಾ ಮತ್ತು ತರುಣ್ ಕೀನ್ಯಾದಲ್ಲೂ ಇದೇ ರೀತಿಯ ವ್ಯವಹಾರಕ್ಕೆ ಪ್ರಯತ್ನಿಸಿದ್ದರು. ಅದೂ ವಿಫಲವಾಯಿತು. ಕೀನ್ಯಾ ಅಧಿಕಾರಿಗಳ ಸಹಾಯ ಕೋರಿದರೂ ಯಾವುದೇ ಪರಿಹಾರ ಸಿಗಲಿಲ್ಲ. ಆಗ ಆಫ್ರಿಕಾದಿಂದ ನೇರ ಖರೀದಿಯನ್ನು ಬಿಟ್ಟುಬಿಟ್ಟರು. ನಂತರ ದುಬೈಯ ದೇರಾ ಗೋಲ್ಡ್ ಸೌಕ್‌ನಲ್ಲಿರುವ ಆಫ್ರಿಕನ್ ಮೂಲದ ಚಿನ್ನದ ವ್ಯಾಪಾರಿಗಳಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಚಿನ್ನ ಖರೀದಿಸಲು ಆರಂಭಿಸಿದರು. ಈ ವ್ಯಾಪಾರಿಗಳು ನಗದು ಪಾವತಿಯನ್ನು ಮಾತ್ರ ಒಪ್ಪಿಕೊಳ್ಳುತ್ತಿದ್ದರು, ಬ್ಯಾಂಕ್ ಟ್ರಾನ್ಸ್‌ಫರ್ ನಿರಾಕರಿಸುತ್ತಿದ್ದರು ಎಂದು ತಿಳಿದುಬಂದಿದೆ.ಇ.ಡಿ. ಅಧಿಕಾರಿಗಳು ವಾಟ್ಸಾಪ್ ಚಾಟ್‌ಗಳನ್ನು ವಶಪಡಿಸಿಕೊಂಡಿದ್ದು, ಹಣ ಪಾವತಿಯ ದಾಖಲೆಗಳನ್ನು ಪತ್ತೆ ಮಾಡಿದ್ದಾರೆ. ಆದರೆ ಮೋಸಕ್ಕೊಳಗಾದ ವಿಚಾರಕ್ಕೆ ಸಂಬಂಧಿಸಿದಂತೆ ಪೂರ್ಣ ಪುರಾವೆ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.