ಸಾರಾಂಶ
ಗಂಗಾವತಿ ಸುಕೋ ಬ್ಯಾಂಕ್‌ನ ದರೋಡೆ ಪ್ರಕರಣದ 3ನೇ ಅರೋಪಿ
ಉತ್ತರ ಪ್ರದೇಶದಲ್ಲಿ ಕೃತ್ಯವೊಂದರಲ್ಲಿ ಸೈಲು ಸೇರಿದ್ದ ಆರೋಪಿ ವಶಕ್ಕೆಕನ್ನಡಪ್ರಭ ವಾರ್ತೆ ಗಂಗಾವತಿ
14 ವರ್ಷಗಳ ಹಿಂದೆ ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಉತ್ತರ ಪ್ರದೇಶದಲ್ಲಿ ಪತ್ತೆ ಹಚ್ಚಿ ತಮ್ಮ ವಶಕ್ಕೆ ಪಡೆದಿದ್ದಾರೆ.ನಗರದಲ್ಲಿ 2009ರಲ್ಲಿ ಸುಕೋ ಬ್ಯಾಂಕ್ ದರೋಡೆ ಪ್ರಕರಣದ 3ನೇ ಆರೋಪಿ ಉತ್ತರ ಪ್ರದೇಶದ ಅಬೀದಖಾನ್ ಅಲಿಯಾಸ್ ಸಲ್ಮಾನಖಾನ್ನನ್ನು ಬಂಧಿಸಿ ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ ಇಡಲಾಗಿತ್ತು. 2010ರಲ್ಲಿ ಆತ ತಪ್ಪಿಸಿಕೊಂಡು ಪರಾರಿಯಾಗಿದ್ದು, ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಪಾದಿತನ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು.
ಆರೋಪಿ ಉತ್ತರ ಪ್ರದೇಶದ ಭದ್ವೀ ಪೊಲೀಸ್ ಠಾಣೆಯ ಪ್ರಕರಣ ಒಂದರಲ್ಲಿ ಬಂಧನಕ್ಕೊಳಗಾಗಿ ರಾಯಬರೇಲಿಯ ಜಿಲ್ಲಾ ಕಾರಾಗೃಹದಲ್ಲಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ತೆರಳಿ ಬಾಡಿ ವಾರಂಟ್ ಪಡೆದು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಗಂಗಾವತಿಗೆ ಕರೆದುಕೊಂಡು ಬಂದಿದ್ದಾರೆ.14 ವರ್ಷಗಳ ಹಿಂದೆ ಜೈಲಿನಿಂದ ಪರಾರಿಯಾಗಿದ್ದ ಆರೋಪಿಯ ಪತ್ತೆ ಹಚ್ಚಿದ ತಂಡದಲ್ಲಿದ್ದ ಪೊಲೀಸರಿಗೆ ಎಸ್ಪಿ ಬಹುಮಾನ ಘೋಷಣೆ ಮಾಡಿದ್ದಾರೆ.
ಹಿರೇಮನ್ನಾಪೂರ ಕೊಲೆ ಪ್ರಕರಣ, ಇಬ್ಬರ ಬಂಧನ:ಕುಷ್ಟಗಿ ತಾಲೂಕಿನ ಹಿರೇಮನ್ನಾಪೂರ ಗ್ರಾಮದಲ್ಲಿ ಯುವಕನನ್ನು ಕೊಲೆ ಮಾಡಿ ಸುಟ್ಟು ಪರಾರಿಯಾಗಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಸೆ. 30ರಂದು ತಾಲೂಕಿನ ಹಿರೇಮನ್ನಾಪೂರ ಗ್ರಾಮದ ಶರಣಪ್ಪ ಮಸ್ಕಿ ಎಂಬ ಯುವಕನನ್ನು ಮನೆಯಲ್ಲಿಯೇ ಕೊಲೆ ಮಾಡಿ ಬೆಂಕಿ ಹಚ್ಚಿ ಹೋದ ಘಟನೆ ನಡೆದಿತ್ತು. ತಂದೆ ಶಿವಪ್ಪ ಮಸ್ಕಿ ನೀಡಿದ ದೂರಿನನ್ವಯ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿತ್ತು.ಸೂಕ್ತ ಮಾಹಿತಿ ಸಂಗ್ರಹಿಸಿದ ಪೊಲೀಸರು ಕೊಲೆಗೈದ ಆರೋಪಿಗಳಾದ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಕೋಡ ಗ್ರಾಮದ ಭಾಗ್ಯಶ್ರೀ ಹನುಮಂತ ಡೋಣಿ ಹಾಗೂ ಇಬ್ರಾಹಿಂ ದರಸಾಬ ಎಲಿಗಾರ ಅವರನ್ನು ಅ. 6ರಂದು ಪತ್ತೆಮಾಡಿ ವಿಚಾರಣೆಗೊಳಪಡಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಕೊಲೆಗೈದ ಇಬ್ಬರನ್ನು ಹಾಗೂ ಕೃತ್ಯಕ್ಕೆ ಬಳಸಲಾಗಿದ್ದ ಮೋಟರ್ ಸೈಕಲ್, ಮೊಬೈಲ್ ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಪಾದಿತರ ಪತ್ತೆಗೆ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹೇಮಂತಕುಮಾರ, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ, ಸಿಪಿಐ ಯಶವಂತ ಬಿಸನಳ್ಳಿ, ಪಿಎಸ್‌ಐ ಹನುಮಂತಪ್ಪ ತಳವಾರ, ಎಎಸ್ಐ ದುರಗಪ್ಪ, ಶ್ರೀಧರ, ಅಮರೇಶ, ಸಂಗಮೇಶ, ಪರಶುರಾಮ, ಪ್ರಸಾದ, ಮಂಜುನಾಥ ಅವರನ್ನೊಳಗೊಂಡ ವಿಶೇಷ ತಂಡ ರಚನೆ ಮಾಡಲಾಗಿತ್ತು.
ಕೊಲೆ ಪ್ರಕರಣವನ್ನು ಭೇದಿಸಿದ ಈ ತಂಡಕ್ಕೆ ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.