ಕೋರ್ಟ್‌ ಆದೇಶದ 2 ದಿನ ಬಳಿಕ ಎಫ್‌ಐಆರ್‌ ದಾಖಲು ಮುಡಾ : ಸಿದ್ದರಾಮಯ್ಯ ಆರೋಪಿ ನಂ.1

| Published : Sep 28 2024, 01:22 AM IST / Updated: Sep 28 2024, 05:44 AM IST

Siddaramaiah
ಕೋರ್ಟ್‌ ಆದೇಶದ 2 ದಿನ ಬಳಿಕ ಎಫ್‌ಐಆರ್‌ ದಾಖಲು ಮುಡಾ : ಸಿದ್ದರಾಮಯ್ಯ ಆರೋಪಿ ನಂ.1
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ನೀಡಿದ 2 ದಿನಗಳ ಬಳಿಕ ಮೇರೆಗೆ ಲೋಕಾಯುಕ್ತ ಮೈಸೂರು ಠಾಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಶುಕ್ರವಾರ ಎಫ್ಐಆರ್ ದಾಖಲಿಸಲಾಗಿದೆ.

 ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ನೀಡಿದ 2 ದಿನಗಳ ಬಳಿಕ ಮೇರೆಗೆ ಲೋಕಾಯುಕ್ತ ಮೈಸೂರು ಠಾಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಶುಕ್ರವಾರ ಎಫ್ಐಆರ್ ದಾಖಲಿಸಲಾಗಿದೆ.

ಲೋಕಾಯುಕ್ತ ಮೈಸೂರು ಠಾಣೆಯ ಕೇಸ್ ನಂಬರ್ 11/2024 ಅಡಿ ಎಫ್ಐಆರ್ ದಾಖಲಾಗಿದೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಆರೋಪಿ (ಎ1) ಆಗಿದ್ದಾರೆ. ಎ2 ಆಗಿ ಸಿಎಂ ಪತ್ನಿ ಬಿ.ಎಂ.ಪಾರ್ವತಿ, ಎ3 ಆಗಿ ಸಿಎಂ ಸಿದ್ದರಾಮಯ್ಯ ಭಾವಮೈದುನ ಮಲ್ಲಿಕಾರ್ಜುನಸ್ವಾಮಿ, ಎ4 ಆಗಿ ಭೂಮಿ ಮಾರಾಟ ಮಾಡಿದ ಜೆ.ದೇವರಾಜು ಆರೋಪಿ ಆಗಿದ್ದಾರೆ.

ನಾಲ್ಕು ಮಂದಿಯ ವಿರುದ್ಧ ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ ಅವರು ಎಫ್ಐಆರ್ ದಾಖಲಿಸಿದ್ದಾರೆ. ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ದೂರಿನ ಅನ್ವಯ ಎಫ್ಐಆರ್ ದಾಖಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ನ್ಯಾಯಾಲಯ ಸೂಚಿಸಿತ್ತು.

ಅದರಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಮೈಸೂರು ತಾಲೂಕು ಕೆಸರೆ ಗ್ರಾಮದ ಸರ್ವೇ ನಂ.462, 464 ಸಂಬಂಧ ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಭಾರತೀಯ ದಂಡ ಸಂಹಿತೆ ಕಲಂ 120ಬಿ (ಕ್ರಿಮಿನಲ್‌ ಸಂಚು), 166 (ಸಾರ್ವಜನಿಕ ಸೇವಕರಿಂದ ಕಾನೂನು ಉಲ್ಲಂಘನೆ), 403 (ಅವ್ಯವಹಾರ), 406 (ಕ್ರಿಮಿನಲ್‌ ನಂಬಿಕೆ ದ್ರೋಹ), 420 (ವಂಚನೆ), 426 (ಹಾನಿ), 465 (ಫೋರ್ಜರಿ), 468 (ವಂಚನೆ ಉದ್ದೇಶದ ಫೋರ್ಜರಿ), 340, 351, ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ 1988ರ ಕಲಂ 9, 13, ಬೇನಾಮಿ ಆಸ್ತಿ ವಹಿವಾಟು ತಡೆ ಕಾಯಿದೆ 1988ರ ಕಲಂ 3, 53 ಮತ್ತು 54 ಹಾಗೂ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯಿದೆ 2011ರ ಕಲಂ 3 ಮತ್ತು 4 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 ಮುಡಾ ನಿವೇಶನ ವಿವಾದದ ಹಿನ್ನೆಲೆ:

ವಿವಾದದ ಕೇಂದ್ರ ಬಿಂದು: ಕೆಸರೆ ಗ್ರಾಮದ ಸರ್ವೇ ನಂ.462ನಲ್ಲಿ 3.16 ಎಕರೆ ಜಮೀನು.

1992 - ಮುಡಾದಿಂದ ಜಮೀನು ವಶ ಪ್ರಕ್ರಿಯೆ ಆರಂಭ.

1997- ಜಮೀನನ್ನು ಸ್ವಾಧೀನಕ್ಕೆ ಪಡೆದು ವಶಪಡಿಸಿಕೊಂಡ ಮುಡಾ.

1998- ಭೂಸ್ವಾಧೀನ ಪ್ರಕ್ರಿಯೆ ಕೈ ಬಿಟ್ಟ ಮುಡಾ.

2003- ಮೂಲ ಖಾತೆದಾರನ ಹೆಸರಿಗೆ ಜಮೀನು.

2004- ಜಮೀನು ಖರೀದಿ‌ ಮಾಡಿದ ಸಿದ್ದರಾಮಯ್ಯ ಪತ್ನಿ ಪಾರ್ವತಿ ಸಹೋದರ ಮಲ್ಲಿಕಾರ್ಜುನ ಸ್ವಾಮಿ.

2005- ಕೃಷಿ ಭೂಮಿಯಿಂದ ವಸತಿ ಉದ್ದೇಶಕ್ಕೆ ಭೂಪರಿವರ್ತನೆ.

2010- ಮಲ್ಲಿಕಾರ್ಜುನ ಸ್ವಾಮಿಯಿಂದ ಸಿದ್ದರಾಮಯ್ಯ ಪತ್ನಿಗೆ ದಾನದ ಮೂಲಕ ಜಮೀನು.

2014- ನಮ್ಮ ಜಮೀನು ಮುಡಾ ಬಳಸಿಕೊಂಡಿದೆ ಎಂದು ಪಾರ್ವತಿಯಿಂದ ಮುಡಾಗೆ ದೂರು.

2014- ಮೊದಲ ಬಾರಿಗೆ ಮುಡಾ ಸಭೆಯಲ್ಲಿ ಈ ವಿಚಾರ ಮಂಡನೆ.

2017- 15 ದಿನದ ತನಿಖೆ ನಡೆಸಿ‌ ಪರಿಹಾರದ ಭೂಮಿ ನೀಡಲು ‌ನಿರ್ಧಾರ.

2018- ಈ ‌ಬಗ್ಗೆ ಪ್ರಕ್ರಿಯೆ ಆರಂಭ, 2018ರಲ್ಲಿ ಪ್ರಕ್ರಿಯೆ ಪೂರ್ಣ.

2020- ವಿಜಯನಗರ ಮೂರನೇ ಹಂತದಲ್ಲಿ ಬದಲಿ‌ ನಿವೇಶನ ನೀಡಲು ತೀರ್ಮಾನ.

2021- ಪಾರ್ವತಿ ಅವರಿಗೆ ಬದಲಿ‌14 ನಿವೇಶನ ಹಂಚಿಕೆ ಮಾಡಿ ಹಕ್ಕು ಪತ್ರ.