ಸಾರಾಂಶ
ಸಾಮರಸ್ಯವಿಲ್ಲದೆ 23 ವರ್ಷಗಳಿಂದ ಸ್ಥಗಿತಗೊಂಡಿದ್ದ ಬಿಸಿಲು ಮಾರಮ್ಮನ ಹಬ್ಬ ಸರ್ವಜನಾಂಗದ ಸಮ್ಮತಿಯೊಂದಿಗೆ ಸೋಮವಾರ ಪುನರಾರಂಭಗೊಂಡಿತು.
ಕನ್ನಡಪ್ರಭ ವಾರ್ತೆ ಹನೂರು
ಸಾಮರಸ್ಯವಿಲ್ಲದೆ 23 ವರ್ಷಗಳಿಂದ ಸ್ಥಗಿತಗೊಂಡಿದ್ದ ಬಿಸಿಲು ಮಾರಮ್ಮನ ಹಬ್ಬ ಸರ್ವಜನಾಂಗದ ಸಮ್ಮತಿಯೊಂದಿಗೆ ಸೋಮವಾರ ಪುನರಾರಂಭಗೊಂಡಿತು.ಹನೂರು ಸಮೀಪದ ಉದ್ದನೂರು ಗ್ರಾಮದೇವತೆ ಬಿಸಿಲು ಮಾರಮ್ಮ ಜಡೆಸ್ವಾಮಿ ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವ ಹಬ್ಬ ಸೋಮವಾರ ವಿಧಿ ವಿಧಾನದಂತೆ ಆರಂಭವಾಯಿತು. ಗುರುವಾರದವರೆಗೆ ಸಾಂಪ್ರದಾಯದಂತೆ ಕೋಮು ಸೌಹಾರ್ಧತೆಯಿಂದ ಹಬ್ಬ ನಡೆಯಲಿದೆ. ಕಳೆದ 23 ವರ್ಷಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ಸ್ಥಗಿತಗೊಂಡಿದ್ದು, ಇತ್ತೀಚೆಗೆ ಗ್ರಾಮದಲ್ಲಿ ಸಾಮರಸ್ಯದಿಂದ ಹಬ್ಬ ಆಚರಿಸಲು ಹಿರಿಯರು ತೀರ್ಮಾನ ಕೈಗೊಂಡಿದ್ದರು.
23 ವರ್ಷಗಳ ನಂತರ ಹಬ್ಬ ಆಚರಿಸಲು ಗ್ರಾಮದಲ್ಲಿ ಹಬ್ಬಕ್ಕೆ ವಾರದ ಮುನ್ನ ತಿಪ್ಪುರಪ್ಪ ಕುಟುಂಬದ ವಂಶಸ್ಥರು ಬಿಸಿಲು ಮಾರಮ್ಮನ ದೇವಾಲಯದ ಮುಂಭಾಗ ಕಂಬ ನೆಡಲು ಉಪವಾಸವಿದ್ದು ಸಾಂಪ್ರದಾಯ ಕಟ್ಟುಪಾಡಿನೊಂದಿಗೆ ಕಂಬ ನೆಡುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು.ಜಾಗರ ಸಮರ್ಪಣೆ:
ಸಮುದಾಯದ ಹೆಣ್ಣು ಮಕ್ಕಳಿಂದ ದೇವಾಲಯಕ್ಕೆ ಜಾಗರ ಸಮರ್ಪಣೆ ಮಾಡಲಾಯಿತು. ಮಂಗಳವಾರ ತಂಪು ಜ್ಯೋತಿ ಹಾಗೂ ಗ್ರಾಮಸ್ಥರು ಸರ್ವ ಸಮ್ಮತದೊಂದಿಗೆ ನಡೆಯುತ್ತಿರುವ ಕೊಂಡೋತ್ಸವಕ್ಕೆ ಅರಣ್ಯ ಇಲಾಖೆಯ ಅನುಮತಿ ಪಡೆದು ಒಣ ಸೌದೆಯನ್ನು ಸಂಗ್ರಹಿಸಿ ಗ್ರಾಮದಲ್ಲಿ 35 ಅಡಿ ಉದ್ದ ಹಾಗೂ ಎರಡುವರೆ ಅಡಿ ಅಗಲ ಕೊಂಡದ ಗುಳಿಯನ್ನು ಸಿದ್ಧಪಡಿಸಲಾಗಿದೆ. ರುದ್ರಪ್ಪ ಕುಟುಂಬದವರು ಕೊಂಡೋತ್ಸವಕ್ಕೆ ಅಗ್ನಿ ಸ್ಪರ್ಶ ಮಾಡಲಿದ್ದಾರೆ. ಸಾಂಪ್ರದಾಯದಂತೆ ಆರಾಧ್ಯ ಕುಟುಂಬದವರು ಮೊದಲು ಕೊಂಡಾಯುವ ಮೂಲಕ ವೀರಭದ್ರ ಸ್ವಾಮಿ ಹಲಗೆ ಕಟ್ಟಿಕೊಂಡು ಕೊಂಡ ಹಾಯುವ ಸಂಪ್ರದಾಯ ವಿಜೃಂಭಣೆಯಿಂದ ನಡೆಯಲಿದೆ. ಗುರುವಾರ ದೇವಾಲಯದ ಮುಂಭಾಗ ಇರುವ ಕಂಬದಲ್ಲಿ ಅಗ್ನಿ ಎತ್ತುವ ಮೂಲಕ ಸರ್ವಧರ್ಮ ಯಜಮಾನರ ಸಮ್ಮುಖದಲ್ಲಿ ಮಳೆ ಬೆಳೆ ಬಗ್ಗೆ ಬಿಸಿಲು ಮಾರಮ್ಮನಿಂದ ವಾಗ್ದಾನ ಭಕ್ತರಿಗೆ ಸಿಗಲಿದೆ. ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯುವ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ. ಬಿಸಿಲು ಮಾರಮ್ಮನ ಜಾತ್ರೆಗೆ ಗ್ರಾಮದಲ್ಲಿ ತಳಿರು ತೋರಣಗಳೊಂದಿಗೆ ಸಿಂಗರಿಸಲಾಗಿದೆ.ಕಳೆದ 23 ವರ್ಷಗಳಿಂದ ಗ್ರಾಮದಲ್ಲಿ ಸಾಮರಸ್ಯವಿಲ್ಲದೆ ಬಿಸಿಲು ಮಾರಮ್ಮನ ಹಬ್ಬ ಸ್ಥಗಿತಗೊಂಡಿತ್ತು. ಈಗ ಗ್ರಾಮದಲ್ಲಿ ಸರ್ವ ಜನಾಂಗದ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ತೀರ್ಮಾನದಂತೆ ಸಾಂಪ್ರದಾಯ ಬದ್ಧವಾಗಿ ಹಬ್ಬವನ್ನು ಆಚರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಹೀಗಾಗಿ ನಾಲ್ಕು ದಿನಗಳು ಹಬ್ಬ ಆಚರಿಸಲಾಗುವುದು.- ಸದಾಶಿವಮೂರ್ತಿ, ಗ್ರಾಮದ ಉದ್ದನೂರು ಮುಖಂಡ