7 ವರ್ಷಗಳ ನಂತರ ಮತ್ತೆ ಉಕ್ಕಿ ಹರಿಯುತ್ತಿರುವ ಬಾವಿ ನೀರು!

| Published : Apr 09 2024, 12:46 AM IST

7 ವರ್ಷಗಳ ನಂತರ ಮತ್ತೆ ಉಕ್ಕಿ ಹರಿಯುತ್ತಿರುವ ಬಾವಿ ನೀರು!
Share this Article
  • FB
  • TW
  • Linkdin
  • Email

ಸಾರಾಂಶ

2017ರಲ್ಲಿ ಈ ಬಾಗದಲ್ಲಿ ಲಘು ಭೂಕಂಪ ಸಂಭವಿಸಿತ್ತು, ಅದೇ ವರ್ಷ ಬೇಸಿಗೆಯಲ್ಲಿ ಇದೇ ರೀತಿಯಲ್ಲಿ ಬಾವಿಯಿಂದ ನೀರುಕ್ಕಿ ಹರಿದಿತ್ತು. ಆಗ ಭೂವಿಜ್ಞಾನಿಗಳು ಇಲ್ಲಿ ಭೇಟಿ ನೀಡಿ, ಭೂಕಂಪನದಿಂದಾಗಿ ಇಲ್ಲಿನ ಮುರಕಲ್ಲು (ಲ್ಯಾಟರೈಟ್) ಪದರಗಳು ಜರುಗಿ ಅದರ ನಡುವಿನಿಂದ ನೀರು ಒಸರಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದರು.

ಕನ್ನಡಪ್ರಭ ವಾರ್ತೆ ಪರ್ಕಳ

ಇಲ್ಲಿನ ಭವಾನಿಕಟ್ಟೆ ಗರಡಿ ಬಳಿಯ ಮನೆಯ ಬಾವಿಯಲ್ಲಿ ಈ ಸುಡು ಬೇಸಿಗೆ ಕಾಲದಲ್ಲಿಯೂ ನೀರು ಕಡಿಮೆಯಾಗದೇ ಉಕ್ಕಿ ಪಕ್ಕದ ತೋಡಿನಲ್ಲಿ ಹರಿಯುತ್ತಿದೆ. ಇದು ಅಚ್ಚರಿಗೆ ಕಾರಣವಾಗಿದೆ.

ಇಲ್ಲಿನ ಭವಾನಿಕಟ್ಟೆ ಪರಿಸರದ ಎಲ್ಲ ಮನೆಗಳ ಬಾವಿಗಳಲ್ಲಿ ಬೇಸಿಗೆಯಿಂದಾಗಿ ನೀರೊಣಗಿ ತಳ ಕಾಣುತ್ತಿದ್ದರೂ, ಸಂಜೀವ ೃ ನಾಯ್ಕ ಎಂಬವರ ಮನೆಯ ಬಾವಿಯಲ್ಲಿ ಈ ವರ್ಷ ನೀರು ಕಡಿಮೆಯಾಗಿಲ್ಲ. ಮಾತ್ರವಲ್ಲ, ಬಾವಿ ಕಟ್ಟೆಯ ತೂತಿನಿಂದ ನೀರು ಉಕ್ಕಿ ಹರಿದು ಪಕ್ಕದ ತೋಡಿನಲ್ಲಿಯೂ ಹರಿಯುತ್ತಿದೆ.

ಏಳು ವರ್ಷಗಳ ಹಿಂದೆಯೂ ಈ ಬಾವಿಯಲ್ಲಿ ಹೀಗೆ ನೀರು ಉಕ್ಕಿ ಹರಿದಿತ್ತು. ನಂತರ ವರ್ಷಗಳಲ್ಲಿ ಉಳಿದ ಬಾವಿಗಳಂತೆ ನೀರು ಕಡಿಮೆಯಾಗಿತ್ತು. ಆದರೆ ಈ ಬಾರಿ ಕಳೆದ ಮಳೆಗಾಲದ ನಂತರ ಈ ಬಾವಿಯ ನೀರಿನ ಮಟ್ಟ ಕಡಿಮೆಯಾಗಿಯೇ ಇಲ್ಲ.

ಈಗ ಈ ಬಾವಿಗೆ ಅಕ್ಕಪಕ್ಕದ ಮನೆಯವರು 3 ವಿದ್ಯುತ್ ಮತ್ತು 1 ಡಿಸೆಲ್ ಪಂಪುಗಳನ್ನು ಅಳ‍ವಡಿಸಿ ನಿತ್ಯವೂ ತೋಟಕ್ಕೆ ನೀರು ಹಾಯಿಸುತ್ತಾರೆ. ಆದರೂ ಕೂಡ ನೀರು ಕಡಿಮೆಯಾಗುತ್ತಿಲ್ಲ. ಮಾತ್ರವಲ್ಲ ಈ ಬಾವಿಯಿಂದಾಗಿ ನೆರೆಮನೆಯ 3-4 ಮನೆಯ ಬಾವಿಗಳಲ್ಲಿಯೂ ನೀರಿನ ಮಟ್ಟವೂ ಹೆಚ್ಚಾಗಿದೆ.

2017ರಲ್ಲಿ ಈ ಬಾಗದಲ್ಲಿ ಲಘು ಭೂಕಂಪ ಸಂಭವಿಸಿತ್ತು, ಅದೇ ವರ್ಷ ಬೇಸಿಗೆಯಲ್ಲಿ ಇದೇ ರೀತಿಯಲ್ಲಿ ಬಾವಿಯಿಂದ ನೀರುಕ್ಕಿ ಹರಿದಿತ್ತು. ಆಗ ಭೂವಿಜ್ಞಾನಿಗಳು ಇಲ್ಲಿ ಭೇಟಿ ನೀಡಿ, ಭೂಕಂಪನದಿಂದಾಗಿ ಇಲ್ಲಿನ ಮುರಕಲ್ಲು (ಲ್ಯಾಟರೈಟ್) ಪದರಗಳು ಜರುಗಿ ಅದರ ನಡುವಿನಿಂದ ನೀರು ಒಸರಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದರು ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ನೆನಪಿಸಿಕೊಂಡಿದ್ದಾರೆ.