ಸಾರಾಂಶ
ನಾನು ಅಂಜಲಿಯ ಕೊಲೆಯಾದ ವೇಳೆ ಸ್ಥಳಕ್ಕೆ ಬಂದಿಲ್ಲ ಎಂದು ಕೆಲವರು ಆರೋಪಿಸುತ್ತಿದ್ದಾರೆ. ನಾನು ಕೇವಲ ಪೋಟೋಗೆ ಪೋಸ್ ನೀಡಲು ಬರುವವನಲ್ಲ. ಸರ್ಕಾರಿ ಕೆಲಸಗಳಿದ್ದ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ.
ಹುಬ್ಬಳ್ಳಿ:
ಈಚೆಗೆ ಹತ್ಯೆಯಾದ ಅಂಜಲಿ ಅಂಬಿಗೇರ ಪ್ರಕರಣದಲ್ಲಿ ಯಾರ ಯಾರ ಹರಿಕಥೆ ಇದೆ ಎಂಬುದು ತನಿಖೆಯ ನಂತರ ಗೊತ್ತಾಗಲಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಕಿಡಿಕಾರಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾನಗರದಲ್ಲಿ ಕೆಲ ದಿನಗಳ ಅಂತರದಲ್ಲಿಯೇ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಯುವತಿಯರ ಹತ್ಯೆ ನಡೆದಿರುವುದು ತೀವ್ರ ಖಂಡನೀಯ. ಅವಳಿ ನಗರದಲ್ಲಿ ಡ್ರಗ್ಸ್ ಹಾವಳಿ ಸಂಪೂರ್ಣವಾಗಿ ನಿಯಂತ್ರಿಸುವಂತೆ ನಾನು ಮೊದಲಿನಿಂದಲೂ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ಕುರಿತು ಹಲವು ಬಾರಿ ಅಧಿಕಾರಿಗಳ ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆ ಸಹ ನೀಡಿದ್ದೇನೆ ಎಂದರು.
ನಾನು ಅಂಜಲಿಯ ಕೊಲೆಯಾದ ವೇಳೆ ಸ್ಥಳಕ್ಕೆ ಬಂದಿಲ್ಲ ಎಂದು ಕೆಲವರು ಆರೋಪಿಸುತ್ತಿದ್ದಾರೆ. ನಾನು ಕೇವಲ ಪೋಟೋಗೆ ಪೋಸ್ ನೀಡಲು ಬರುವವನಲ್ಲ. ಸರ್ಕಾರಿ ಕೆಲಸಗಳಿದ್ದ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಈಗಾಗಲೇ ತನಿಖೆ ನಡೆಯುತ್ತಿದೆ, ಎಲ್ಲವೂ ಸದ್ಯದಲ್ಲಿಯೆ ಹೊರ ಬರಲಿದೆ. ಸೋಮವಾರ ಗೃಹಸಚಿವ ಡಾ. ಜಿ. ಪರಮೇಶ್ವರ ಅವರು ಹುಬ್ಬಳ್ಳಿಗೆ ಆಗಮಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.