ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಬೆಲೆ ಏರಿಕೆ ಪರ್ವವೇ ಆರಂಭವಾಗಿದೆ-ಕರೂದಿ

| Published : Jan 04 2025, 12:30 AM IST

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಬೆಲೆ ಏರಿಕೆ ಪರ್ವವೇ ಆರಂಭವಾಗಿದೆ-ಕರೂದಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಬೆಲೆ ಏರಿಕೆ ಪರ್ವವೇ ಆರಂಭವಾಗಿದ್ದು, ರೈತರು, ನಾಗರಿಕರು ಕರ ಭಾರ, ಬೆಲೆ ಏರಿಕೆಯಿಂದ ಕುಸಿದು ಹೋಗಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಕೋಷ್ಟಗಳ ಸಹ ಸಂಯೋಜಕ ಭೋಜರಾಜ ಕರೂದಿ ವಿರುದ್ಧ ಹರಿಹಾಯ್ದರು.

ಹಾನಗಲ್ಲ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಬೆಲೆ ಏರಿಕೆ ಪರ್ವವೇ ಆರಂಭವಾಗಿದ್ದು, ರೈತರು, ನಾಗರಿಕರು ಕರ ಭಾರ, ಬೆಲೆ ಏರಿಕೆಯಿಂದ ಕುಸಿದು ಹೋಗಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಕೋಷ್ಟಗಳ ಸಹ ಸಂಯೋಜಕ ಭೋಜರಾಜ ಕರೂದಿ ವಿರುದ್ಧ ಹರಿಹಾಯ್ದರು.ಶುಕ್ರವಾರ ಹಾನಗಲ್ಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಂಚ ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಅವುಗಳಿಗೆ ಹಣ ಹೊಂದಿಸುವುದರಲ್ಲಿಯೇ ಕಾಲ ಕಳೆಯುತ್ತಿದ್ದು, ಅಭಿವೃದ್ಧಿ ಕಾರ್ಯಗಳು ಮರೀಚಿಕೆಯಾಗಿವೆ. ಸರಣಿ ಬೆಲೆ ಏರಿಕೆಯ ಸಾಲಿನಲ್ಲಿ ಈಗ ಬಸ್ ದರ ಏರಿಕೆಯ ಬಿಸಿ ಮತ್ತಷ್ಟು ಹೊರೆಗೆ ಕಾರಣವಾಗಿದೆ. ರೈತರ ಕೃಷಿ ಭೂಮಿಗೆ ಬೇಕಾಗುವ ತುಂತುರು ನೀರಾವರಿ, ಹನಿ ನೀರಾವರಿ, ಹೊಸ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಸೇರಿದಂತೆ ರೈತರಿಗೆ ಬೇಕಾಗುವ ಎಲ್ಲವೂ ಭಾರೀ ಬೆಲೆ ತೆತ್ತು ಪಡೆಯುವಂತಾಗಿದೆ. ರಾಜ್ಯ ಸರಕಾರ ಒಂದು ರೀತಿಯ ಹಗಲು ದರೋಡೆಗೆ ಮುಂದಾಗಿದೆ. ಬಾಂಡ್ ಪೇಪರ್‌ಗಳ ಬೆಲೆಯನ್ನು ಹಲವು ಪಟ್ಟು ಏರಿಕೆ ಮಾಡಿ ಸಾಮಾನ್ಯರು ಆರ್ಥಿಕ ಒತ್ತಡಕ್ಕೆ ಗುರಿಯಾಗಿದ್ದಾರೆ. ದಲಿತ ಸಮುದಾಯದ ಅಭಿವೃದ್ಧಿಗೆ ಇರಬೇಕಾದ ಹಣವನ್ನು ಹಗರಣಗಳ ಮೂಲಕ ಲೂಟಿ ಹೊಡೆದಿದ್ದಾರೆ. ರಾಜ್ಯದ ಜನತೆಗೆ ಕಾಂಗ್ರೇಸ್ ಸರಕಾರ ಬವಣೆಗಳ ಭಾಗ್ಯಗಳನ್ನು ನೀಡಿದೆ. ಗುತ್ತಿಗೆದಾರರು ಸರಕಾರದಿಂದ ಬರುವ ಹಣ ಕೈಗೆ ಸಿಗದೇ ಆತ್ಮಹತ್ಯೆಗೆ ಶರಣಾಗುತ್ತಿರುವುದು ಖೇದದ ಸಂಗತಿ. ಸರಕಾರಿ ನೌಕರರಿಗೆ ವೇತನ ನೀಡಲು ಸಹ ಸರಕಾರದಲ್ಲಿ ಹಣವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ನೀರಾವರಿ ಸೇರಿದಂತೆ ಯಾವುದೇ ಹೊಸ ಯೋಜನೆಗಳು ಬರುತ್ತಿಲ್ಲ. ಬೇಡ್ತಿ ವರದಾ ನದಿ ಜೋಡಣೆಗೆ ಆದ್ಯತೆ ನೀಡುತ್ತಿಲ್ಲ ಎಂದರು.ಹಾನಗಲ್ಲ ತಾಲೂಕಿನಲ್ಲಿ ಅಪರಾಧ ಕೃತ್ಯಗಳು ಹಾಡು ಹಗಲೇ ನಡೆಯುತ್ತಿದ್ದರೂ ಇವನ್ನು ತಡೆಯಲು ತಾಲೂಕು ಆಡಳಿತ ವಿಫಲವಾಗಿದೆ. ತಾಲೂಕಿನಲ್ಲಿಯ ಸರಕಾರಿ ಕಚೇರಿಗಳು ಭ್ರಷ್ಟಾಚಾರದ ಕೂಪಗಳಾಗಿವೆ. ಹಾನಗಲ್ಲ ಶಿರಸಿ ರಸ್ತೆ ಕಾಮಗಾರಿ ಸರಕಾರದ ಹಣ ಗುತ್ತಿಗೆದಾರರಿಗೆ ಸಂದಾಯವಾಗದೇ ಅರ್ಧಕ್ಕೆ ನಿಂತು ಸಾರ್ವಜನಿಕರ ಓಡಾಟ ದುರ್ಗಮವಾಗಿದೆ. ರಾಜ್ಯ ಹೆದ್ದಾರಿಯಲ್ಲಿ ವಾಹನ ಚಾಲನೆಗೆ ತೀರ ಸಂಕಷ್ಟ ಇದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ. ತಿಳವಳ್ಳಿ ಊರಲ್ಲೇ ಹಾದು ಹೋದ ಲೋಕೋಪಯೋಗಿ ಇಲಾಖೆ ರಸ್ತೆ ಕಾಮಗಾರಿ ನನೆಗುದಿಗೆ ಬಿದ್ದು ವರ್ಷಗಳೇ ಕಳೆದರೂ ಕೇಳುವವರಿಲ್ಲ. ರಸ್ತೆ ಪಕ್ಕದಲ್ಲಿನ ಬೇಲಿಗಳು ರಸ್ತೆಗೆ ಬಂದು ಸಂಚಾರಕ್ಕೆ ಸಂಚಕಾರ ತಂದಿವೆ. ಹಾನಗಲ್ಲ ಪಟ್ಟಣದಲ್ಲಿ ಅಂಗಡಿಗಳು ರಸ್ತೆಯಲ್ಲಿ ನಡೆಯುತ್ತಿರುವುದಕ್ಕೆ ಪುರಸಭೆ ನಿರ್ಲಕ್ಷ ಧೋರಣೆ ತಾಳಿದೆ. ಊರಿನ ಸ್ವಚ್ಛತೆಗೆ ಆದ್ಯತೆ ಇಲ್ಲದೆ ದುರ್ವಾಸನೆಗೆ ಜನ ಬೇಸತ್ತಿದ್ದಾರೆ. ಹಾನಗಲ್ಲ ತಾಲೂಕಿನಲ್ಲಿ ಪೊಲೀಸ ವ್ಯವಸ್ಥೆ ಕೂಡ ಜನಪರವಾಗಿಲ್ಲ. ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಜನರ ಸಂಕಷ್ಟ ಕೇಳಿ ಪರಿಹಾರ ನೀಡಬೇಕಾದ ಜನಪ್ರತಿನಿಧಿಗಳು ಸಾರ್ವಜನಿಕರಿಗೆ ಸಿಗುತ್ತಿಲ್ಲ. ಬಿಜೆಪಿ ಅನಿವಾರ್ಯವಾಗಿ ಈಗ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು.ಈಗ ಬಿಜೆಪಿಯಲ್ಲಿ ಪದಾಧಿಕಾರಿಗಳ ಹೊಸ ಆಯ್ಕೆಗೆ ಸಿದ್ಧತೆ ನಡೆದಿದೆ. ನಿಷ್ಕ್ರೀಯರನ್ನು ಬಿಟ್ಟು ಯುವಕರು, ಪೂರ್ಣ ಪ್ರಮಾಣದಲ್ಲಿ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ತೊಡಗುವವರನ್ನು ಪದಾಧಿಕಾರಿಗಳಾಗಿ ಆಯ್ಕೆ ಮಾಡುವ ಪ್ರಕ್ರಿಯೆಯೂ ನಡೆದಿದೆ ಎಂದು ಭೋಜರಾಜ ಕರೂದಿ ತಿಳಿಸಿದರು. ಸುದ್ದಿ ಗೋಷ್ಠಿಯಲ್ಲಿ ತಾಲುಕು ಯುವ ಮೋರ್ಚಾ ಅಧ್ಯಕ್ಷ ಅಮಿತ ಶಡಗರವಳ್ಳಿ, ಉಪಾಧ್ಯಕ್ಷ ಸೋಮನಗೌಡ ಪಾಟೀಲ ಇದ್ದರು.