ನಾಲ್ಕು ವರ್ಷದ ನಂತರ ತುಂಬಿ ಹರಿದ ಹಳ್ಳ-ಕೊಳ್ಳಗಳು

| Published : May 22 2024, 12:53 AM IST

ಸಾರಾಂಶ

ಸೋಮವಾರ ತಡರಾತ್ರಿ ಸುರಿದ ಮಳೆಗೆ ತಾಲೂಕಿನ ಹತ್ತಾರು ಹಳ್ಳಿಗಳ ಹಳ್ಳ-ಕೊಳ್ಳಗಳು ತುಂಬಿ ಹರಿದಿದ್ದು, ಭೂಮಿ ತಂಪಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಸಂತಸದಲ್ಲಿ ಚಿಕ್ಕಮಾದಿನಾಳ-ಮುಸಲಾಪೂರದ ರೈತರು । ಬಿತ್ತನೆಗೆ ಅನುಕೂಲ

ಎಂ. ಪ್ರಹ್ಲಾದ್

ಕನ್ನಡಪ್ರಭ ವಾರ್ತೆ ಕನಕಗಿರಿ

ಸೋಮವಾರ ತಡರಾತ್ರಿ ಸುರಿದ ಮಳೆಗೆ ತಾಲೂಕಿನ ಹತ್ತಾರು ಹಳ್ಳಿಗಳ ಹಳ್ಳ-ಕೊಳ್ಳಗಳು ತುಂಬಿ ಹರಿದಿದ್ದು, ಭೂಮಿ ತಂಪಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ತಾಲೂಕಿನ ಮಲೆನಾಡು ಪ್ರದೇಶವೆಂದೆ ಕರೆಯಲ್ಪಡುವ ರಾಮದುರ್ಗಾ, ಬೊಮ್ಮಸಾಗರ, ಓಬಳಬಂಡಿ, ಚಿಕ್ಕಮಾದಿನಾಳ, ಹಿರೇಮಾದಿನಾಳ, ಹುಡೇಜಾಲಿ ಹಾಗೂ ಗಂಗಾವತಿ ತಾಲೂಕಿನ ಆಗೋಲಿ, ಹಂಪಸದುರ್ಗಾ ಸಿಮಾದಲ್ಲಿ ತಡರಾತ್ರಿ ಒಂದುವರೆ ತಾಸು ಮಳೆಯಾಗಿದ್ದು, ಭೂಮಿ ತಂಪಾಗಿದ್ದಲ್ಲದೇ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.

ಜನ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಗ್ರಾಮಗಳಲ್ಲಿ ಇದೀಗ ಬೋರ್‌ವೆಲ್‌ಗಳಲ್ಲಿ ನೀರು ಬಂದಿದ್ದು, ಮಳೆರಾಯನ ಕೃಪೆಯಿಂದ ಕುಡಿಯುವ ನೀರಿನ ಸಮಸ್ಯೆ ನೀಗಿದಂತಾಗಿದೆ. ರಾಮದುರ್ಗಾ ಹಾಗೂ ಓಬಳಬಂಡಿಯ ಗುಡ್ಡದ ಪ್ರದೇಶದಲ್ಲಿ ಹುಟ್ಟಿಕೊಳ್ಳುವ ಹಳ್ಳವು ನಾಲ್ಕೈದು ವರ್ಷಗಳ ನಂತರ ತುಂಬಿ ಹರಿಯುತ್ತಿದ್ದು, ರೈತರು ಸಂತಸಗೊಂಡಿದ್ದಾರೆ.

ಮುಸಲಾಪೂರ ಹಾಗೂ ಚಿಕ್ಕಮಾದಿನಾಳ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರ ಹೊಲ, ತೋಟಗಳ ಒಡ್ಡುಗಳು ತುಂಬಿದ್ದು, ಹೆಚ್ಚುವರಿ ನೀರು ಹಳ್ಳ ಸೇರುತ್ತಿದೆ. ಮಳೆಯಿಂದ ಬಿತ್ತನೆಗೆ ಅನುಕೂಲವಾಗಿರುವುದು ಒಂದೆಡೆಯಾದರೆ ಮತ್ತೊಂದೆಡೆ ಕೃಷಿ ಚಟುವಟಿಕೆಗಳಿಗೆ ನೆರವಾಗಿದೆ ಎಂದು ರೈತರು ಖುಷಿ ಹಂಚಿಕೊಂಡಿದ್ದಾರೆ.

ಬಿತ್ತನೆ ಬೀಜಕ್ಕೆ ನೂಕುನುಗ್ಗಲು:

ತಾಲೂಕಿನಲ್ಲಿ ಶೇ.89ರಷ್ಟು ಮಳೆಯಾಗಿದ್ದು, ಕನಕಗಿರಿ, ಹುಲಿಹೈದರ ಹಾಗೂ ನವಲಿ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಖರೀದಿಗೆ ನೂಕುನುಗ್ಗಲು ಉಂಟಾಗಿರುವುದು ಕಂಡು ಬಂದಿದೆ. ಸದ್ಯ ತೊಗರಿ, ಹೆಸರು, ಸಜ್ಜೆ, ಮಕ್ಕೆಜೋಳ, ಸೂರ್ಯಕಾಂತಿ ಬೀಜವು ಕಳೆದ ವರ್ಷಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟವಾಗುತ್ತಿದೆ.ಹುಲಿಹೈದರದಲ್ಲಿ ಮನೆ ಕುಸಿತ:

ಹುಲಿಹೈದರ ಗ್ರಾಮದ ಶಂಕ್ರಪ್ಪ ಗೋಸಲಪ್ಪ ಗದ್ದಿ ಎಂಬವರಿಗೆ ಸೇರಿದ ಮನೆಯ ಗೋಡೆ ಕುಸಿದಿದ್ದು, ಲಕ್ಷಾಂತರ ರೂ. ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಹಾಲೇಶ ಭೇಟಿ ನೀಡಿ ಪರಿಶೀಲಿಸಿದ್ದು, ಪರಿಹಾರ ನೀಡುವ ಭರವಸೆ ನೀಡಿದ್ದಾರೆ.