ಇಡ್ಲಿಯ ಡೆಡ್ಲಿ ಪ್ಲಾಸ್ಟಿಕ್‌ ಆಯ್ತು, ಈಗ ಟ್ಯಾಟೂಗೆ ನಿಷೇಧದೇಟು? ದಿನೇಶ್ ಗುಂಡೂರಾವ್ ಒತ್ತಾಯ

| N/A | Published : Mar 01 2025, 02:04 AM IST / Updated: Mar 01 2025, 07:36 AM IST

ಸಾರಾಂಶ

ಟ್ಯಾಟೂ ಹಾಕುವ ಇಂಕ್​ನಿಂದ ಮಾರಣಾಂತಿಕ ಕಾಯಿಲೆ ಹಾಗೂ ಗಂಭೀರ ಚರ್ಮರೋಗ ಬರುವ ಸಾಧ್ಯತೆಯಿದೆ. ಹೀಗಾಗಿ ಕೇಂದ್ರ ಸರ್ಕಾರ ಇಂಕ್ ಅನ್ನು ನಿಷೇಧಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.

 ಬೆಂಗಳೂರು : ಟ್ಯಾಟೂ ಹಾಕುವ ಇಂಕ್​ನಿಂದ ಮಾರಣಾಂತಿಕ ಕಾಯಿಲೆ ಹಾಗೂ ಗಂಭೀರ ಚರ್ಮರೋಗ ಬರುವ ಸಾಧ್ಯತೆಯಿದೆ. ಹೀಗಾಗಿ ಕೇಂದ್ರ ಸರ್ಕಾರ ಇಂಕ್ ಅನ್ನು ನಿಷೇಧಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.

ಆಹಾರ ಸುರಕ್ಷತೆ ಮತ್ತು ಔಷಧ ಗುಣಮಟ್ಟದ ಕುರಿತಂತೆ ಇತ್ತೀಚಿನ ಬೆಳವಣಿಗೆಗಳ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಟ್ಯಾಟೂ ಇಂಕ್‌ಗೆ ಸಂಬಂಧಿಸಿದಂತೆ ಯಾವುದೇ ಗುಣಮಟ್ಟ ಮಾನದಂಡ ಇರುವುದಿಲ್ಲ. ಔಷಧ ಮತ್ತು ಕಾಂತಿವರ್ಧಕ ಅಧಿನಿಯಮಗಳ ವ್ಯಾಪ್ತಿಗೆ ಇದು ಒಳಪಟ್ಟಿಲ್ಲ. ಈ ಟ್ಯಾಟೂ ಇಂಕ್​ನಲ್ಲಿ ಇರುವ ರಾಸಾಯನಿಕ ಮತ್ತು ಇತರೆ ಅಂಶಗಳು ಚರ್ಮದ ಮೂಲಕ ದೇಹವನ್ನು ಪ್ರವೇಶಿಸುತ್ತವೆ. ಇದರಿಂದ ಅನೇಕ ಚರ್ಮ ರೋಗಗಳು ಉಲ್ಬಣಗೊಳ್ಳುವ ಸಾಧ್ಯತೆಗಳಿವೆ. ಈ ಕುರಿತಂತೆ ನಿಯಮಗಳನ್ನು ರೂಪಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ. ಟ್ಯಾಟೂ ಇಂಕ್ ಅನ್ನು ಕಾಂತಿ ವರ್ಧಕಗಳ ಅಡಿಯಲ್ಲಿ ತರಲು ಹಾಗೂ ಬಿಐಎಸ್ ಪ್ರಕಾರ ಮಾನದಂಡಗಳನ್ನು ರೂಪಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಇನ್ನು ಬಳ್ಳಾರಿಯಲ್ಲಿ ಬಾಣಂತಿಯರ ಸಾವಿಗೆ ಕಾರಣ ಎನ್ನಲಾಗಿದ್ದ ರಿಂಗರ್ ಲ್ಯಾಕ್ಟೇಟ್ ದ್ರಾವಣಕ್ಕೆ ಸಂಬಂಧಿಸಿದಂತೆ 246 ಬ್ಯಾಚ್‌ನ ಮಾದರಿಗಳಲ್ಲಿ 113 ಬಳಕೆಗೆ ಅರ್ಹವಲ್ಲವೆಂದು ಘೋಷಿತವಾಗಿದೆ. ಈ ಸಂಬಂಧ ತಯಾರಿಕಾ ಸಂಸ್ಥೆಯಾದ ಪಶ್ಚಿಮ್‌ ಬಂಗಾ ಫಾರ್ಮಾಸ್ಯುಟಿಕಲ್ಸ್ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ 9 ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಇನ್ನುಳಿದ 25 ಪ್ರಕರಣಗಳಲ್ಲಿ ಮೊಕದ್ದಮೆ ಹೂಡಲು ಅನುಮತಿ ನೀಡಲಾಗಿದ್ದು, ಮೊಕದ್ದಮೆ ಹೂಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ವಿವರಣೆ ನೀಡಿದರು.

ನಿಷೇಧಕ್ಕೆ ಏಕೆ ಬೇಡಿಕೆ?

- ಟ್ಯಾಟೂ ಇಂಕ್‌ನಲ್ಲಿರುವ ರಾಸಾಯನಿಕ ಚರ್ಮದ ಮೂಲಕ ದೇಹವನ್ನು ಪ್ರವೇಶಿಸುತ್ತದೆ

- ಇದರಿಂದ ಅನೇಕ ಚರ್ಮರೋಗ, ಮಾರಣಾಂತಿಕ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ

- ಈ ಕುರಿತ ನಿಯಮಗಳನ್ನು ರೂಪಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ: ಗುಂಡೂರಾವ್‌