ಈಗ ಬೆಳಗಾವಿಯಲ್ಲಿ ಭಗವಾ ಧ್ವಜ ತೆರವು ವಿವಾದ

| Published : Feb 05 2024, 01:46 AM IST / Updated: Feb 05 2024, 11:22 AM IST

Belagavi Falg Issue

ಸಾರಾಂಶ

ಮಂಡ್ಯ ಜಿಲ್ಲೆಯ ಕೆರಗೋಡು ಬಳಿಕ ಬೆಳಗಾವಿ ಜಿಲ್ಲೆಗೂ ಭಗವಾಧ್ವಜ ವಿವಾದ ಹಬ್ಬಿದ್ದು, ಚನ್ನಮ್ಮನ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿ ಭಗವಾಧ್ವಜ ತೆರವು ವಿರೋಧಿಸಿ ಹಿಂದುಪರ ಕಾರ್ಯಕರ್ತರು ಭಾನುವಾರ ಜಾಥಾ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಮಂಡ್ಯ ಜಿಲ್ಲೆಯ ಕೆರಗೋಡು ಬಳಿಕ ಬೆಳಗಾವಿ ಜಿಲ್ಲೆಗೂ ಭಗವಾಧ್ವಜ ವಿವಾದ ಹಬ್ಬಿದ್ದು, ಚನ್ನಮ್ಮನ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿ ಭಗವಾಧ್ವಜ ತೆರವು ವಿರೋಧಿಸಿ ಹಿಂದುಪರ ಕಾರ್ಯಕರ್ತರು ಭಾನುವಾರ ಜಾಥಾ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.

ತೆರವುಗೊಳಿಸಿದ್ದ ಜಾಗದಲ್ಲೇ ಭಗವಾಧ್ವಜ ಮರುಸ್ಥಾಪನೆಗೆ ಹೊರಟಿದ್ದ ಹಿಂದುಪರ ಕಾರ್ಯಕರ್ತರನ್ನು ಪೊಲೀಸರು ತಡೆದಾಗ, ಮಾತಿನ ಚಕಮಕಿ ನಡೆದಿದೆ. 

ಇದರಿಂದಾಗಿ ಪಟ್ಟಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಏರ್ಪಟ್ಟಿತ್ತು. ಬಳಿಕ, ಹಿಂದುಪರ ಕಾರ್ಯಕರ್ತರು ಭಗವಾಧ್ವಜ ಮರುಸ್ಥಾಪನೆಗೆ ಆಗ್ರಹಿಸಿ ಸ್ಥಳೀಯ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. 

ಘಟನೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.ಪಟ್ಟಣದ ಗಾಂಧಿ ನಗರದಲ್ಲಿರುವ ಮಸೀದಿಯ ವಿದ್ಯುತ್ ವೈರ್ ಹಾಗೂ ಅದರ ಸಮೀಪದ ಓಣಿಯ ಕ್ರಾಸ್‍ನಲ್ಲಿದ್ದ ಟಿಪ್ಪು ಸುಲ್ತಾನ್‌ ಭಾವಚಿತ್ರದ ಧ್ವಜ ಹರಿದು ಕೆಳಗೆ ಬಿದ್ದಿತ್ತು. 

ಜ.27ರಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಅಂದು ಪಟ್ಟಣದಲ್ಲಿ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. 

ಇದು ಕಿಡಿಗೇಡಿಗಳ ಕೃತ್ಯ ಇರಬಹುದೆಂದು ಶಂಕಿಸಿದ್ದ ಪೊಲೀಸರು, ಶಾಂತಿ ಸಭೆ ನಡೆಸಿ, ಪರಿಸ್ಥಿತಿ ತಿಳಿಗೊಳಿಸಿದ್ದರು. ಬಳಿಕ, ಪೊಲೀಸರ ತನಿಖೆ ವೇಳೆ ಇದು ವಾಹನವೊಂದು ತಾಗಿ ನಡೆದ ಘಟನೆ ಎಂದು ತಿಳಿದು ಬಂದಿತ್ತು.

ಈ ಮಧ್ಯೆ, ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿದ್ದ ಭಗವಾಧ್ವಜ ಮತ್ತು ಇಸ್ಲಾಮಿಕ್‌ ಹಸಿರು ಧ್ವಜಗಳನ್ನು ಪೊಲೀಸರು ತೆರವುಗೊಳಿಸಿದ್ದರು. 

ಈ ವೇಳೆ, ಪಟ್ಟಣದ ಸಂಬಣ್ಣವರ ಓಣಿಯಲ್ಲಿರುವ ಹಳೆ ಹನುಮಂತ ಮಂದಿರದ ಬಳಿಯ ಭಗವಾಧ್ವಜವನ್ನು ಕೂಡ ತೆರವುಗೊಳಿಸಲಾಗಿತ್ತು. ಇದು ಹಿಂದು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿತ್ತು. 

ಈ ಮಧ್ಯೆ, ಹನುಮಂತ ದೇವಸ್ಥಾನದ ಬಳಿ ಮತ್ತೆ ಭಗವಾಧ್ವಜ ಆರೋಹಣಕ್ಕೆ ಮುಂದಾದ ಹಿಂದುಪರ ಕಾರ್ಯಕರ್ತರು, ಭಾನುವಾರ ಬಸ್ ನಿಲ್ದಾಣದಿಂದ ಮೆರವಣಿಗೆಯಲ್ಲಿ ಆಗಮಿಸಿದರು. 

ಆದರೆ, ಪೊಲೀಸರು ಭಗವಾಧ್ವಜ ಆರೋಹಣಕ್ಕೆ ಅವಕಾಶ ನೀಡಲಿಲ್ಲ. ಈ ವೇಳೆ, ಮಾತಿನ ಚಕಮಕಿ ನಡೆದು, ಕೆಲಕಾಲ ಉದ್ವಿಗ್ನ ವಾತಾವರಣ ನೆಲೆಸಿತ್ತು. ಬಳಿಕ, ಹಿಂದುಪರ ಕಾರ್ಯಕರ್ತರು ಧ್ವಜಸ್ಥಾಪನೆಗೆ ಅವಕಾಶ ಕೋರಿ ಸ್ಥಳೀಯ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.

ಹನುಮಂತ ದೇವಸ್ಥಾನದ ಬಳಿ ಭಗವಾಧ್ವಜ ಮರುಸ್ಥಾಪನೆಗೆ ಅನುಮತಿ ನೀಡುವಂತೆ ಗ್ರಾಮಸ್ಥರು ಮನವಿ ನೀಡಿದ್ದಾರೆ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟಿ ತಿಳಿಸಿದರು.

ಧ್ವಜ ಮರುಸ್ಥಾಪನೆಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಸ್ಥಳೀಯ ಪಟ್ಟಣ ಪಂಚಾಯತಿ ಹಾಗೂ ಸರ್ಕಾರದ ಕ್ರಮದಂತೆ ನಡೆಯುತ್ತೇವೆ. ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ಪ್ರಚೋದಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.

ಎಂ.ಕೆ.ಹುಬ್ಬಳ್ಳಿಯಲ್ಲಿ ಕೋಮು ಗಲಭೆ ನಡೆದ ಉದಾಹರಣೆ ಇಲ್ಲವೇ ಇಲ್ಲ. ಅದನ್ನು ಕೆಣಕುವ ಪ್ರಯತ್ನ ಮಾಡಬಾರದು. ಕೆಲವರು ವಿನಾಕಾರಣ ಎಂ.ಕೆ.ಹುಬ್ಬಳ್ಳಿ ಚಲೋಗೆ ಕರೆ ನೀಡುತ್ತಿರುವುದು ಸರಿಯಲ್ಲ ಎಂದು ಶಾಸಕ  ಬಾಬಾಸಾಹೇಬ ಪಾಟೀಲ ತಿಳಿಸಿದರು.