ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪಟ್ಟಣದ ದೊಡ್ಡಹುಂಡಿ ಭೋಗಪ್ಪ ಸರ್ಕಾರಿ ಪ್ರೌಢಶಾಲೆಯ 2009- 10ನೇ ಸಾಲಿನ ವಿದ್ಯಾರ್ಥಿಗಳು ಒಂದೂವರೆ ದಶಕದ ಬಳಿಕ ಶಾಲಾ ಶಿಕ್ಷಕರಿಗೆ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಮೂಲಕ ಗೌರವ ಸಮರ್ಪಿಸುತ್ತಿರುವುದು ಶ್ಲಾಘನೀಯ ಎಂದು ನಿವೃತ್ತ ಉಪ ಪ್ರಾಂಶುಪಾಲ ಮುತ್ತುರಾಜ್ ಹೇಳಿದರು.

ಪಟ್ಟಣದ ದೊಡ್ಡಹುಂಡಿ ಭೋಗಪ್ಪ ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ 2009- 10ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಹಾಗೂ ಶಿಕ್ಷಕರ ನಡುವೆ ಅವಿನಾಭಾವ ಸಂಬಂಧವಿದೆ ಎಂದು ತಿಳಿಸಿದರು.

ಗುರು ಬ್ರಹ್ಮ, ಗುರು ವಿಷ್ಣು, ಗುರು ಮಹೇಶ್ವರ ಎಂದು ಗುರುಗಳನ್ನು ಗೌರವಿಸಲಾಗುತ್ತದೆ. ತಂದೆ- ತಾಯಿ ನಂತರ ಗುರುಗಳ ಸ್ಥಾನ ಮಹತ್ವದ್ದಾಗಿದೆ. ಯಾವುದೇ ಷರತ್ತು ಇಲ್ಲದೆ ಪ್ರೀತಿ ತೋರುವ ತಂದೆ- ತಾಯಿಯ ನಂತರದ ಸ್ಥಾನ ಗುರುವಿನದ್ದಾಗಿದೆ. ನಿಷ್ಕಲ್ಮಶ, ನಿಸ್ವಾರ್ಥ ಭಾವನೆಯಿಂದ ವಿದ್ಯಾರ್ಥಿಗಳನ್ನು ಸರಿ ಮಾರ್ಗದತ್ತ ಗುರು ಕೊಂಡೊಯ್ಯುತ್ತಾನೆ ಎಂದು ಗುರುವಿನ ಮಹತ್ವ ಕುರಿತು ವಿವರಿಸಿದರು.

ಶಾಲೆಯಲ್ಲಿ ಸೇವೆ ಸಲ್ಲಿಸಿದ ಹಲವಾರು ಶಿಕ್ಷಕರು ಮಾತನಾಡಿ, ಇದೇ ಸರ್ಕಾರಿ ಶಾಲೆಯಲ್ಲಿ ಹಿಂದೆ ಇದ್ದ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಪ್ರಸ್ತುತ ಇರುವ ವಿದ್ಯಾರ್ಥಿಗಳ ಸಂಖ್ಯೆ ಬಗ್ಗೆ ಮೆಲುಕು ಹಾಕಿದರು. ಅಂದು ವಿದ್ಯಾರ್ಥಿಗಳು ಶಾಲೆಗೆ ಕೀರ್ತಿ ತಂದಿದ್ದರು, ಅದೇ ರೀತಿ ಎಂದೆಂದಿಗೂ ವಿದ್ಯಾರ್ಥಿಗಳ ಗಮನ ಕೀರ್ತಿ ತರುವತ್ತ ಇರಲಿಚ ಎಂದು ಆಶಿಸಿದರು.


ವಿದ್ಯಾರ್ಥಿ ಸಂಘದ ವಿನುತ ಮಾತನಾಡಿ, ನಮ್ಮ ಸ್ನೇಹಿತರು ವಿವಿಧೆಡೆ ಉದ್ಯೋಗದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಅಂತಹ ಎಲ್ಲಾ ಸ್ನೇಹಿತರನ್ನು ಒಂದೆಡೆ ಸೇರಬೇಕು ಹಾಗೂ ಅಕ್ಷರ ಕಲಿಸಿದ ಗುರುಗಳಿಗೆ ಗೌರವ ಸಮರ್ಪಿಸಬೇಕು ಎಂಬ ಉದ್ದೇಶದಿಂದ ಹಲವು ದಿನಗಳ ಪ್ರಯತ್ನದ ಫಲವಾಗಿ ಈ ಕಾರ್ಯಕ್ರಮ ರೂಪುಗೊಂಡಿದೆ. ಇದು ಒಂದು ರೀತಿಯ ಸಾರ್ಥಕ ಭಾವ ಮೂಡಿದೆ ಎಂದರು.

ಫೋಟೋ ಕೊಡುಗೆ:

ವಿದ್ಯಾರ್ಥಿಗಳು ಹಳೆಯ ನೆನಪುಗಳನ್ನು ಮೆಲಕು ಹಾಕಿ ಸಂತೋಷದಿಂದ ಹಾಡಿದರು. ಅಲ್ಲದೆ ತಮ್ಮ ನೆಚ್ಚಿನ ಗುರುಗಳಿಗೆ ಗುರುವಿನ ಭಾವ ಚಿತ್ರವಿರುವ ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಾದ ಸಿದ್ದರಾಜು, ನಾಗಮಲ್ಲಪ್ಪ, ಸುರೇಶ್, ರಾಜೇಂದ್ರ, ಬಿ.ನಾಗರಾಜು, ಬೆಳ್ಳೇ ಗೌಡ, ಎಸ್.ಎಸ್. ನಾಗರಾಜು, ರಾಮಚಂದ್ರ ಭಟ್, ತುಳಸಮ್ಮ, ರುದ್ರಪ್ಪ, ಪುಟ್ಟಮಾದಪ್ಪ, ಮಾದೇಗೌಡ, ಮಹದೇವಯ್ಯ, ಮಂಜುನಾಥ್, ವಿಶ್ವನಾಥ್, ಶಿವ ವೀರಭದ್ರಪ್ಪ, ಬಸವಣ್ಣ, ಪ್ರಭಾಕರ್, ಮಲ್ಲಿಗಮ್ಮ, ಸಾವಿತ್ರಿ, ರಾಧಿಕಾ, ಸೋಮಣ್ಣ, ಮುತ್ತಣ್ಣ ಸೇರಿ ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳಾದ ಪುಟ್ಟರಾಜು, ಸಂತೋಷ್, ಇಂದ್ರಮ್ಮ, ವಿನುತ, ಲಾವಣ್ಯ, ಸ್ವಾತಿ ಸೇರಿ ಹಲವರಿದ್ದರು.