ಸಾರಾಂಶ
ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಸ್ವಕ್ಷೇತ್ರದಲ್ಲಿ ಪಕ್ಷಕ್ಕೆ ಲೀಡ್ ಕೊಡಿಸುವಲ್ಲಿ ವಿಫಲರಾದ ರಾಜ್ಯದ 17 ಸಚಿವರ ವಿರುದ್ಧ ವರಿಷ್ಠ ರಾಹುಲ್ ಗಾಂಧಿ ಕೆಂಗಣ್ಣು ಬೀರಿದ್ದು, ಈ ಸಚಿವರು ಪ್ರತಿನಿಧಿಸಿದ್ದ ಕ್ಷೇತ್ರಗಳಲ್ಲಿ ಹಿನ್ನಡೆಗೆ ಕಾರಣವೇನು ಎಂಬ ಬಗ್ಗೆ ಸಮಗ್ರ ವರದಿ ನೀಡುವಂತೆ ರಾಜ್ಯ ನಾಯಕತ್ವಕ್ಕೆ ತಾಕೀತು ಮಾಡಿದ್ದಾರೆ ಎಂದು ವರದಿಯಾಗಿದೆ. ಇದು ರಾಜ್ಯದ ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿದ್ದು, ಇದರ ಬೆನ್ನಲ್ಲೇ ಸಚಿವರು ಸ್ಪಷ್ಟನೆ ನೀಡುವ ಯತ್ನಕ್ಕೆ ಮುಂದಾಗಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಮತ ಧ್ರುವೀಕರಣ: ಮಹದೇವಪ್ಪ
ಬಿಜೆಪಿ- ಜೆಡಿಎಸ್ ಮೈತ್ರಿಯಿಂದ ಮತಗಳ ಧ್ರುವೀಕರಣವಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಐದಾರು ಕ್ಷೇತ್ರಗಳಲ್ಲಿ ಹಿನ್ನಡೆಯಾಗಿರುವುದು ನಿಜ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯಿಲ್ಲ. ಬಿಜೆಪಿ-ಜೆಡಿಎಸ್ ರಾಜಕೀಯ ಒಡಂಬಡಿಕೆಯಿಂದ ಮತಗಳು ಧ್ರುವೀಕರಣವಾಗಿವೆ. ಮುಂದುವರೆದ ಸಮುದಾಯ ಒಗ್ಗಟ್ಟಾದವು. ಹಿಂದುಳಿದ ಸಮುದಾಯ ಕಾಂಗ್ರೆಸ್ ಜೊತೆಗೇ ಇದ್ದದ್ದರಿಂದ ನಾವು 9 ಸ್ಥಾನಗಳಲ್ಲಿ ಗೆದ್ದಿದ್ದೇವೆ. ಒಳ್ಳೆಯ ಕಾರ್ಯವಾಗಿದೆ. ಆದರೆ, ನಾವು ನಿರೀಕ್ಷಿಸಿದಷ್ಟು ಸ್ಥಾನಗಳಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಈ ವಿಚಾರದ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚೆ ಆಗಲಿದೆ ಎಂದರು.
ಹಿನ್ನಡೆಗೆ ಯಾರನ್ನೂ ಹೊಣೆ ಮಾಡಲು ಸಾಧ್ಯವಿಲ್ಲ: ಎಂ.ಬಿ ಪಾಟೀಲ್
ಚುನಾವಣೆ ಹಿನ್ನಡೆಗೆ ಯಾರನ್ನೂ ಹೊಣೆ ಮಾಡಲು ಸಾಧ್ಯವಿಲ್ಲ. ಸಚಿವರ ಅಥವಾ ಶಾಸಕರ ಮೌಲ್ಯಮಾಪನ ಕೂಡ ನಡೆಯುವುದಿಲ್ಲ. ಪಕ್ಷದ ಮುಂದಿನ ಕಾರ್ಯತಂತ್ರದ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ನಾವು ರಾಜ್ಯದಲ್ಲಿ ಕನಿಷ್ಠ ಪಕ್ಷ 14 ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು. ಆದರೆ 9 ಸ್ಥಾನಗಳಷ್ಟೇ ಬಂದಿವೆ. ಈ ಹಿನ್ನಡೆಗೆ ಕಾರಣಗಳೇನು ಎನ್ನುವ ಕುರಿತು ಕಾಂಗ್ರೆಸ್ ಪಕ್ಷವು ಆತ್ಮಾವಲೋಕನ ಮಾಡಿಕೊಳ್ಳಲಿದೆ. ಕಳೆದ ಒಂದು ವರ್ಷದಲ್ಲಿ ರಾಜ್ಯ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು, ಜನರಿಗೆ ಅದರ ಲಾಭ ಸಿಗುವಂತೆ ಮಾಡಿತ್ತು. ಆದರೂ ನಾವು ಎಡವಿದ್ದೆಲ್ಲಿ ಎನ್ನುವುದನ್ನು ಕಂಡುಕೊಳ್ಳಲಿದ್ದೇವೆ ಎಂದರು.ಪ್ರಸ್ತುತ ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನಿ ಆಗುತ್ತಿದ್ದಾರೆ. ಕಳೆದ ಎರಡು ಬಾರಿಗಿಂತ ಈ ಸಲ ಬಿಜೆಪಿ ಬಲ ಕುಂದಿದೆ. ಹೀಗಾಗಿ ಈ ಸಮ್ಮಿಶ್ರ ಸರ್ಕಾರ ಎಷ್ಟು ದಿನ ಇರುತ್ತದೆಯೋ ಹೇಳಲು ಸಾಧ್ಯವಿಲ್ಲ. ಅದರಲ್ಲೂ ನಿತೀಶ್‌ಕುಮಾರ್ ಅವರಂತ ವ್ಯಕ್ತಿಯನ್ನು ಇಟ್ಟುಕೊಂಡು ಸರ್ಕಾರ ನಡೆಸುವುದು ಎಷ್ಟು ಕಷ್ಟ ಎನ್ನುವುದು ನಮಗೆ ಗೊತ್ತಿದೆ. ಮತ್ತೆ ಚುನಾವಣೆಯೂ ಬರಬಹುದು ಎಂದು ಹೇಳಿದರು.
ಚುನಾವಣೆ ಹಿನ್ನಡೆ ವಿಶ್ಲೇಷಿಸಲು ರಾಹುಲ್ ಸೂಚನೆ: ಪರಮೇಶ್ವರ್
ಲೋಕಸಭೆ ಚುನಾವಣೆಯಲ್ಲಿ ಯಾವ ಜಿಲ್ಲೆಗಳಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲು ರಾಹುಲ್ ಗಾಂಧಿ ಸೂಚಿಸಿದ್ದು, ಅದಕ್ಕೆ ಬದ್ಧರಾಗಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಕುರಿತು ಪ್ರತಿಕ್ರಿಯಿಸಿದ ಅವರು, ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿರುವ ಬಗ್ಗೆ ಸ್ವಾಭಾವಿಕವಾಗಿ ಚರ್ಚೆ ಮಾಡಬೇಕು. ಯಾಕೆ ಹೀಗಾಗಿದೆ ಅಂತ ವಿಶ್ಲೇಷಣೆ ಮಾಡಬೇಕು. ನನ್ನನ್ನೂ ಸೇರಿಸಿ ಯಾವೆಲ್ಲಾ ಜಿಲ್ಲೆಗಳಲ್ಲಿ ಹಿನ್ನಡೆಯಾಗಿದೆ ಎಂದು ವಿಶ್ಲೇಷಣೆ ಮಾಡಿ ತಿಳಿಸಲು ಸೂಚಿಸಿದ್ದಾರೆ. ಹಾಗೆಯೇ ನಡೆದುಕೊಳ್ಳುತ್ತೇವೆ ಎಂದರು.ರಾಹುಲ್ ಗಾಂಧಿಯವರು ಲೋಕಸಭೆ ಪ್ರತಿಪಕ್ಷ ನಾಯಕರಾಗಲಿ ಎಂಬುದು ನಮ್ಮೆಲ್ಲರ ಆಸೆ. ಭಾರತ್ ಜೋಡೋ ಮೂಲಕ ದೇಶಾದ್ಯಂತ ಪಾದಯಾತ್ರೆ ಮಾಡಿದ್ದಾರೆ. ದೇಶದ ಪ್ರತಿಯೊಂದು ಸಮಸ್ಯೆಗಳನ್ನು ಅರಿತಿದ್ದು, ಅವರು ಪ್ರತಿಪಕ್ಷ ನಾಯಕರಾಗುವುದಕ್ಕೆ ಸೂಕ್ತ. ಆದರೆ ಈ ವಿಷಯದಲ್ಲಿ ಇಂಡಿಯಾ ಒಕ್ಕೂಟದ ತೀರ್ಮಾನವೇ ಅಂತಿಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಸಕ ಸವದಿ, ಮಹೇಂದ್ರ ಪಕ್ಷದ ವಿರುದ್ಧ ಕೆಲಸ ಮಾಡಿದರು: ಸತೀಶ್
ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಬೆಳಗಾವಿ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಅಥಣಿ ಮತ್ತು ಕುಡಚಿ ಶಾಸಕರು ಚುನಾವಣೆಗೆ ಸಹಕಾರ ನೀಡಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪುನರುಚ್ಚರಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಥಣಿ ಶಾಸಕ ಲಕ್ಷ್ಮಣ ಸವದಿ ಮತ್ತು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣನವರ್ ತಮ್ಮ ಕ್ಷೇತ್ರಗಳಲ್ಲಿ ಪಕ್ಷದ ವಿರುದ್ಧ ಕೆಲಸ ಮಾಡಿದ್ದಾರೆ. ಅಥಣಿಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಮತಗಳು ಸಿಗುವ ಅವಕಾಶವಿತ್ತು. ಆದರೆ, ಯಾಕೆ ಹೆಚ್ಚು ಮತಗಳು ಸಿಗಲಿಲ್ಲ ಎಂಬುದನ್ನು ಸವದಿಯವರೇ ಹೇಳಬೇಕು. ಈ ಕುರಿತು ನಮಗೂ ಆತಂಕವಿದ್ದು ಅಲ್ಲಿ ನಮಗೆ ಒಳೇಟು ಬಿದ್ದಿರುವುದು ನಿಜ. ಇದರ ಬಗ್ಗೆ ಜಿಲ್ಲೆಯಲ್ಲಿ ಚರ್ಚೆ ಆಗಬೇಕಿದೆ ಎಂದು ಹೇಳಿದರು.ಚಿಕ್ಕೋಡಿ ವಿಧಾನಸಭಾ ಭಾಗದಲ್ಲಿ ಪಕ್ಷದ ಎಲ್ಲ ಶಾಸಕರು ಪಕ್ಷಕ್ಕೆ ಮುನ್ನಡೆ ಸಾಧಿಸಲು ಸಹಾಯ ಮಾಡಿದ್ದಾರೆ. ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆ ಕ್ಷೇತ್ರದಲ್ಲೇ ಕಾಂಗ್ರೆಸ್‌ಗೆ ಹೆಚ್ಚು ಮತಗಳು ಸಿಕ್ಕಿವೆ.
ಆದರೆ ಅಥಣಿಯಲ್ಲಿ ಸಿಗಲಿಲ್ಲ. ಕುಡಚಿ ಶಾಸಕರು ಕಡೆಯ ಎರಡು ದಿನ ಸಂಪರ್ಕಕ್ಕೆ ಸಿಗಲಿಲ್ಲ. ಅವರು ಮೊಬೈಲ್ ಸ್ವಿಚ್‌ಆಫ್ ಮಾಡಿಕೊಂಡು ಎಲ್ಲೋ ಮಲಗಿಬಿಟ್ಟಿದ್ದರು. ಮತದಾನದ ದಿನ ಶಾಸಕರು ಮತಗಟ್ಟೆ ಕೇಂದ್ರಗಳಲ್ಲಿ ಓಡಾಡುವುದು ಕರ್ತವ್ಯ. ಆದರೆ ಆವತ್ತು ಕಾಣಿಸಲಿಲ್ಲ. ಅದಕ್ಕಾಗಿ ಅನುಮಾನವಿದೆ. ಅಲ್ಲಿನ ಕಾರ್ಯಕರ್ತರನ್ನು ಕೇಳಿದರು ಶಾಸಕರು ಯಾರ ಪರವಾಗಿ ಕೆಲಸ ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ ಎಂದರು.