ಸಾರಾಂಶ
ಕನ್ನಡಪ್ರಭ ವಾರ್ತೆ ಧಾರವಾಡ
ಶಕ್ತಿ ಯೋಜನೆಯಿಂದ ಶಾಲಾ-ಕಾಲೇಜು ಮಕ್ಕಳಿಗೆ ತೊಂದರೆ ಆಗುತ್ತಿರುವುದನ್ನು ಸ್ವತಃ ಸಾರಿಗೆ ಸಚಿವರು ಒಪ್ಪಿಕೊಂಡಿದ್ದು, ಹೊಸ ಬಸ್‌ಗಳು ಬರಲಿದ್ದು ನಂತರದಲ್ಲಿ ಈ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ವರ್ಷಗಳಿಂದ ಹೊಸ ಬಸ್ಸುಗಳು ಖರೀದಿ ಆಗಿರಲಿಲ್ಲ. ಸಿಬ್ಬಂದಿ ನೇಮಕವೂ ಆಗಿಲ್ಲ. ಪ್ರತಿದಿನ ರಾಜ್ಯದಲ್ಲಿ 80 ಲಕ್ಷ ಜನ ಓಡಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಶಕ್ತಿ ಯೋಜನೆ ಆರಂಭ ಆಗಿದ್ದು, ನಿತ್ಯ ಬಸ್ಸುಗಳಲ್ಲಿ ಓಡಾಡುವರ ಸಂಖ್ಯೆ ಒಂದು ಕೋಟಿಗೂ ಹೆಚ್ಚಾಗಿದೆ. ಹೀಗಾಗಿ ಶಾಲಾ ಮಕ್ಕಳಿಗೆ ತೊಂದರೆ ಆಗಿದೆ. ಇದನ್ನು ತಿಳಿದುಕೊಳ್ಳದೇ ಬಿಜೆಪಿ ಮುಖಂಡರು ಅನವಶ್ಯಕ ಆರೋಪ ಮಾಡುತ್ತಾರೆ ಎಂದರು.
ಬಿಜೆಪಿ ಮಂದಿ ತಾವೂ ಕೆಲಸ ಮಾಡೋದಿಲ್ಲ, ಕೆಲಸ ಮಾಡುವವರಿಗೂ ಬಿಡೋದಿಲ್ಲ. ಆಗೋದಕ್ಕೆ ಹರಕತ್ತು, ಆಗದಿರೋದಕ್ಕೆ ಕುಮ್ಮಕ್ಕು ಅಂತಾರಲ್ಲ ಆ ರೀತಿ ಬಿಜೆಪಿಯವರು ತೊಂದರೆ ಕೊಡುತ್ತಾರೆ. ಅವರು ನಾಲ್ಕು ವರ್ಷಗಳಿಂದ ಒಂದೇ ಒಂದು ಬಸ್ ಖರೀದಿ ಮಾಡಿಲ್ಲ.
ಬಸ್ ನಿಲ್ದಾಣಗಳನ್ನು ಏಕೆ ಕಟ್ಟಲಿಲ್ಲ? ಎಂದು ಪ್ರಶ್ನಿಸಿದ ಸಚಿವರು, 13888 ಸಿಬ್ಬಂದಿ ನಿವೃತ್ತಿಯಾದರೂ ನಾಲ್ಕು ವರ್ಷದಲ್ಲಿ ಒಂದೇ ಒಂದು ನೇಮಕಾತಿ ಮಾಡಲಿಲ್ಲ. ಇವತ್ತು ಪ್ರತಿ ದಿನ 60 ಲಕ್ಷ ಜನ ಹೆಣ್ಣು ಮಕ್ಕಳು ಬಸ್‌ನಲ್ಲಿ ಓಡಾಡುತ್ತಿದ್ದಾರೆ. ಇದನ್ನು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ಅವರಿಗೆ ಹೊಟ್ಟೆ ಉರಿ ಆಗುತ್ತಿದೆ ಎಂದರು.
ಚಿಗರಿಯಲ್ಲಿ ಪ್ರಯಾಣ: ಧಾರವಾಡದ ಸಿಬಿಟಿ ಬಸ್ ನಿಲ್ದಾಣದ ಕಾಮಗಾರಿಗೆ ಆಗಮಿಸಿದ್ದ ಸಚಿವ ರಾಮಲಿಂಗಾರೆಡ್ಡಿ ಧಾರವಾಡದಿಂದ ಹುಬ್ಬಳ್ಳಿ ವರೆಗೆ ಚಿಗರಿ ಬಸ್‌ನಲ್ಲಿ ಪ್ರಯಾಣ ಮಾಡಿದರು. ಸಿಬಿಟಿಯ ಚಿಗರಿ ಬಸ್ ನಿಲ್ದಾಣದಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ಹಾಗೂ ಶಾಸಕ ಎನ್.ಎಚ್. ಕೋನರಡ್ಡಿ ಅವರೊಂದಿಗೆ ಹುಬ್ಬಳ್ಳಿಗೆ ಪ್ರಯಾಣ ಮಾಡಿದರು.