ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಕಳೆದ ಎರಡೂವರೆ ದಶಕದಿಂದ ಬಿಜೆಪಿ ಭದ್ರಕೋಟೆಯಾಗಿದ್ದ ದಾವಣಗೆರೆಯಲ್ಲಿ ಮಾಜಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಕುಟುಂಬ ಅಧಿಕಾರ ಅನುಭವಿಸಿದ್ದು, ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ ಪಕ್ಷದ ಮುಖಂಡರು, ಕಾರ್ಯಕರ್ತರನ್ನೇ ಕಡೆಗಣಿಸುತ್ತಿದ್ದಾರೆ ಎಂದು ಪಕ್ಷದ ಕಾರ್ಯಕರ್ತರು ಆರೋಪಿಸಿದ್ದಾರೆ.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಕಾರ್ಯಕರ್ತರಾದ ರಾಜು ವೀರಣ್ಣ, ಪ್ರವೀಣ ರಾವ್ ಜಾಧವ್, ಅಧಿಕಾರ ಸಿಕ್ಕರೆ ಮಾತ್ರ ಪಕ್ಷ ಸಂಘಟನೆಗೆ ಬರುವ ಮಾಜಿ ಸಂಸದ ಸಿದ್ದೇಶ್ವರರದ್ದು ಸ್ವಾರ್ಥದ ರಾಜಕಾರಣವಾಗಿದ್ದು, ಇಂತಹವರಿಂದಲೇ ದಾವಣಗೆರೆ ಜಿಲ್ಲೆಯಲ್ಲಿ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ. ಸಿದ್ದೇಶ್ವರ ಸ್ಪರ್ಧಿಸಿದ್ದ ಲೋಕಸಭೆ ಚುನಾವಣೆಗಳಲ್ಲಿ ನಾಲ್ಕೂ ಸಲ ಹಗಲಿರುಳೆನ್ನದೇ, ಕೆಲಸ ಮಾಡಿ ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಗೆಲ್ಲಿಸಿದ್ದೆವು. ಆದರೆ, ಶುಕ್ರವಾರ ದಾವಣಗೆರೆ ಮಹಾ ನಗರ ಪಾಲಿಕೆ ಮೇಯರ್, ಉಪ ಮೇಯರ್ ಸ್ಥಾನಗಳಿಗೆ ಚುನಾವಣೆ ಇದ್ದರೂ, ಮುನ್ನಾ ದಿನ ಪಕ್ಷದ ಕಚೇರಿಯಲ್ಲಿ ಚುನಾವಣೆಗೆ ರಣತಂತ್ರ ರೂಪಿಸಲು ಕರೆದಿದ್ದ ಸಭೆಗೆ ಸಿದ್ದೇಶ್ವರ ಗೈರು ಹಾಜರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರ ಇದ್ದರಷ್ಟೇ ಪಕ್ಷ, ಇಲ್ಲದಿದ್ರೆ ನಮ್ಮ ಪಾಡಿಗೆ ನಾವು ಇರುತ್ತೇವೆಂದರೆ ಪಕ್ಷ ಬಲಿಷ್ಟವಾಗುವುದಾದರೂ ಹೇಗೆ? ಸಿದ್ದೇಶ್ವರ ಗೆಲ್ಲಲು ವೈಯಕ್ತಿಕ ವರ್ಚಸ್ಸಿಗಿಂತ ಪಕ್ಷದ ಮುಖಂಡರು, ಕಾರ್ಯಕರ್ತರು, ಬಿಜೆಪಿ ಚಿಹ್ನೆ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಜನಪ್ರಿಯತೆ, ವರ್ಚಸ್ಸು ಕಾರಣವೇ ಹೊರತು, ಸಿದ್ದೇಶ್ವರ ವೈಯಕ್ತಿಕ ಕೊಡುಗೆ ಇದರಲ್ಲಿ ಏನೂ ಇಲ್ಲ ಎಂದು ಹೇಳಿದರು.ಕೇವಲ ತನಗಷ್ಟೇ ಅಧಿಕಾರ ಬೇಕು. ಉಳಿದವರಿಗೆ ಬೇಡ ಎಂಬ ಮನೋಭಾವದಿಂದಲೇ ಪಕ್ಷವು ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕುಸಿಯುತ್ತಿದೆ. ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಒಬ್ಬೊಬ್ಬರಾಗಿ ಪಕ್ಷದಿಂದ ದೂರ ಸರಿಯುವಂತಾಗಿದೆ. ಹಾಗಾಗಿ ಪಕ್ಷವನ್ನು ಕಟ್ಟಿದ, ಸಂಘಟನೆಗೆ ಶ್ರಮಿಸಿದ ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯರಂತಹ ನಾಯಕರಿಗೆ ದಾವಣಗೆರೆ ಜಿಲ್ಲೆಯ ಬಿಜೆಪಿ ನಾಯಕತ್ವ ನೀಡಬೇಕು. ಜಿಲ್ಲೆಯಲ್ಲಿ ಬಿಜೆಪಿ ನಾಯಕತ್ವ ಮೊದಲು ಬದಲಾಗಬೇಕು ಎಂದು ಒತ್ತಾಯಿಸಿದರು.ಬಿಜೆಪಿ ಸಂಘಟನೆ, ಗೆಲುವಿಗಾಗಿ ನಾವೂ ಕೆಲಸ ಮಾಡಿದ್ದೇವೆ. ಈಗಲೂ ಪಕ್ಷಕ್ಕಾಗಿ, ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ನಾವು ಕೆಲಸ ಮಾಡುತ್ತೇವೆ. ನಮಗೆ ವ್ಯಕ್ತಿಗಳು ಮುಖ್ಯವೇ ಅಲ್ಲ. ನಮಗೇನಿದ್ದರೂ ಪಕ್ಷ ಮುಖ್ಯ. ಸಿದ್ದೇಶ್ವರ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪತ್ನಿ ಗಾಯತ್ರಿ ಸಿದ್ದೇಶ್ವರರನ್ನು ಕಣಕ್ಕಿಳಿಸಿದರು. ಚುನಾವಣೆಯಲ್ಲಿ ಸೋತ ನಂತರ ಆಗೊಮ್ಮೆ, ಈಗೊಮ್ಮೆ ದಾವಣಗೆರೆಗೆ ಬಂದು ಹೋಗುುವದನ್ನು ಬಿಟ್ಟರೆ, ಪಕ್ಷ ಸಂಘಟನೆಗೆ ಶ್ರಮಿಸುತ್ತಿಲ್ಲ. ಪಾಲಿಕೆ ಮೇಯರ್-ಉಪ ಮೇಯರ್ ಚುನಾವಣೆಗೆ ರಣತಂತ್ರ ಹೆಣೆಯಬೇಕಾದ ಸಭೆಗೂ ಗೈರಾಗಿದ್ದು, ನಮ್ಮಂತಹ ಕಾರ್ಯಕರ್ತರಿಗೆ ಬೇಸರ ತಂದಿದೆ ಎಂದು ರಾಜು ವೀರಣ್ಣ, ಪ್ರವೀಣರಾವ್ ಜಾಧವ್ ತಿಳಿಸಿದರು.
ಪಕ್ಷದ ಮುಖಂಡರಾದ ಗಂಗರಾಜು, ಮಂಜುನಾಥ ಪೇಂಟರ್, ಜಿ.ದಯಾನಂದ, ಪ್ರದೀಪ, ಮಂಜುನಾಥ, ಜಯರುದ್ರಪ್ಪ ದಂಧೂರು(ಜಯಣ್ಣ) ಇತರರು ಇದ್ದರು.