ಶಿವಮೊಗ್ಗ : ಚುನಾವಣೆ ಬಳಿಕ ಗೆಲುವಿನ ವಿಶ್ವಾಸದಲ್ಲಿ ಕೈ-ಬಿಜೆಪಿ

| Published : May 13 2024, 01:00 AM IST / Updated: May 13 2024, 01:11 PM IST

BY Raghavendra

ಸಾರಾಂಶ

ಮೂರು ಬಾರಿ ಗೆದ್ದು ಬೀಗಿರುವ ಬಿಜೆಪಿಯ ಬಿ.ವೈ.ರಾಘವೇಂದ್ರ ಅವರು ಮತ್ತೊಮ್ಮೆ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಇನ್ನೂ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಈ ಬಾರಿ ಲೋಕಸಭೆ ಪ್ರವೇಶ ಮಾಡುವುದು ಖಚಿತ ಎನ್ನುವ ಕಾಂಗ್ರೆಸ್‌ಗೆ ಕಾರ್ಯಕರ್ತರು ಆತ್ಮವಿಶ್ವಾಸದಲ್ಲಿ ಇದ್ದಾರೆ. 

 ಶಿವಮೊಗ್ಗ :  ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಸುಗಮವಾಗಿ ನಡೆದಿದೆ. ರಾಜಕೀಯ ಮುಖಂಡರು, ಕಾರ್ಯಕರ್ತರು ತಿಂಗಳ ಕಾಲ ಕ್ಷೇತ್ರದಲ್ಲಿ ಸಂಚರಿಸಿ ಸುಸ್ತಾಗಿ ಮನೆಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕೆಲವರು ನೆಮ್ಮದಿಗಾಗಿ ಪ್ರವಾಸಕ್ಕೆ ಹೋಗಿದ್ದಾರೆ. ಫಲಿತಾಂಶ ಬರುವುದಕ್ಕೆ ಇನ್ನೂ 21 ದಿನ ಬಾಕಿ ಉಳಿದೆ. ಈ ನಡುವೆಯೇ ಎಲ್ಲೆಡೆ ಸೋಲು–ಗೆಲುವಿನ ಲೆಕ್ಕಾಚಾರ ಜೋರಾಗಿ ನಡೆದಿದೆ.

ಬಿಜೆಪಿ ಗೆಲ್ಲುತ್ತಾ? ಕಾಂಗ್ರೆಸ್‌ ಗೆಲ್ಲುತ್ತಾ? ಇಲ್ಲ ಪಕ್ಷೇತರ ಅಭ್ಯರ್ಥಿ ಕೆ.ಎಸ್‌.ಈಶ್ವರಪ್ಪ ಗೆಲ್ತಾರಾ? ಯಾರು ಗೆಲ್ಲಬಹುದು ಎನ್ನುವ ಪ್ರಶ್ನೆ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ಬಹುತೇಕರು ಬಿಜೆಪಿ–ಕಾಂಗ್ರೆಸ್‌ ಮಧ್ಯೆ ಗೆಲುವಿನ ಅಂತರ ಲೆಕ್ಕ ಹಾಕುತ್ತ ವಿಶ್ಲೇಷಿಸಿದರೆ, ಇನ್ನು ಕೆಲವರು ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಅವರು ಕಾಂಗ್ರೆಸ್‌, ಬಿಜೆಪಿಗೆ ಟಕ್ಕರ್‌ ಕೊಡುತ್ತಾರಾ? ಫಲಿತಾಂಶ ಏನು ಆಗುತ್ತದೆಯೋ ಗೊತ್ತಿಲ್ಲ ಎಂದು ತಳಮಳದಿಂದಲೇ ಹೇಳಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್ಸಿಗೂ ಆತ್ಮ ವಿಶ್ವಾಸ:

ಮೂರು ಬಾರಿ ಗೆದ್ದು ಬೀಗಿರುವ ಬಿಜೆಪಿಯ ಬಿ.ವೈ.ರಾಘವೇಂದ್ರ ಅವರು ಮತ್ತೊಮ್ಮೆ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಇನ್ನೂ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಈ ಬಾರಿ ಲೋಕಸಭೆ ಪ್ರವೇಶ ಮಾಡುವುದು ಖಚಿತ ಎನ್ನುವ ಕಾಂಗ್ರೆಸ್‌ಗೆ ಕಾರ್ಯಕರ್ತರು ಆತ್ಮವಿಶ್ವಾಸದಲ್ಲಿ ಇದ್ದಾರೆ. ಬಿಜೆಪಿಯವರು ಮೋದಿ ಗಾಳಿಯನ್ನೇ ನಂಬಿದ್ದಾರೆ. ಕಾಂಗ್ರೆಸ್‌ನವರು ಗ್ಯಾರಂಟಿ ಯೋಜನೆಗಳು ನಮ್ಮ ಕೈಬಿಡಲು ಸಾಧ್ಯವಿಲ್ಲ ಎನ್ನುವ ವಿಶ್ವಾಸದಲ್ಲಿದ್ದಾರೆ.

ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಎರಡುವರೆ ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದರು. ಆದರೆ, ಈ ಬಾರಿ ಈಶ್ವರಪ್ಪ ಸ್ಪರ್ಧೆಯಿಂದ ಯಾರಿಗೆ ಲಾಭವಾಗಿದೆ. ಯಾರಿಗೆ ನಷ್ಟವಾಗಿದೆ ಎಂದು ಹೇಳುವುದು ಕಷ್ಟವಾಗಿದೆ. ಕಾಂಗ್ರೆಸ್‌-ಬಿಜೆಪಿ ನಡುವೆ ಈಶ್ವರಪ್ಪ ಅವರೇ ಗೆಲ್ಲುತ್ತಾರಾ ಎಂಬ ಚರ್ಚೆಯೂ ನಡೆಯುತ್ತಿದೆ. ಹೀಗಾಗಿ ಕೊನೆ ಕ್ಷಣದಲ್ಲಿ ರಾಜಕೀಯ ಪಕ್ಷಗಳ ಗೆಲವಿನ ಲೆಕ್ಕಾಚಾರವೇ ಬುಡಮೇಲಾದರೂ ಅಚ್ಚರಿ ಇಲ್ಲ.

ಗೀತಾ ಗೆಲ್ತಾರೆ ಎಂದು ಟ್ರ್ಯಾಕ್ಟರ್‌ ಪಣಕ್ಕಿಟ್ಟ ರೈತ!

ಅಭ್ಯರ್ಥಿಗಳ ಸೋಲು, ಗೆಲುವಿನ ಲೆಕ್ಕಾಚಾರ ನಡೆಯುತ್ತಿರುವ ಬೆನ್ನಲ್ಲೆ ಇಲ್ಲೊಬ್ಬ ರೈತ ಈ ಬಾರಿ ಗೀತಾ ಗೆಲ್ಲುತ್ತಾರೆ. ಬೇಕಾದರೆ ಯಾರಾದರೂ ಚಾಲೆಂಜ್‌ ಕಟ್ಟಿ ಎಂದು ಬಹಿರಂಗ ಸವಾಲು ನೀಡಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಗೆಲ್ಲಲಿದ್ದಾರೆ ಎಂದು ರೈತನೊಬ್ಬ ಸವಾಲು ಹಾಕಿದ್ದು, ತನ್ನ ಟ್ರ್ಯಾಕ್ಟರ್‌ ಅನ್ನು ಪಣಕ್ಕಿಟ್ಟಿದ್ದಾನೆ. ಈತ ಸವಾಲಾಕಿರುವ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗಿದೆ. ಶಿಕಾರಿಪುರ ತಾಲೂಕು ಕಲ್ಮನೆ ಗ್ರಾಮದ ರವೀಂದ್ರ ಎಂಬುವವರು ತಮ್ಮ ಟ್ರ್ಯಾಕ್ಟರ್‌ ಪಣಕ್ಕಿಟ್ಟು ಬಿಜೆಪಿ ಕಾರ್ಯಕರ್ತರಿಗೆ ಸವಾಲು ಹಾಕಿದ್ದಾರೆ. ಗೀತಾ ಗೆಲ್ಲಲಿದ್ದಾರೆ. ಇದರ ವಿರುದ್ಧ ಯಾರಾದರೂ ಚಾಲೆಂಜ್‌ ಮಾಡುವುದಿದ್ದರೆ ಬನ್ನಿ. ತಾನು ತನ್ನ ಟ್ರ್ಯಾಕ್ಟರ್‌ ಪಣಕ್ಕಿಟಿದ್ದೇನೆ ಎಂದು ರವೀಂದ್ರ ಸವಾಲು ಹಾಕಿದ್ದಾರೆ.