ಸಾರಾಂಶ
ರಾಜಧಾನಿಯಲ್ಲಿ ಪಾಲಿಕೆ ಅಧಿಕಾರಿಗಳು ಗುಂಡಿ ಮುಚ್ಚುವ ಯೋಜನೆಯನ್ನು ಪ್ರಾರಂಭಿಸಿ ಕೆಲಸ ಆರಂಭಿಸಿರುವುದು.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಿಗದಿತ ಅವಧಿಯಲ್ಲಿ ರಸ್ತೆ ಗುಂಡಿ ಮುಚ್ಚಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಸೋಮವಾರದಿಂದ ನಗರದ ವಿವಿಧ ಭಾಗದಲ್ಲಿ ರಸ್ತೆ ಗುಂಡಿ ಮುಚ್ಚಲು ಪಾಲಿಕೆ ಅಧಿಕಾರಿಗಳು ವಲಯ ಮಟ್ಟದಲ್ಲಿ ಗುಂಡಿ ಮುಚ್ಚುವ ಯೋಜನೆ ಹಾಕಿಕೊಂಡು ಕೆಲಸ ಆರಂಭಿಸಿದ್ದಾರೆ.ಬಿಬಿಎಂಪಿಯ ಮಾಹಿತಿ ಪ್ರಕಾರ ನಗರದಲ್ಲಿ 1900 ರಸ್ತೆ ಗುಂಡಿಗಳಿದ್ದು, ದಿನಕ್ಕೆ 400 ಗುಂಡಿ ಮುಚ್ಚಲು ಗುರಿ ಇಟ್ಟುಕೊಳ್ಳಲಾಗಿದೆ. ಇದಕ್ಕಾಗಿ ವಲಯ ಮಟ್ಟದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಸೋಮವಾರ ಪೂರ್ವ ವಲಯ ಆಯುಕ್ತೆ ಸ್ನೇಹಲ್ ಅವರು ಶಿವಾಜಿನಗರ ವ್ಯಾಪ್ತಿಯಲ್ಲಿ ಬರುವ ತಿಮ್ಮಯ್ಯ ರಸ್ತೆಯಲ್ಲಿ ಗುಂಡಿ ಮುಚ್ಚುವ ಕಾರ್ಯ ಪರಿಶೀಲಿಸಿ ತ್ವರಿತವಾಗಿ ರಸ್ತೆ ಗುಂಡಿ ಮುಚ್ಚುವಂತೆ ಸೂಚಿಸಿದರು.ಪೂರ್ವ ವಲಯ ವ್ಯಾಪ್ತಿಯಲ್ಲಿ 258.59 ಕಿ.ಮೀ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಿದ್ದು, 1394 ಕಿ.ಮೀ ಉದ್ದದ ರಸ್ತೆ ವಾರ್ಡ್ ರಸ್ತೆಗಳು ಸೇರಿದಂತೆ ಒಟ್ಟು 1652.59 ಉದ್ದದ ರಸ್ತೆಗಳಿವೆ. ಕಳೆದ 1 ವರ್ಷದಲ್ಲಿ 2,390 ರಸ್ತೆ ಗುಂಡಿಗಳು ಮುಚ್ಚಲಾಗಿದೆ. ‘ರಸ್ತೆ ಗುಂಡಿ ಗಮನ’ ತಂತ್ರಾಂಶದಲ್ಲಿ ಬರುತ್ತಿರುವ ದೂರುಗಳನ್ನು ಕಾಲಮಿತಿಯೊಳಗಾಗಿ ಮುಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ಸ್ನೇಹಲ್ ಹೇಳಿದರು.
ವಲಯ ಮುಖ್ಯ ಎಂಜಿನಿಯರ್ ಸುಗುಣಾ, ಕಾರ್ಯಪಾಲಕ ಎಂಜಿನಿಯರ್ ಸೈಫುದ್ದೀನ್ ಇದ್ದರು.ಸೆ.15ರ ನಂತರ ಯಾವ ವಲಯದ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಕಾಣಿಸುತ್ತೋ ಆ ವಾರ್ಡ್‌ನ ಎಂಜಿನಿಯರನ್ನು ಅಮಾನತುಗೊಳಿಸಲಾಗುವುದು.-ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ, ಬಿಬಿಎಂಪಿ.