ಸಾರಾಂಶ
ಬಾಗಲಕೋಟೆ : ರಾಜ್ಯ ರಾಜಕೀಯದಲ್ಲಿ ತೀವ್ರ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿರುವ ವಾಲ್ಮೀಕಿ ನಿಗಮ ಹಗರಣದ ತನಿಖೆ ಚುರುಕಾಗಿರುವ ನಡುವೆಯೇ ಇದೀಗ ಬಾಗಲಕೋಟೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಬ್ಯಾಂಕ್ ಖಾತೆಯಲ್ಲಿದ್ದ ₹2.47 ಕೋಟಿಗೂ ಹೆಚ್ಚಿನ ಹಣ ಅಕ್ರಮವಾಗಿ ವರ್ಗಾವಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಧಿಕಾರಿಗಳ ಗಮನಕ್ಕೆ ಬಾರದೆ ಈ ಹಣದ ವರ್ಗಾವಣೆ ಆಗಿದೆ ಎಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ.
ಅಕ್ರಮವಾಗಿ ಹಣ ವರ್ಗಾವಣೆಯಾಗಿರುವ ಮಾಹಿತಿ ಬೆಳಕಿಗೆ ಬರುತ್ತಲೇ ಬಾಗಲಕೋಟೆಯ ಐಡಿಬಿಐ ಬ್ಯಾಂಕ್ ಮ್ಯಾನೇಜರ್ ಮತ್ತು ಸಿಬ್ಬಂದಿ ವಿರುದ್ಧ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಗೋಪಾಲ ಹಿತ್ತಲಮನಿ ಅವರು ಜು.11ರಂದು ದೂರು ದಾಖಲಿಸಿದ್ದು, ತನಿಖೆ ಆರಂಭವಾಗಿದೆ.
ಅಕ್ಟೋಬರ್ 28, 2021ರಿಂದ ಫೆ.22, 2024ರ ನಡುವೆ 21 ಬಾರಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರ ಹೆಸರಲ್ಲಿ ನಗರದ ಐಡಿಬಿಐ ಬ್ಯಾಂಕ್ ಶಾಖೆಯಲ್ಲಿರುವ ಮೂರು ಖಾತೆಗಳಲ್ಲಿ ಈ ಅಕ್ರಮ ನಡೆದಿದೆ. ಮೂರು ಖಾತೆಯಿಂದ ಬೇರೆ ಬೇರೆ ಖಾತೆಗಳಿಗೆ ಅಧಿಕಾರಿಗಳ ಗಮನಕ್ಕೆ ಬಾರದೆ ಹಣವನ್ನು ವರ್ಗಾವಣೆ ಮಾಡಲಾಗಿದೆ.
ಯಾವ ಖಾತೆಗೆ ಎಷ್ಟು ಹಣ ವರ್ಗ?:
ಐಡಿಬಿಐ ಬ್ಯಾಂಕ್ ಖಾತೆ ನಂಬರ್ 1071104000160063 ಮೂಲಕ 28.10.2021 ರಿಂದ 22.02.2024ರ ವರೆಗೆ ಒಟ್ಟು ₹1,35,96,500, ಖಾತೆ ನಂಬರ್ 1071104000165228 ಮೂಲಕ 4.5.2022 ರಿಂದ 7.11.2022ವರೆಗೆ ₹1,01,33,750 ಮತ್ತು ಖಾತೆ ನಂಬರ್ 1071104000165501 ಮೂಲಕ 11.10.2022 ರಂದು ₹10,43,749 ಒಟ್ಟು ಹೀಗೆ ₹2,47,73,999 ಅನ್ನುಅ.28, 2021 ರಿಂದ ಫೆ.22, 2024 ರವರೆಗೆ ಹಂತ ಹಂತವಾಗಿ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ.ಪ್ರವಾಸೋದ್ಯಮ ಇಲಾಖೆ ಅನುಮತಿಯಿಲ್ಲದೆ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೆ ಹಣವನ್ನು ತಮಗೆ ಬೇಕಾದ ರೀತಿ ವರ್ಗಾವಣೆ ಮಾಡಲಾಗಿದೆ. ಈ ಮೂಲಕ ಇಲಾಖೆ ಹಣ ತೆಗೆದುಕೊಂಡು ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಬೆಳಕಿಗೆ ಬಂದಿದ್ದು ಹೇಗೆ?:
ಪ್ರವಾಸೋದ್ಯಮದ ಇಲಾಖೆ ಅಧಿಕಾರಿಯೊಬ್ಬರು ಜುಲೈ ಮೊದಲ ವಾರ ಐಡಿಬಿಐ ಬ್ಯಾಂಕ್‌ಗೆ ಹೋಗಿ ಸ್ಟೇಟ್‌ಮೆಂಟ್ ತಂದಾಗ ₹1.63 ಕೋಟಿ ಹಣ ಇತ್ತು. ಅನುಮಾನಗೊಂಡು ಬ್ಯಾಂಕ್‌ಗೆ ಇಲಾಖೆಯಿಂದ ಹಾಕಿರುವ ಚೆಕ್‌ಗಳನ್ನೆಲ್ಲ ಪರಿಶೀಲಿಸಿದಾಗ ವ್ಯತ್ಯಾಸ ಗಮನಕ್ಕೆ ಬಂದಿದೆ. ಅದರಂತೆ ಮೂರು ದಿನಗಳ ಹಿಂದೆ ಬ್ಯಾಂಕ್‌ಗೆ ಹೋಗಿ ಸ್ಟೇಟ್‌ಮೆಂಟ್ ತೆಗೆಸಿದಾಗ ಬ್ಯಾಂಕ್ ಅಕೌಂಟ್‌ನಲ್ಲಿ ಕೇವಲ ₹2,915 ಇರುವುದು ಪತ್ತೆಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಎಸ್ಪಿ ಅಮರನಾಥ ರೆಡ್ಡಿ, ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದೆ. ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಸಭೆ ಮಾಡಲಾಗಿದೆ. ಬ್ಯಾಂಕ್ ಅಧಿಕಾರಿಗಳನ್ನು ಕರೆದು ಮಾತನಾಡಿದ್ದು, ತನಿಖೆಯಲ್ಲಿ ಎಲ್ಲವೂ ಬಯಲಾಗಲಿದೆ ಎಂದು ತಿಳಿಸಿದರು.
ಕಳೆದ ಮೂರು ವರ್ಷಗಳಲ್ಲಿ ಅಕ್ರಮವಾಗಿ ಹಣ ವರ್ಗಾವಣೆಯಾಗುತ್ತಿದ್ದರೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಈ ಕುರಿತು ಯಾವುದೇ ಪರಿಶೀಲನೆ ನಡೆಸದೇ ಹೋಗಿದ್ದು ಅಚ್ಚರಿಗೆ ಕಾರಣವಾಗಿದೆ.
ಹಗರಣದಲ್ಲಿ ಯಾರೇ ಭಾಗಿಯಾಗಿದ್ದೂ ಶಿಕ್ಷೆ
ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ₹2.47 ಕೋಟಿ ಹಣ ಅಕ್ರಮವಾಗಿ ವರ್ಗಾವಣೆಯಾಗಿರುವ ಕುರಿತು ಈಗಾಗಲೇ ನಮ್ಮ ಇಲಾಖೆಯಿಂದ ದೂರು ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ ಸಂಗ್ರಹಿಸಲು ತಿಳಿಸಲಾಗಿದೆ. ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ.
- ಎಚ್.ಕೆ.ಪಾಟೀಲ, ಪ್ರವಾಸೋದ್ಯಮ ಸಚಿವ