ಮಧ್ಯಾಹ್ನದ ಬಿರುಮಳೆಗೆತತ್ತರಿಸಿದ ದೊಡ್ಡಬಳ್ಳಾಪುರ!

| Published : Aug 20 2024, 12:52 AM IST

ಸಾರಾಂಶ

ದೊಡ್ಡಬಳ್ಳಾಪುರ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸೋಮವಾರ ಮಧ್ಯಾಹ್ನ ದಿಢೀರನೇ ಸುರಿದ ಭಾರೀ ಬಿರುಮಳೆ ಪರಿಣಾಮ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿತ್ತು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ದೊಡ್ಡಬಳ್ಳಾಪುರ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸೋಮವಾರ ಮಧ್ಯಾಹ್ನ ದಿಢೀರನೇ ಸುರಿದ ಭಾರೀ ಬಿರುಮಳೆ ಪರಿಣಾಮ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿತ್ತು.

ಹಲವು ಪ್ರಮುಖ ರಸ್ತೆಗಳಲ್ಲಿ ನೀರು ನದಿಯಂತೆ ಹರಿದ ಪರಿಣಾಮ ಜನರು ಪರದಾಡುವಂತಾಯಿತು. ನಗರದ ಹಲವೆಡೆ ಒಳಚರಂಡಿ ವ್ಯವಸ್ಥೆ ಹದಗೆಟ್ಟ ಪರಿಣಾಮ ಚರಂಡಿ ನೀರು ರಸ್ತೆಗೆ ಹರಿದು ಹೊಲಸಿನ ದುರ್ನಾತದಿಂದ ಜನರು ಮೂಗು ಮುಚ್ಚಿ ಸಂಚಾರ ಮಾಡಬೇಕಾದ ಪರಿಸ್ಥಿತಿ ಎದುರಾಗಿತ್ತು.

ನಗರದ ತಾಲ್ಲೂಕು ಕಚೇರಿ ಮುಂಭಾಗದ ರಸ್ತೆ, ಪಿಎಲ್‌ಡಿ ಬ್ಯಾಂಕ್ ಮುಂಭಾಗ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿನ ಜಾಗೃತ ಭವನದ ಮುಂದಿನ ರಸ್ತೆಗಳು ಒಳಚರಂಡಿ ನೀರಿನಿಂದ ಜಲಾವೃತವಾಗಿತ್ತು.

ತೇರಿನಬೀದಿಯ ಸರ್‌.ಎಂ.ವಿಶ್ವೇಶ್ವರಯ್ಯ ವೃತ್ತ ಸಂಪೂರ್ಣ ಜಲಾವೃತವಾಗಿತ್ತು. ಸಂಜಯನಗರದ ನೆಲಮಂಗಲ ಮುಖ್ಯರಸ್ತೆಯಲ್ಲಿ 2 ಅಡಿಗೂ ಹೆಚ್ಚು ನೀರು ನಿಂತ ಪರಿಣಾಮ ಸಂಚಾರ ಬಾಧಿತವಾಗಿತ್ತು. ಹಲವು ರಸ್ತೆಗಳಲ್ಲಿ ನದಿಯೋಪಾದಿ ಹರಿಯುತ್ತಿದ್ದ ನೀರು, ಅದರಲ್ಲೇ ಸಂಚರಿಸುತ್ತಿದ್ದ ವಾಹನಗಳು, ದ್ವಿಚಕ್ರ ವಾಹನ ಸವಾರರ ಪರದಾಟದ ವೀಡಿಯೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿದ್ದು, ಜನತೆ ಅಧಿಕಾರಿಗಳು, ನಗರಸಭೆ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತೇರಿನಬೀದಿಯ ಸರ್‌ ಎಂ.ವಿಶ್ವೇಶ್ವರಯ್ಯ ವೃತ್ತದ ಬಳಿ ಇರುವ ಅರಳುಮಲ್ಲಿಗೆ ಬಾಗಿಲು ಸರ್ಕಾರಿ ಶಾಲೆ ಮೈದಾನ ಸಂಪೂರ್ಣ ನೀರು ತುಂಬಿಕೊಂಡು ಕೆರೆಯಂತಾಗಿತ್ತು. ದೇವರ ದಾಸಿಮಯ್ಯ ರಸ್ತೆ ಜಲಾವೃತವಾಗಿತ್ತು. ಸಂಜಯನಗರ, ಕರೇನಹಳ್ಳಿ, ಚೈತನ್ಯನಗರ, ಕಚೇರಿ ಪಾಳ್ಯ, ವೀರಭದ್ರನಪಾಳ್ಯ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು.