ಸಾರಾಂಶ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ ಸತತವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಶಿರಾಡಿ ಘಾಟ್ ಪ್ರದೇಶದ ಸಕಲೇಶಪುರ ತಾಲೂಕಿನ ಮಾರ್ನಳ್ಳಿ ದೊಡ್ಡತಪ್ಪುಲು ಎಂಬಲ್ಲಿ ನಿರಂತರ ಭೂ ಕುಸಿತವುಂಟಾಗುತ್ತಿದ್ದು ಬುಧವಾರದಂದು ರಸ್ತೆಗೆ ಅಪ್ಪಳಿಸಿದ ಮಣ್ಣಿನ ರಾಶಿಯಲ್ಲಿ ಮೂರು ವಾಹನಗಳು ಸಿಲುಕಿಕೊಂಡು ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಯಿತು. ಬುಧವಾರ ಸಂಭವಿಸಿದ ಭೂಕುಸಿತಕ್ಕೆ ಹೆದ್ದಾರಿಯಲ್ಲಿ ಸಂಪೂರ್ಣ ತಡೆಯುಂಟಾಗಿದ್ದು, ತೆರವು ಕಾರ್ಯಾಚರಣೆ ಪೂರ್ಣಗೊಳ್ಳುವವರೆಗೆ ಎಲ್ಲ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಮಂಗಳೂರು- ಬೆಂಗಳೂರು ಸಂಚಾರಕ್ಕೆ ವಾಹನ ಸವಾರರು ಪರ್ಯಾಯ ರಸ್ತೆಯನ್ನು ಬಳಸುವಂತೆ ಜಿಲ್ಲಾಡಳಿತ ತಿಳಿಸಿದೆ. ಹೆದ್ದಾರಿ ಅಗಲೀಕರಣ ಕಾಮಗಾರಿಯ ಕಾರಣಕ್ಕೆ ಕತ್ತರಿಸಲ್ಪಟ್ಟ ಗುಡ್ಡಗಳ ಭಾಗದಲ್ಲಿ ಭಾರೀ ಮಳೆಗೆ ಕಳೆದ ಕೆಲ ದಿನಗಳಿಂದ ಭೂ ಕುಸಿತ ಉಂಟಾಗುತ್ತಿದೆ. ಅಲ್ಲಲ್ಲಿ ಸಂಭವಿಸಿದ ಭೂಕುಸಿತದ ಮಣ್ಣುಗಳನ್ನು ತೆರವು ಮಾಡಿಕೊಂಡು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿತ್ತು. ಅದರಂತೆ ಬುಧವಾರವೂ ಮಣ್ಣು ತೆರವುಗೊಂಡ ಬಳಿಕ ಸಂಚಾರಕ್ಕೆ ಅನುಮತಿ ನೀಡಲಾಯಿತು. ಘನ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುವಾಗ ಏಕಾಏಕಿ ಗುಡ್ಡದಿಂದ ಮತ್ತೆ ಮಣ್ಣು ಕುಸಿದು ಎರಡು ಕಂಟೈನರ್‌ಗಳು ಹಾಗೂ ಟ್ಯಾಂಕರೊಂದು ಮಣ್ಣಿನಡಿಗೆ ಸಿಲುಕಿವೆ. ಚಾಲಕರು ಮತ್ತು ನಿರ್ವಾಹಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.