ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಅವಳಿ ನಗರದಲ್ಲಿ ನಡೆಯುತ್ತಿರುವ ಕೃಷಿ ಪರಿವರ್ತನೆ ಭೂಮಿಯ ವಿಚಾರವಾಗಿ ಲೇಔಟ್‌ಗಳ ಸದ್ದು ಮತ್ತೇ ಧ್ವನಿ ಪಡೆದುಕೊಂಡು ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಪ್ರಮುಖ ಸುದ್ದಿಯಾಗಿದೆ.ಮಂಗಳವಾರ ನಗರಸಭೆ ಸಾಮಾನ್ಯ ಸಭೆಯಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿ, ಹೊಸ ಲೇಔಟ್‌ಗಳ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ವ್ಯವಸ್ಥಿತ ಕಾರ್ಯಗಳಿಲ್ಲದೆ ಮೂಲಭೂತ ಸೌಕರ್ಯಗಳಿಲ್ಲದಿದ್ದರೂ ನಿವೇಶನ ಮಾರಾಟಕ್ಕೆ ಅನುಕೂಲತೆ ಮಾಡುತ್ತಿದ್ದು, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಲಾಭದೊಂದಿಗೆ ನಗರಸಭೆಗೆ ಬಲವಾದ ಆರ್ಥಿಕ ಹೊಡೆತ ಬೀಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಸದಸ್ಯ ಸಂಜಯ ತೆಗ್ಗಿ ಮಾತನಾಡಿ, ೮-೧೦ ಲೇಔಟ್‌ಗಳು ಈಚೆಗೆ ಆಗಿವೆ. ಅವುಗಳಲ್ಲಿ ಒಂದೇ ಒಂದು ಉದ್ಯಾನವನ ನಿರ್ವಹಣೆಯಾಗಿಲ್ಲ. ನಗರಸಭೆ, ಪ್ರಾಧಿಕಾರ ಮತ್ತು ತೋಟಗಾರಿಕೆ ಇಲಾಖೆಗಳ ನಿರ್ಲಕ್ಷ್ಯದಿಂದ ಈ ರೀತಿ ಅವ್ಯವಸ್ಥೆಯಾಗಿದೆ. ಹೊಸ ಲೇಔಟ್‌ಗಳಲ್ಲಿ ಒಂದೇ ಒಂದು ಉದ್ಯಾನವನವಾಗಿದ್ದರೇ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ತುಂಬಿದ ಸಭೆಯಲ್ಲಿ ಸವಾಲೆಸೆದರು. ಇದಕ್ಕೆ ಬಸವರಾಜ ಗುಡ್ಡೋಡಗಿ, ಯಲ್ಲಪ್ಪ ಕಟಗಿ, ಚಿದಾನಂದ ಹೊರಟ್ಟಿ ಧ್ವನಿಗೂಡಿಸಿ, ಉದ್ಯಾನವನಗಳೆಲ್ಲ ರಸ್ತೆಗಳಾಗಿ ಪರಿವರ್ತನೆಯಾಗುತ್ತಿವೆ ಎಂದು ಗಂಭೀರವಾಗಿ ಆರೋಪಿಸಿದರು.ಸದಸ್ಯ ಯೂನಸ್ ಚೌಗಲಾ ಮಾತನಾಡಿ, ಕೊಳವೆ ಬಾವಿಯಲ್ಲಿ ಅವ್ಯವಹಾರ ನಡೆಯುತ್ತಿದೆ. ಇದಕ್ಕೆ ನಗರಸಭೆ ಅಧಿಕಾರಿಗಳು ಶಾಮೀಲಾಗಿದ್ದು, ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.ಟೆಂಡರ್ ಪ್ರಕ್ರಿಯೆಗಳ ಅವಧಿಯನ್ನು ಮಧ್ಯಂತರ ಬದಲಾಗಿ ಏಪ್ರಿಲ್‌ದಿಂದ ಮಾರ್ಚವರೆಗೆ ಅಳವಡಿಸುವಂತೆ ಸಭೆ ತೀರ್ಮಾನಿಸಿತು.
ಗಮನಕ್ಕೆ ತರುತ್ತಿಲ್ಲ: ಗರಿಷ್ಠ ₹೨೦ ಲಕ್ಷಗಳವರಗೆ ನಡೆಯುವ ಕಾಮಗಾರಿಗಳ ಬಗ್ಗೆ ನಿಯಮಾನುಸಾರ ಗಮನಕ್ಕೆ ತರದೆ ಮನಬಂದಂತೆ ಕಾರ್ಯನಿರ್ವಹಣೆಯಾಗುತ್ತಿದೆ ಎಂದು ಸ್ಥಾಯಿ ಸಮಿತಿ ಚೇರಮನ್ ಅರುಣ ಬುದ್ನಿ ಬೇಸರ ಹೊರಹಾಕಿದರು.ಸವಾಲಾದ ಶೌಚಾಲಯ:ಅವಳಿ ನಗರಾದ್ಯಂತವಿರುವ ಶೌಚಾಲಯ ನಿರ್ವಹಣೆಗೆ ಯಾವುದೇ ಅಡ್ಡಿಯಾಗದಂತೆ ಮೊದಲ ಆದ್ಯತೆ ನೀಡಬೇಕೆಂದು ಸಂಜಯವ ತೆಗ್ಗಿ ಮಂಡಿಸಿದ ವಿಷಯಕ್ಕೆ ಸಭೆ ಒಮ್ಮತದ ನಿರ್ಧಾರ ಮಾಡಿದೆ. ಸಾರ್ವಜನಿಕ ಅನುಕೂಲಕ್ಕಾಗಿ ನಿರ್ವಹಣೆಯಾಗುವ ಪ್ರತಿಯೊಂದಕ್ಕೂ ಸಹಕಾರ ನೀಡುವಂತೆ ಸದಸ್ಯರು ಅಧಿಕಾರಿಗಳಿಗೆ ಸೂಚಿಸಿದರು.ಸ್ಮಶಾನ ಅಭಿವೃದ್ಧಿಗೆ ಆದ್ಯತೆ :
ಅವಳಿ ನಗರಾದ್ಯಂತವಿರುವ ಸ್ಮಶಾನಗಳಲ್ಲಿನ ವಿದ್ಯುತ್ ದೀಪ, ಕುಡಿಯುವ ನೀರು ಹಾಗೂ ಇತರೆ ಸೌಕರ್ಯಗಳ ಬಗ್ಗೆ ಸಭೆ ಆದ್ಯತೆ ನೀಡಲು ನಿರ್ಧರಿಸಿತು.ಬನಹಟ್ಟಿಯ ಸೋಮವಾರ ಪೇಟೆ ಸಮಸ್ತ ದೈವ ಮಂಡಳಿಯ ಅಶೋಕ ಕಾಲನಿಯಲ್ಲಿರುವ ಕುಸ್ತಿ ಮೈದಾನ ಅತಿಕ್ರಮಣದ ಬಗ್ಗೆ ಗಂಭೀರವಾಗಿ ಪರಿಗಣಿಸಿ ಮೋಜಣಿ ನಡೆಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಲು ಮತ್ತು ನಗರಸಭೆ ಆಸ್ತಿಗಳ ಅತಿಕ್ರಮಣ ತಡೆಯುವತ್ತ ಕಠಿಣ ಕ್ರಮಕೈಗೊಳ್ಳಲು ಸಭೆಯು ಸಮ್ಮತಿಸಿತು.ಕುಡಿಯುವ ನೀರು, ಅಗತ್ಯ ಸಾಮಗ್ರಿ, ಕಸ ವಿಲೇವಾರಿ ಹಾಗು ಗುತ್ತಿಗೆ ಕಾರ್ಮಿಕರು ಸೇರಿದಂತೆ ಅನೇಕ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆದವು.
ನಗರಾಧ್ಯಕ್ಷ ವಿದ್ಯಾ ದಭಾಡಿ, ಉಪಾಧ್ಯಕ್ಷೆ ದೀಪಾ ಗಾಡಿವಡ್ಡರ, ಸ್ಥಾಯಿ ಸಮಿತಿ ಚೇರಮನ್ ಅರುಣ ಬುದ್ನಿ, ಪೌರಾಯುಕ್ತ ಜಗದೀಶ ಈಟಿ, ಶ್ರೀಶೈಲ ಬೀಳಗಿ, ಶಿವಾನಂದ ಬುದ್ನಿ, ಚಿದಾನಂದ ಹೊರಟ್ಟಿ, ಯಲ್ಲಪ್ಪ ಕಟಗಿ, ಗೌರಿ ಮಿಳ್ಳಿ, ದುರ್ಗವ್ವ ಹರಿಜನ ಸೇರಿದಂತೆ ಅನೇಕ ಸದಸ್ಯರು ಉಪಸ್ಥಿತರಿದ್ದರು.