ಅಗಲಕೋಟೆ ಸೂತ್ರದ ಬೊಂಬೆಯಾಟ ದೇಶ ಮಟ್ಟದಲ್ಲಿ ಪ್ರಸಿದ್ಧಿ

| Published : Oct 07 2024, 01:34 AM IST

ಸಾರಾಂಶ

ಮಾಗಡಿ: ತಾಲೂಕಿನ ಅಗಲಕೋಟೆ ಶ್ರೀ ವಿನಾಯಕ ಸೂತ್ರದ ಬೊಂಬೆ ಮೇಳ ತಂಡ ನಾಯಕ ಎ.ಆರ್.ಸತ್ಯನಾರಾಯಣ ತಮ್ಮ ಕುಟುಂಬದ ತಲೆಮಾರುಗಳಿಂದ ಬೆಳೆಸಿಕೊಂಡು ಬಂದ ಸೂತ್ರದ ಬೊಂಬೆ ಆಟವನ್ನು ಪ್ರದರ್ಶನವನ್ನು ಇಂದಿಗೂ ಮುಂದುವರೆಸಿಕೊಂಡು ಬಂದಿದ್ದಾರೆ. ಜತೆಗೆ ಇಂದಿನ ಪೀಳಿಗೆಗೆ ಸೂತ್ರದ ಗೊಂಬೆಯ ಪರಿಚಯವನ್ನು ಮಾಡಿಕೊಡುತ್ತಿರುವುದು ವಿಶೇಷವಾಗಿದೆ.

ಮಾಗಡಿ: ತಾಲೂಕಿನ ಅಗಲಕೋಟೆ ಶ್ರೀ ವಿನಾಯಕ ಸೂತ್ರದ ಬೊಂಬೆ ಮೇಳ ತಂಡ ನಾಯಕ ಎ.ಆರ್.ಸತ್ಯನಾರಾಯಣ ತಮ್ಮ ಕುಟುಂಬದ ತಲೆಮಾರುಗಳಿಂದ ಬೆಳೆಸಿಕೊಂಡು ಬಂದ ಸೂತ್ರದ ಬೊಂಬೆ ಆಟವನ್ನು ಪ್ರದರ್ಶನವನ್ನು ಇಂದಿಗೂ ಮುಂದುವರೆಸಿಕೊಂಡು ಬಂದಿದ್ದಾರೆ. ಜತೆಗೆ ಇಂದಿನ ಪೀಳಿಗೆಗೆ ಸೂತ್ರದ ಗೊಂಬೆಯ ಪರಿಚಯವನ್ನು ಮಾಡಿಕೊಡುತ್ತಿರುವುದು ವಿಶೇಷವಾಗಿದೆ.

ದಸರಾ ಹಬ್ಬದ ಪ್ರಯುಕ್ತ ಮನೆಗಳಲ್ಲಿ ಗೊಂಬೆಗಳನ್ನು ಕುರಿಸಿ ಪೂಜೆ ಸಲ್ಲಿಸಲಾಗುತ್ತದೆ. ಆಗಲಕೋಟೆಯ ಸೂತ್ರದ ಬೊಂಬೆ ಪ್ರದರ್ಶನ ಆಕರ್ಷಣಿಯವಾಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ.

ಸೂತ್ರದ ಬೊಂಬೆ ಇತಿಹಾಸ: ಎರಡು ತಲೆಮಾರಿನ ಸಲಾಕೆ ಬೊಂಬೆಯಾಟದ ಕಲೆ ಇನ್ನೂರು ವರ್ಷಗಳ ಇತಿಹಾಸವಿದ್ದು, ನರ್ತನ ಶಿರೋಮಣಿ ಇತ್ಯಾದಿ ಬಿರುದಾಂಕಿತರಾದ ದಿ. ಎ.ವಿ. ನರಸಿಂಗರಾಯರ ಮೊಮ್ಮಗನಾದ ದಿ. ಎ.ಆರ್.ರಂಗನಾಥ ರಾವ್‌ಗೆ ಈ ಬೊಂಬೆ ಆಟದಲ್ಲಿ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ದೊರಕಿದ್ದು, ಇವರ ಸಹೋದರ ದಿ.ಎಂ.ಆರ್. ರಾಮಯ್ಯರ ಮಗನಾದ ಎ.ಆರ್. ಸತ್ಯನಾರಾಯಣ ಈ ಬೊಂಬೆಯಾಟದ ಕಲೆಯನ್ನು 40 ವರ್ಷಗಳಿಗೂ ಮಿಗಿಲಾಗಿ ಕರಗತ ಮಾಡಿಕೊಂಡಿದ್ದಾರೆ.

ಸತ್ಯನಾರಾಯಣ ನಮ್ಮ ತಂಡದೊಡನೆ ನವದೆಹಲಿ, ಚೆನ್ನೈ, ತಿರುಪತಿ, ಮೊದಲಾದ ಪ್ರಮುಖ ಸ್ಥಳಗಳಷ್ಟೆ ಅಲ್ಲದೆ ಕರ್ನಾಟಕದಾದ್ಯಂತ ಪ್ರಮುಖ ನಗರಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಕರ್ನಾಟಕದಲ್ಲಿ ಹಿಂದೆ ರಾಜ್ಯಪಾಲರಾಗಿದ್ದ ಅಶೋಕನಾಥ್ ಬ್ಯಾನರ್ಜಿ ಸಮ್ಮುಖದಲ್ಲಿಯೂ ಪ್ರದರ್ಶನವನ್ನು ನೀಡಿ ಅವರ ಮೆಚ್ಚುಗೆಗೂ ಪಾತ್ರರಾದ್ದಾರೆ. ಇವರು ಬೊಂಬೆಗಳನ್ನು ಆಡಿಸುವುದಲ್ಲದೆ ಪ್ರಸಂಗಗಳಿಗೆ ಸೂಕ್ತವಾದ ಬೊಂಬೆಗಳನ್ನು ಸ್ವತಹ ಮಾಡಿಕೊಳ್ಳುವುದರಲ್ಲಿಯೂ ಶುದ್ಧ ಹಸ್ತನಾಗಿದ್ದಾರೆ. ಇವರ ಬಳಿ ಇರುವ ಬೊಂಬೆಗಳು ಕರ್ನಾಟಕದಲ್ಲಿರುವ ಎಲ್ಲಾ ಬೊಂಬೆಗಳ ಪೈಕಿ ಅತ್ಯಂತ ಪ್ರಾಚೀನವಾದ ಹಾಗೂ ಸುಂದರವಾಗಿರುತ್ತವೆ. ಬೊಂಬೆಗಳ ಚಿತ್ರಗಳನ್ನು ಅನೇಕ ವಿದೇಶಿಯರು ಚಿತ್ರಿಸಿಕೊಂಡು ತಾವು ಬರೆದಿರುವ ಪುಸ್ತಕಗಳಲ್ಲಿ ಪ್ರಕಟಿಸಿರುತ್ತಾರೆ.

ಇಂದಿನ ತಾಂತ್ರಿಕ ಯುಗದಲ್ಲಿಯೂ ಸಮಷ್ಟಿ ಕುಟುಂಬದಲ್ಲಿರುವ ಇವರ ಮಕ್ಕಳು, ಮೊಮ್ಮಕ್ಕಳಾದಿಯಾಗಲಿ ಎಲ್ಲರೂ ಈ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಕಾರಣಗಳಿಂದ ಈ ಅಪರೂಪದ ಗೊಂಬೆಯಾಟದ ಕಲೆಯ ಕೊಂಡಿ ಕಳಚದೆ ಮುಂದುವರೆಸಿಕೊಂಡು ಹೋಗುವ ಮನೆತನ ಇವರದಾಗಿದೆ.

ಈಗಿನ ವಿದ್ಯುನ್ಮಾನ ಯುಗದ ಸಂಕೇತಗಳಾದ ದೂರದರ್ಶನ, ಸಿನಿಮಾ, ಮೊಬೈಲ್, ದೂರವಾಣಿ ಇತ್ಯಾದಿಗರೊಡನೆ ಸ್ಪರ್ಧಿಸಬೇಕಾಗಿರುವ ಪರಿಸ್ಥಿತಿ ಇದ್ದರೂ ಕಾಲಕ್ಕೆ ತಕ್ಕಂತೆ ಪ್ರದರ್ಶನಗಳನ್ನು ಬದಲಾವಣೆ ಮಾಡಿಕೊಂಡು ಹಳತು ಹೊಸತರ ಸಮತೊಲನದಿಂದ ಪ್ರದರ್ಶನವನ್ನು ಕಳೆಗಟ್ಟುವಂತೆ ಮಾಡಿದ್ದಾರೆ.