ಕನ್ನಡಪ್ರಭ ವಾರ್ತೆ ವಿಧಾನಸಭೆ

ರಾಜ್ಯದಲ್ಲಿ ಒಂದನೇ ತರಗತಿಗೆ ದಾಖಲಾಗುವ ಮಗು ಜೂ.1ಕ್ಕೆ ಕಡ್ಡಾಯವಾಗಿ 6 ವರ್ಷ ಪೂರೈಸಬೇಕೆಂಬ ನಿಯಮದಲ್ಲಿ 60 ದಿನಗಳ ರಿಯಾಯಿತಿ ನೀಡಿದ್ದು, ಅದರಂತೆ ಆ.1ಕ್ಕೆ 6 ವರ್ಷ ಪೂರೈಸಿದ ಮಗುವಿಗೂ ದಾಖಲಾತಿ ನೀಡಲು ಕಾಯಂ ತೀರ್ಮಾನ ಮಾಡಲಾಗಿದೆ.

ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ ನೀಡಿದ್ದು, ‘1ನೇ ತರಗತಿಗೆ ಜೂ.1ರ ವೇಳೆಗೆ 6 ವರ್ಷ ಪೂರೈಸಬೇಕೆಂಬ ನಿಯಮದಿಂದ ಕೆಲ ಪೋಷಕರು ಗಾಬರಿಯಲ್ಲಿದ್ದಾರೆ. ನಮ್ಮ ಬಳಿ ಹಾಗೂ ಹಲವು ಕಚೇರಿಗಳಿಗೆ ಹೋಗಿ ವಿನಾಯಿತಿ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಪೋಷಕರಲ್ಲಿ ಗೊಂದಲ ಉಂಟಾಗುವುದು ಬೇಡ ಎಂಬ ಕಾರಣಕ್ಕೆ ಕರ್ನಾಟಕ ಶಿಕ್ಷಣ ಕಾಯ್ದೆ-1983ರ ಸೆಕ್ಷನ್‌ 20ರ ಪ್ರಕಾರ 1ನೇ ತರಗತಿಗೆ ದಾಖಲಾಗಲು 60 ದಿನಗಳ ವಿನಾಯಿತಿ ನೀಡಲಾಗಿದೆ’ ಎಂದು ಹೇಳಿದರು.

ಕಾಯಂ ಪರಿಹಾರ ಕಲ್ಪಿಸಲು ಕಾನೂನು:

ದಾಖಲಾತಿ ತಂತ್ರಾಂಶದಲ್ಲೂ ಇದಕ್ಕೆ ಅವಕಾಶ ಮಾಡಿಕೊಡಲಾಗಿದೆ. 6 ವರ್ಷ ಕಡ್ಡಾಯ ನಿಯಮದಿಂದಾಗಿ ಎಲ್‌ಕೆಜಿ, ಯುಕೆಜಿ ದಾಖಲಾತಿಗೂ ತೊಂದರೆ ಆಗುತ್ತದೆ. ಇದಕ್ಕಾಗಿ ಪ್ರತ್ಯೇಕ ಕಾನೂನು ತಂದು ಕಾಯಂ ಆಗಿ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಶಾಸನಬದ್ಧ ಕಾಯ್ದೆ ಅಥವಾ ನಿಯಮ ತಂದು ಮುಂದಿನ ಅಧಿವೇಶನದಲ್ಲಿ ಮಂಡಿಸುತ್ತೇನೆ ಎಂದು ಮಧು ಬಂಗಾರಪ್ಪ ಹೇಳಿದರು.


ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ್, ಪ್ರತಿ ವರ್ಷವೂ ಇದೇ ಸಮಸ್ಯೆ ಉಂಟಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಿ ಎಂದರು.

ಆಗ ಮಧು ಬಂಗಾರಪ್ಪ, ಕಳೆದ ವರ್ಷವೂ ನಾವು ಸಡಿಲಿಕೆ ನೀಡಿದ್ದೆವು. ಪ್ರತಿ ವರ್ಷವೂ ಈ ಸಮಸ್ಯೆ ಆಗದಿರುವಂತೆ ಶಾಸನಬದ್ಧ ವ್ಯವಸ್ಥೆ ತರುತ್ತೇವೆ. ಇದಕ್ಕಾಗಿ ಕಾನೂನನ್ನು ಜಾರಿಗೆ ತರುತ್ತೇವೆ ಎಂದು ಹೇಳಿದರು.