ಎಲ್ಲ ಉತ್ಪನ್ನಗಳ ಏಜೆನ್ಸಿ ಕನ್ನಡಿಗರಿಗೆ ಸಿಗಬೇಕು: ನಾರಾಯಣಗೌಡ

| Published : Feb 02 2025, 01:02 AM IST

ಎಲ್ಲ ಉತ್ಪನ್ನಗಳ ಏಜೆನ್ಸಿ ಕನ್ನಡಿಗರಿಗೆ ಸಿಗಬೇಕು: ನಾರಾಯಣಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ್ಯ ಉದ್ಯಾನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ‘ಮಹಾ ಸಂಘರ್ಷ ಯಾತ್ರೆ ಉದ್ಘಾಟಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಮಾರಾಟ ಮಾಡುವ ಎಲ್ಲ ಉತ್ಪನ್ನಗಳ ಏಜೆನ್ಸಿ ಕನ್ನಡಿಗರಿಗೆ ಸಿಗಬೇಕು. ಎಲ್ಲ ಉತ್ಪನ್ನಗಳಲ್ಲಿ ಬರಹಗಳು ಶೇ.60ರಷ್ಟು ಕನ್ನಡದಲ್ಲಿ ಇರುವಂತೆ ರಾಜ್ಯ ಸರ್ಕಾರ ಹೊಸ ಕಾನೂನು ರೂಪಿಸುವವರೆಗೆ ಹೋರಾಟ ನಡೆಸುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಎಚ್ಚರಿಸಿದರು.

ಶನಿವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಕರ್ನಾಟಕ ರಕ್ಷಣಾ ವೇದಿಕೆ ‘ಮಹಾ ಸಂಘರ್ಷ ಯಾತ್ರೆ’ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಉತ್ತರ ರಾಜ್ಯಗಳ ಹೆಚ್ಚುವರಿ ಜನರನ್ನು ದಕ್ಷಿಣಕ್ಕೆ ತುಂಬುವ ಕಾರ್ಯ ಹಲವು ವರ್ಷಗಳಿಂದ ನಡೆಯುತ್ತಿವೆ. ಇದರಿಂದ ಯಾವುದೇ ರೀತಿಯ ವಸ್ತುಗಳ ಮಾರಾಟದ ಏಜೆನ್ಸಿಗಳು ಪರಭಾಷಿಕರ ಕೈ ಸೇರುತ್ತಿವೆ. ಈ ಏಜೆನ್ಸಿಗಳನ್ನು ಪಡೆದ ಉತ್ತರ ರಾಜ್ಯದವರು ತಮ್ಮದೇ ರಾಜ್ಯದವರನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಿದ್ದು, ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದ್ದಾರೆ. ಹಾಗಾಗಿ ಕನ್ನಡಿಗರಿಗೆ ಏಜೆನ್ಸಿಯೂ ಇಲ್ಲ, ನೌಕರಿಯೂ ಇಲ್ಲದಂತ ಸ್ಥಿತಿ ಇದ್ದು, ರಾಜ್ಯ ಸರ್ಕಾರ ಕ್ರಮಕೈಗೊಂಡು ಕನ್ನಡರಿಗರಿಗೆ ಏಜೆನ್ಸಿ ಮತ್ತು ನೌಕರಿ ಸಿಗುವಂತೆ ಕಾನೂನು ಮಾಡಬೇಕೆಂದು ಆಗ್ರಹಿಸಿದರು.

ರಾಜ್ಯದಲ್ಲಿರುವ ಎಲ್ಲ ಹಣಕಾಸು ಸಂಸ್ಥೆಗಳ ‘ಸಿ’ ಮತ್ತು ‘ಡಿ’ ದರ್ಜೆ ಹುದ್ದೆಗಳು ಕನ್ನಡಿಗರಿಗೆ ಸಿಗುವಂತೆ ಕಾನೂನು ಜಾರಿಗೊಳ್ಳಬೇಕು. ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಎಲ್ಲ ಬಗೆಯ ರಾಷ್ಟ್ರೀಯ, ಖಾಸಗಿ, ಗ್ರಾಮೀಣ, ಸಹಕಾರಿ ಬ್ಯಾಂಕ್, ಫೈನಾನ್ಸ್‌ಗಳು, ಚಿನ್ನದ ಅಡಮಾನ ಸಂಸ್ಥೆಗಳು, ಜೀವವಿಮಾ ಸಂಸ್ಥೆಗಳು, ಆರೋಗ್ಯ ವಿಮಾ ಸಂಸ್ಥೆಗಳು ಮತ್ತು ಇತರ ಯಾವುದೇ ಸ್ವರೂಪದ ಹಣಕಾಸು ಸಂಸ್ಥೆಗಳಲ್ಲಿ ಸಿ ಮತ್ತು ಡಿ ದರ್ಜೆಯ ಶೇ‌.100ರಷ್ಟು ಹುದ್ದೆಗಳು ಮತ್ತು ಇತರೆ ಹುದ್ದೆಗಳಲ್ಲಿ ಶೇ.60ರಷ್ಟು ಹುದ್ದೆಗಳು ಕನ್ನಡಿಗರಿಗೆ ನೀಡಬೇಕು. ಈ ಬೇಡಿಕೆಗಳು ಈಡೇರುವವರೆಗೆ ಕರವೇ ವಿರಮಿಸುವುದಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಗೌರವಾಧ್ಯಕ್ಷರಾದ ಅರುಣಾಚಲಂ, ಸುರೇಶ್, ಮುಖಂಡರಾದ ಕನ್ನಡಸತ್ಯ ರಂಗಣ್ಣ, ತಿಮ್ಮೇಶ್, ಆನಂದ ಮೊದಲಿಗೆರೆ, ರಾಜ್‌ಗುರು ಹೊಸಕೋಟೆ ಮತ್ತಿತರರು ಹಾಜರಿದ್ದರು.ಕನ್ನಡಿಗರು ಎಲ್ಲಿಗೆ ಹೋಗಬೇಕು?

ಉತ್ತರ ಭಾರತದ ಜನರು ಬದುಕಿಗಾಗಿ ಬೆಂಗಳೂರು, ಮುಂಬೈ, ಗೋವಾ, ಹೈದ್ರಾಬಾದ್‌ಗೆ ಹೋಗುತ್ತಾರೆ. ಕನ್ನಡಿಗರು ಇನ್ನೆಲ್ಲಿಗೆ ಹೋಗಬೇಕು. ನಮ್ಮ ಬದುಕನ್ನು ನಮ್ಮ ನೆಲದಲ್ಲೇ ಕಟ್ಟಿಕೊಳ್ಳಬೇಕು. ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕೊಡಬೇಕೆಂದು ಸಚಿವ ಸಂಪುಟ ತೀರ್ಮಾನ ತೆಗೆದುಕೊಂಡಾಗ ಮೋಹನ್‌ದಾಸ್ ಪೈ ವಿರೋಧಿಸಿ, ನಾವು ಪಕ್ಕದ ರಾಜ್ಯಕ್ಕೆ ಹೋಗಬೇಕಾಗುತ್ತದೆ ಎಂದಿದ್ದರು. ಅವರಿಗೆ ಯಾರು ಬೇಡ ಅಂದರು, ನೀವು ಇಲ್ಲವೆಂದರೆ ಕನ್ನಡಿಗರು ಉಪವಾಸ ಇರುತ್ತಾರೆಯೇ?. ಮೋಹನ್‌ದಾಸ್ ಪೈ ನೀವೂ ಹೋಗಿ ನಿಮ್ಮೊಂದಿಗೆ ಯಾರಾದರೂ ಬಂದರೆ ಅವರನ್ನು ಕರೆದುಕೊಂಡು ಹೋಗಿ ಎಂದು ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯ ಅವರಿಗೆ ಕನ್ನಡದ ಬಗ್ಗೆ ಅಲ್ಪಸ್ವಲ್ಪ ನೈಜವಾದ ಕಾಳಜಿ ಇದ್ದರೆ, ಎಲ್ಲ ಉತ್ಪನ್ನಗಳ ಮೇಲೆ ಕನ್ನಡ ಇರಬೇಕು. ಎಲ್ಲ ಉತ್ಪನ್ನ ಏಜೆನ್ಸಿಗಳು ಕನ್ನಡಿಗರಿಗೆ ಸಿಗಬೇಕು. ಬ್ಯಾಂಕ್‌ ಉದ್ಯೋಗಗಳು ಕನ್ನಡಿಗರಿಗೆ ಸಿಗಬೇಕು ಎನ್ನುವ ಕಾಯ್ದೆಯನ್ನು ಜಾರಿಗೊಳಿಸಿ, ಅಧಿಕಾರ ಶಾಶ್ವತ ಅಲ್ಲ. ನೀವು ಮಾಡುವಂತ ಈ ಕಾಯ್ದೆ ಶಾಶ್ವತವಾಗಿರುತ್ತದೆ. ಕನ್ನಡಿಗರು ನಿಮ್ಮನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುತ್ತಾರೆ.

ಟಿ.ಎ.ನಾರಾಯಣಗೌಡ, ಕರವೇ ರಾಜ್ಯಾಧ್ಯಕ್ಷ