ಏಜೆಂಟ್‌ ನಂಬಿ ಸೌದಿಯಲ್ಲಿ ಕಷ್ಟಕ್ಕೆ ಸಿಲುಕಿದ್ದವ ವಾಪಸ್‌ ತಾಯ್ನಾಡಿಗೆ

| Published : Jul 17 2024, 12:52 AM IST

ಏಜೆಂಟ್‌ ನಂಬಿ ಸೌದಿಯಲ್ಲಿ ಕಷ್ಟಕ್ಕೆ ಸಿಲುಕಿದ್ದವ ವಾಪಸ್‌ ತಾಯ್ನಾಡಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಮಹಮ್ಮದ್‌ ಫೀರ್‌ ಎಂಬ ಏಜೆಂಟ್, ಸೌದಿಯಲ್ಲಿ ಅಮೇಜಾನ್ ಕಂಪನಿಯಲ್ಲಿ ಸಹಾಯಕ ಹುದ್ದೆ ಕೊಡಿಸುವುದಾಗಿ 1 ಲಕ್ಷ ರು. ಪಡೆದು ಕಳೆದ ಸೆಪ್ಟಂಬರ್‌ನಲ್ಲಿ ಸೌದಿಗೆ ಕಳುಹಿಸಿಕೊಟ್ಟಿದ್ದ. ಸೌದಿ ತೆರಳುವ ಮುನ್ನ ಬಾಂಬೆಯಲ್ಲಿ ಒಂದು ತಿಂಗಳು ಇರಿಸಿದ್ದರು. ಆ ನಂತರ ಪ್ರವಾಸಿ ಹೆಸರಿನಲ್ಲಿ ಸೌದಿಗೆ ಕಳುಹಿಸಿಕೊಟ್ಟಿದ್ದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರಿನ ಶಿವಾಜಿನಗರದ ಏಂಜೆಟ್‌ ಮೂಲಕ ಉದ್ಯೋಗ ಅರಸಿ ಸೌದಿ ಅರೇಬಿಯಾಕ್ಕೆ ತೆರಳಿ ಸಂಬಳ, ಊಟ, ವಸತಿ ಇಲ್ಲದೇ ಪರದಾಡುತ್ತಿದ್ದ ರಾಮನಗರದ ಮೊಹಮ್ಮದ್ ಅಶ್ಪಾಕ್‌ ಎಂಬ ಯುವಕನ್ನು ರಾಜ್ಯ ಅನಿವಾಸಿ ಭಾರತೀಯ ಸಮಿತಿಯು ಯಶಸ್ವಿಯಾಗಿ ವಾಪಾಸ್‌ ಕರೆ ತಂದಿದೆ.

ಮಹಮ್ಮದ್‌ ಫೀರ್‌ ಎಂಬ ಏಜೆಂಟ್, ಸೌದಿಯಲ್ಲಿ ಅಮೇಜಾನ್ ಕಂಪನಿಯಲ್ಲಿ ಸಹಾಯಕ ಹುದ್ದೆ ಕೊಡಿಸುವುದಾಗಿ 1 ಲಕ್ಷ ರು. ಪಡೆದು ಕಳೆದ ಸೆಪ್ಟಂಬರ್‌ನಲ್ಲಿ ಸೌದಿಗೆ ಕಳುಹಿಸಿಕೊಟ್ಟಿದ್ದ. ಸೌದಿ ತೆರಳುವ ಮುನ್ನ ಬಾಂಬೆಯಲ್ಲಿ ಒಂದು ತಿಂಗಳು ಇರಿಸಿದ್ದರು. ಆ ನಂತರ ಪ್ರವಾಸಿ ಹೆಸರಿನಲ್ಲಿ ಸೌದಿಗೆ ಕಳುಹಿಸಿಕೊಟ್ಟಿದ್ದರು.

ಮೊದಲು ವಿಮಾನ ನಿಲ್ದಾಣದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದರು. ಸೌದಿಗೆ ತೆರಳಿದ ಬಳಿಕ ಏಜೆಂಟ್‌ಗಳು ಬೇರೆ ಬೇರೆ ಕೆಲಸಕ್ಕೆ ಕಳುಹಿಸಿದ್ದರು. ರಿಯಾತ್ ಎಂಬ ಪ್ರದೇಶದಲ್ಲಿ ಉಳಿಸಿದ ಅವಧಿಯಲ್ಲಿ ಸರಿಯಾದ ಊಟ, ವಸತಿ ವ್ಯವಸ್ಥೆಯನ್ನೂ ನೀಡದೆ ಗೃಹ ಬಂಧನದಲ್ಲಿರಿಸಿದ್ದರು. ಅಲ್ಲಿಂದ ತಪ್ಪಿಸಿಕೊಂಡು ಜೆದ್ದಾಗೆ ಬಂದು ಮಸೀದಿಯೊಂದರಲ್ಲಿ ಉಳಿದಿದ್ದರು. ಈ ವೇಳೆ ಅಲ್ಲಿನ ಜೆದ್ದಾ ಕನ್ನಡ ಸಂಘದ ಸದಸ್ಯ ಜಲಾಲ್ ಬೇಗ್ ಅವರು ಸಿಕ್ಕಿದ್ದು, ಅವರ ಬಳಿ ಎಲ್ಲ ವಿಷಯವನ್ನು ಹೇಳಿಕೊಂಡಿದ್ದರು. ನಂತರ ಜೆದ್ದಾ ಕನ್ನಡ ಸಂಘದ ಮಾಜಿ ಅಧ್ಯಕ್ಷ ಮಹಮ್ಮದ್ ಸೈಫ್ ಉದ್ದಿನ್ ಮೂಲಕ ರಾಜ್ಯ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ। ಆರತಿ ಕೃಷ್ಣ ಅವರನ್ನು ಸಂಪರ್ಕಿಸಲಾಯಿತು.

ಆರತಿ ಕೃಷ್ಣ ಅವರು ಸೌದಿ ಅರೇಬಿಯಾದ ರಾಯಭಾರಿ ಕಚೇರಿಯ ಕಾನ್ಸುಲ್‌ ಜನರಲ್‌ ಅವರನ್ನು ಸಂಪರ್ಕಿಸಿ ಎಕ್ಸಿಟ್‌ ಪಾಸ್‌ ದೊರೆಯುವ ವ್ಯವಸ್ಥೆ ಮಾಡಿದರು ಎಂದು ಸುದ್ದಿಗೋಷ್ಠಿಯಲ್ಲಿ ಸೌದಿಯಿಂದ ವಾಪಾಸ್‌ ಬಂದ ಮೊಹಮ್ಮದ್ ಅಶ್ಪಾಕ್‌ ಏಜೆಂಟ್‌ಗಳ ಮೋಸದ ಬಗ್ಗೆ ವಿವರಿಸಿದರು.

ಈ ನಡುವೆ ಕುಟುಂಬಸ್ಥರು ಏಜೆಂಟ್‌ ವಿಚಾರಿಸಿದರೆ ಅಸಡ್ಡೆ ಮತ್ತು ನಿರ್ಲಕ್ಷ್ಯ ಧೋರಣೆ ತೋರಿದರು. ಈ ಬಗ್ಗೆ ಕಳೆದ ಫೆಬ್ರವರಿಯಲ್ಲಿ ಅಶೋಕನಗರ ಪೊಲೀಸ್‌ ಠಾಣೆಗೆ ದೂರು ನೀಡಿದರೂ ಪ್ರಯೋಜವಾಗಲಿಲ್ಲ ಎಂದು ದೂರಿದರು.

ರಾಜ್ಯ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ। ಆರತಿ ಕೃಷ್ಣ ಮಾತನಾಡಿ, ಶಿವಾಜಿನಗರದ ಮಹಮ್ಮದ್‌ ಫೀರ್‌ ಏಜೆಂಟ್‌ ವಿರುದ್ಧ ಕ್ರಮಕ್ಕೆ ಕೈಗೊಳ್ಳಲಾಗುವುದು. ಈ ರೀತಿ ಏಜೆಂಟ್‌ಗಳ ಮೂಲಕ ವಿದೇಶಗಳಿಗೆ ತೆರಳುವವರು ಎಚ್ಚರಿಕೆ ವಹಿಸಬೇಕು. ಉದ್ಯೋಗ ಅರಸಿ ವಿದೇಶಕ್ಕೆ ತೆರಳುವವರು ರಾಜ್ಯ ಅನಿವಾಸಿ ಭಾರತೀಯ ಸಮಿತಿಯಲ್ಲಿ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳಿದರು.

ಗಲ್ಫ್‌ ರಾಷ್ಟ್ರದಲ್ಲಿ ಹೆಚ್ಚಿನ ಪ್ರಕರಣ:

ಏಜೆಂಟ್‌ಗಳಿಂದ ಮೋಸ ಹೋಗಿ ವಿದೇಶದಲ್ಲಿ ಸಮಸ್ಯೆ ಒಳಗಾಗುವವರ ಸಂಖ್ಯೆ ಹೆಚ್ಚಾಗಿ ಗಲ್ಫ್‌ ರಾಷ್ಟ್ರದಲ್ಲಿ ಕಂಡು ಬರುತ್ತಿದೆ. ಉಳಿದಂತೆ ಕಾಂಬೋಡಿಯಾ, ವಿಯಾಟ್ನಾಂನಲ್ಲಿಯೂ ಇದೆ. ಕಳೆದ ಜನವರಿಯಿಂದ ಒಟ್ಟು 18 ಮಂದಿಯನ್ನು ಯಶಸ್ವಿಯಾಗಿ ರಾಜ್ಯಕ್ಕೆ ಕರೆ ತರಲಾಗಿದೆ. ಈ ಪೈಕಿ 15 ಮಂದಿ ಗಲ್ಫ್‌ ರಾಷ್ಟ್ರದಲ್ಲಿ ಸಿಲುಕಿದವರು, ಉಳಿದ ಮೂವರು ಕಾಂಬೋಡಿಯಾ ಮತ್ತು ವಿಯಾಟ್ನಾಂನಲ್ಲಿ ಸಿಲುಕಿದವರು ಎಂದು ಡಾ। ಆರತಿ ಕೃಷ್ಣ ತಿಳಿಸಿದರು.