ನಗರಸಭೆಯಲ್ಲಿ ಸದಸ್ಯರಿಗಿಂತ ಏಜೆಂಟರ ಕೆಲಸ ಬೇಗ ಆಗುತ್ತೆ: ಸದಸ್ಯರ ಅಸಮಾಧಾನ

| Published : May 16 2025, 01:59 AM IST

ನಗರಸಭೆಯಲ್ಲಿ ಸದಸ್ಯರಿಗಿಂತ ಏಜೆಂಟರ ಕೆಲಸ ಬೇಗ ಆಗುತ್ತೆ: ಸದಸ್ಯರ ಅಸಮಾಧಾನ
Share this Article
  • FB
  • TW
  • Linkdin
  • Email

ಸಾರಾಂಶ

ಪೌರಾಯುಕ್ತ ಗಂಗಾಧರ ಬೆಲ್ಲದ, ಕಳೆದ 8- 10 ವರ್ಷಗಳಿಂದ ಕೆಲವರು ತೆರಿಗೆ ಪಾವತಿಸಿಲ್ಲ. ಇತ್ತೀಚಿನ ಎರಡು ವರ್ಷಗಳ ತೆರಿಗೆ ಕಟ್ಟಿ ಇ ಸ್ವತ್ತು ಪಡೆದುಕೊಂಡಿದ್ದಾರೆ. ಹಿಂದಿನವರ ದಾಖಲಾತಿಗಳು ಸರಿಯಾಗಿ ಸಿಗದ ಹಿನ್ನೆಲೆಯಲ್ಲಿ ಇ ಸ್ವತ್ತು ನೀಡಲು ಸಮಸ್ಯೆಯಾಗುತ್ತಿದೆ. ಎಲ್ಲ ದಾಖಲಾತಿ ಸರಿ ಇದ್ದರೆ ಬೇಗ ಸಿಗುತ್ತೆ. ಇಲ್ಲದಿದ್ದರೆ ಸಮಸ್ಯೆಯಾಗುತ್ತದೆ ಎಂದರು.

ಹಾವೇರಿ: ಅರ್ಜಿ ಸಲ್ಲಿಸಿ ನಾಲ್ಕೈದು ತಿಂಗಳಾದರೂ ನಗರಸಭೆಯಿಂದ ಇ ಸ್ವತ್ತು ಉತಾರ ಸಿಗುತ್ತಿಲ್ಲ. ಆದರೆ, ಏಜೆಂಟರ ಕೆಲಸ ಬೇಗ ಆಗುತ್ತದೆ. ಇಂಥ ಪರಿಸ್ಥಿತಿಯಿಂದ ಬೇಸರವಾಗುತ್ತಿದೆ ಎಂದು ನಗರಸಭೆಯ ಕೆಲ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ವಿಶೇಷ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಗುರುವಾರ ಅಧ್ಯಕ್ಷೆ ಶಶಿಕಲಾ ಮಾಳಗಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಗಂಭೀರ ಚರ್ಚೆ ನಡೆಯಿತು. ಇ ಸ್ವತ್ತು ವಿಳಂಬವಾಗುತ್ತಿರುವುದಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಪ್ರತಿಕ್ರಿಯಿಸಿದ ಪೌರಾಯುಕ್ತ ಗಂಗಾಧರ ಬೆಲ್ಲದ, ಕಳೆದ 8- 10 ವರ್ಷಗಳಿಂದ ಕೆಲವರು ತೆರಿಗೆ ಪಾವತಿಸಿಲ್ಲ. ಇತ್ತೀಚಿನ ಎರಡು ವರ್ಷಗಳ ತೆರಿಗೆ ಕಟ್ಟಿ ಇ ಸ್ವತ್ತು ಪಡೆದುಕೊಂಡಿದ್ದಾರೆ. ಹಿಂದಿನವರ ದಾಖಲಾತಿಗಳು ಸರಿಯಾಗಿ ಸಿಗದ ಹಿನ್ನೆಲೆಯಲ್ಲಿ ಇ ಸ್ವತ್ತು ನೀಡಲು ಸಮಸ್ಯೆಯಾಗುತ್ತಿದೆ. ಎಲ್ಲ ದಾಖಲಾತಿ ಸರಿ ಇದ್ದರೆ ಬೇಗ ಸಿಗುತ್ತೆ. ಇಲ್ಲದಿದ್ದರೆ ಸಮಸ್ಯೆಯಾಗುತ್ತದೆ ಎಂದರು.ಮೌಲ್ಯ ಭರಣ ಮಾಡಿ: ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯವರಿಗೆ ಅಮೃತ 2.0 ಯೋಜನೆಯಡಿ ಹೊಸದಾಗಿ ನೀರು ಶುದ್ಧೀಕರಣ ಘಟಕವನ್ನು ನಿರ್ಮಿಸಲು ನಗರಸಭೆ ವ್ಯಾಪ್ತಿಯ ಜಾಗವನ್ನು ಹಸ್ತಾಂತರ ಮಾಡಲಾಗಿದೆ. ಇದು ನಗರಸಭೆ ಆಸ್ತಿಯೇ ಹೊರತು, ಅಧಿಕಾರಿಗಳ ಆಸ್ತಿಯಲ್ಲ. ನಗರಸಭೆ ಹಾಗೂ ಅಧ್ಯಕ್ಷರ ಗಮನಕ್ಕೆ ತರದೇ ಹೇಗೆ ಹಸ್ತಾಂತರ ಮಾಡಿದ್ದೀರಿ. ಆ ಜಾಗದಲ್ಲಿದ್ದ ಐದಾರು ಮರಗಳನ್ನು ತೆರವುಗೊಳಿಸಿರುವುದು ಸರಿಯಲ್ಲ. ತೆರವುಗೊಳಿಸಿರುವ ಮರಗಳ ವ್ಯಾಲ್ಯುವೇಶನ್ ಮಾಡಿಸಿ, ಆ ಹಣವನ್ನು ನಗರಸಭೆಗೆ ಭರಣೆ ಮಾಡುವಂತೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ ಸೂಚಿಸಿದರು.ಸರ್ಕಾರದ ಆದೇಶ: ಸರ್ಕಾರದ ಯಾವುದೇ ಆದೇಶ, ಸುತ್ತೋಲೆ ಬಂದರೂ ಅಧ್ಯಕ್ಷ, ಉಪಾಧ್ಯಕ್ಷರಿಗೆ ಗೊತ್ತಾಗುವುದೇ ಇಲ್ಲ. ಮೊದಲು ನಗರಸಭೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಗಮನಕ್ಕೆ ತರಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಪ್ರಸ್ತುತ ಫಿಲ್ಟರ್ ಹೌಸ್‌ನಲ್ಲಿರುವ ಹಳೆಯ ಸಾಮಗ್ರಿಗಳು ತುಕ್ಕು ಹಿಡಿದು ಹಾಳಾಗುತ್ತಿವೆ. ಶೀಘ್ರದಲ್ಲೇ ಟೆಂಡರ್ ಕರೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.ಹೋರಾಟಗಾರರ ಹೆಸರು ಬರೆಸಿ: ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಹಾವೇರಿ ಜಿಲ್ಲೆ ಅನೇಕ ಹೋರಾಟಗಾರರನ್ನು ನೀಡಿದೆ. ಜಿಲ್ಲೆಯಲ್ಲಿ ಅನೇಕ ಹೋರಾಟಗಾರರು ಜನ್ಮ ತಾಳಿದ್ದಾರೆ. ಅಲ್ಲದೇ ಮೊಟ್ಟಮೊದಲು ಧ್ವಜಾರೋಹಣವನ್ನು ಈ ನಗರಸಭೆಯಲ್ಲಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ಆವರಣದಲ್ಲಿರುವ ಧ್ವಜ ಸ್ತಂಭದ ಬಳಿ ಪಿರಾಮಿಡ್ ಮಾದರಿಯಲ್ಲಿ ಶಾಸನ ನಿರ್ಮಿಸಿ ಅದರಲ್ಲಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಬರೆಯಿಸಬೇಕೆಂದು ನಾಮನಿರ್ದೇಶಿತ ಸದಸ್ಯ ನಾಗರಾಜ ಬಡೆಮ್ಮನವರ ಹೇಳಿದರು. ಈ ವೇಳೆ ಸಭಾಧ್ಯಕ್ಷರು ಮುಂದಿನ ಸಭೆಯಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು.ಕುಡಿಯುವ ನೀರು: ಪ್ರಸಕ್ತ 2025- 26ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ 3.61 ಕೋಟಿ ಮೊತ್ತ ನಿಗದಿ ಪಡಿಸಿದೆ. ಈ ಪೈಕಿ 216 ಲಕ್ಷ ಅನುದಾನದಲ್ಲಿ ಘನತ್ಯಾಜ್ಯ ವಸ್ತು ವಿಲೇವಾರಿಗೆ ಹಾಗೂ ನೀರು ಸರಬರಾಜು ಸಂಬಂಧಿಸಿದಂತೆ 108 ಲಕ್ಷ ನಿಗದಿಪಡಿಸಲಾಗಿದೆ. 144 ಲಕ್ಷ ಅನುದಾನದಲ್ಲಿ ನಗರಸಭೆಯ ವಿವಿಧ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಚರ್ಚಿಸಲಾಯಿತು.ಎಸ್‌ಎಫ್‌ಸಿ ಮುಕ್ತನಿಧಿ ಅನುದಾನದಡಿ ಉಳಿತಾಯಗೊಂಡ ಹಣದಲ್ಲಿ ನಗರಸಭೆ ವಾಹನಗಳನ್ನು ನೆರಳಿನಲ್ಲಿ ನಿಲ್ಲಿಸಲು ಶೆಡ್ ನಿರ್ಮಿಸುವುದು, ಪೌರಕಾರ್ಮಿಕರಿಗೆ ವಿಶ್ರಾಂತಿಗೃಹ ನಿರ್ಮಾಣ, ಜೆಸಿಬಿ, ಲೋಡರ್, ಟ್ರ್ಯಾಕ್ಟರ್ ಟ್ರೇಲರ್, ಕಾಂಪೌಂಡ್‌ ಗೇಟ್ ರಿಪೇರಿ, ಸಿಸಿ ಕ್ಯಾಮರಾ ದುರಸ್ತಿ, ನಗರಸಭೆ ವಾಹನಗಳಿಗೆ ಜಿಪಿಎಸ್ ಅಳವಡಿಸುವುದರ ಬಗ್ಗೆ ಚರ್ಚೆ ನಡೆಯಿತು. ಇನ್ನುಳಿದಂತೆ ವಿವಿಧ ಅನುದಾನದಲ್ಲಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್, ಲ್ಯಾಪಟಾಪ್ ಖರೀದಿಗೆ ಸಹಾಯಧನ, ಸಮುದಾಯ ಕಾರ್ಯಕ್ರಮ ನಿಮಿತ್ತ ಎಸ್ಸಿ ಕಾಲನಿ ಅಭಿವೃದ್ಧಿ ಹೀಗೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಅಧ್ಯಕ್ಷೆ ಶಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಪೌರಾಯುಕ್ತ ಗಂಗಾಧರ ಬೆಲ್ಲದ ಸೇರಿದಂತೆ ನಗರಸಭೆ ಸದಸ್ಯರು ಹಾಗೂ ನಾಮನಿರ್ದೇಶಿತ ಸದಸ್ಯರು, ಅಧಿಕಾರಿಗಳು ಇದ್ದರು.