ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ಭ್ರಷ್ಟಾಚಾರ, ದುರ್ನಡತೆ, ಸುಲಿಗೆಯಂತಹ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಲೋಕಾಯುಕ್ತ ವಿಶೇಷ ತನಿಖಾ ದಳದ ಮುಖ್ಯಸ್ಥ ಎಂ. ಚಂದ್ರಶೇಖರ್ ರವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಎನ್. ಹನುಮಂತರಾಯಪ್ಪ ಆಗ್ರಹಿಸಿದರು.ತಾಲೂಕು ಜೆಡಿಎಸ್ ಘಟಕದ ವತಿಯಿಂದ ಮಂಗಳವಾರ ಎಡಿಜಿಪಿ ಎಂ. ಚಂದ್ರಶೇಖರ್ ರವರ ವಿರುದ್ಧ ಮಂಗಳವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಎಡಿಜಿಪಿ ಚಂದ್ರಶೇಖರ್ ರವರು ಸ್ವತಃ ಹಲವಾರು ಭ್ರಷ್ಟ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಅಂತಹ ವ್ಯಕ್ತಿ ನಮ್ಮ ಪಕ್ಷದ ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಬಗ್ಗೆ ಮಾತನಾಡಿರುವುದು ನಾಚಿಕೆಗೇಡಿನ ಕೆಲಸ. ನಮ್ಮ ಪಕ್ಷದ ನಾಯಕ ಕುಮಾರಸ್ವಾಮಿಯವರು ದಕ್ಷತೆಯಿಂದ, ನೇರವಂತಿಕೆಯಿಂದ ರಾಜಕಾರಣ ಮಾಡಿಕೊಂಡು ಬಂದವರು. ಯಾರನ್ನೋ ಮುಂದೆ ಬಿಟ್ಟು ಇನ್ಯಾರನ್ನೋ ಟೀಕಿಸಲು ಪ್ರೇರೇಪಿಸುವ ಕೆಟ್ಟ ರಾಜಕಾರಣವನ್ನು ಅವರೆಂದು ಮಾಡಿಲ್ಲ ಎಂದು ದೂರಿದರು.ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಹಂದಿಗೆ ಹೋಲಿಸಿರುವ ಎಡಿಜಿಪಿ ಚಂದ್ರಶೇಖರ್ ರವರು ಆ ಹುದ್ದೆಯಲ್ಲಿ ಮುಂದುವರೆಯಲು ಅನರ್ಹರು. ಆತನ ಅಕ್ರಮಗಳ ಬಗ್ಗೆ ಎಚ್.ಡಿ. ಕುಮಾರಸ್ವಾಮಿಯವರು ಮಾತನಾಡಲು ಪ್ರಾರಂಭಿಸಿದ್ದೆ ತಡ, ಗಾಬರಿ ಬಿದ್ದ ಎಡಿಜಿಪಿಯವರು ತೀರಾ ಕೆಳಮಟ್ಟಕ್ಕೆ ಇಳಿದು ನಮ್ಮ ನಾಯಕರನ್ನು ನಿಂದಿಸಿದ್ದಾರೆ. ಕುಮಾರಸ್ವಾಮಿಯವರು ಹಂದಿಯಲ್ಲ. ಎಲ್ಲೆಲ್ಲಿ ಅನ್ಯಾಯವಾಗುತ್ತದೋ ಅಲ್ಲೆಲ್ಲಾ ಹಾಜರಿದ್ದು ಅನ್ಯಾಯ ಮಟ್ಟ ಹಾಕುವ ಶ್ರೀಕೃಷ್ಣ ಪರಮಾತ್ಮನಿದ್ದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆಗಳ ದೂರದ ಬೆಟ್ಟ ತೋರಿಸಿ ಅಧಿಕಾರಕ್ಕೆ ಬಂದ ಈ ಸರ್ಕಾರಕ್ಕೆ ಇರುವುದೇ ಗ್ಯಾರಂಟಿ ಇಲ್ಲ. ಇದು ಸಿ.ಡಿ ಸರ್ಕಾರವೇ ಹೊರತು ಅಭಿವೃದ್ಧಿಯ ಗುರಿಯಿಟ್ಟುಕೊಂಡಿರುವ ಸರ್ಕಾರವಲ್ಲ. ಬಹಳ ದಿನ ಬಾಳುವ ಲಕ್ಷಣಗಳೂ ಕಾಣುತ್ತಿಲ್ಲ. ಇಂತಹ ಸರ್ಕಾರವನ್ನು ಮೆಚ್ಚಿಸಲಿಕ್ಕಾಗಿ ಎಡಿಜಿಪಿ ಎಂ. ಚಂದ್ರಶೇಖರ್ ರವರು ನಾಲಿಗೆ ಹರಿ ಬಿಟ್ಟಿದ್ದಾರೆ. ಅವರನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶಂಕರಮೂರ್ತಿ ಮಾತನಾಡಿ, ರಾಜ್ಯ ಕಂಡ ಅತ್ಯುತ್ತಮ ಮುಖ್ಯಮಂತ್ರಿಗಳಲ್ಲಿ ಒಬ್ಬರಾದ ಎಚ್.ಡಿ ಕುಮಾರಸ್ವಾಮಿಯವರ ಬಗ್ಗೆ ಲೋಕಾಯುಕ್ತ ಎಡಿಜಿಪಿ ತೀರಾ ಕೆಳ ಮಟ್ಟದಲ್ಲಿ ಟೀಕಿಸಿದ್ದು, ಒಬ್ಬ ಅಧಿಕಾರಿ ಸಾರ್ವಜನಿಕವಾಗಿ ಯಾವ ರೀತಿ ಮಾತಾಡಬೇಕು ಎಂಬ ಸಾಮಾನ್ಯ ಜ್ಞಾನವನ್ನೇ ಹೊಂದಿಲ್ಲದಿರುವುದು ದುರಂತ ಎಂದರು.
ಕುಮಾರಸ್ವಾಮಿಯವರ ಮೇಲೆ ಗೂಬೆ ಕೂರಿಸುವ ಅವರ ಪ್ರಯತ್ನಗಳು ಫಲಿಸಲಾರವು. ಅಪ್ಪಟ ರಾಜಕಾರಣಿಯಂತೆ ವರ್ತಿಸಿರುವ ಚಂದ್ರಶೇಖರ ಸಮವಸ್ತ್ರ ಕಳಚಿ ರಾಜಕೀಯ ಮಾಡುವುದು ಒಳಿತು. ವಿರೋಧಿಗಳು ಸಹ ಒಪ್ಪುವಂತಹ ರಾಜಕೀಯ ಮಾಡಿರುವ ಕುಮಾರಸ್ವಾಮಿಯವರ ಕ್ಷಮೆ ಕೇಳಿ, ತಮ್ಮ ಹುದ್ದೆಯ ಘನತೆ ಉಳಿಯಲು ಅವರು ಕೂಡಲೇ ರಾಜೀನಾಮೆ ಕೊಡಬೇಕು. ರಾಜ್ಯ ಸರ್ಕಾರವು ಸಹ ಇಂತಹ ಅಧಿಕಾರಿಗಳ ದುರ್ವರ್ತನೆಯನ್ನು ಗಣನೆಗೆ ತೆಗೆದುಕೊಂಡು ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಕೆಜಿ. ಹನುಮಂತರಾಯ, ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಜಲ್ದಪ್ಪ, ಮೇಟಿಕುರ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಂತಪ್ಪ, ಮುಖಂಡರಾದ ಗುಣಶೇಖರ್, ತಿಮ್ಮರಾಜು, ಲಿಂಗರಾಜು, ತಿಪ್ಪೇಸ್ವಾಮಿ, ದ್ಯಾಮೇಗೌಡ, ವಿ. ಮಂಜುನಾಥ್, ಪಾಂಡುರಂಗನಾಯ್ಕ, ಶಿವಪ್ಪನಾಯಕ, ಗೋವಿಂದರಾಯ, ರವಿಚಂದ್ರಗೌಡ, ಶಿವಣ್ಣ, ಗುಡ್ಡದ ರಂಗಯ್ಯ, ಕರಿಯಣ್ಣ, ಹನುಮಂತಪ್ಪ, ಬಾಲಕೃಷ್ಣ, ಮೋಹನ್, ರಂಗನಾಥ್ ಮುಂತಾದವರು ಹಾಜರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))