ಸಾರಾಂಶ
ಕುಮಟಾ: ಕ್ರೇನ್ ಚಾಲಕ ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇದ್ದುದರಿಂದಲೇ ಅಘನಾಶಿನಿ ನದಿ ಸೇತುವೆ ಕಾಮಗಾರಿಯಲ್ಲಿ ಅವಘಡ ಸಂಭವಿಸಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯವೂ ಇದೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದ್ದಾರೆ.
ಕುಸಿದ ಸೇತುವೆ ಕಾಮಗಾರಿಯನ್ನು ಸ್ಥಳಕ್ಕೆ ತೆರಳಿ ವೀಕ್ಷಿಸಿದ ಶಾಸಕ ಶೆಟ್ಟಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ. ಅದೃಷ್ಟವಶಾತ್ ಯಾರಿಗೂ ಏನೂ ಆಗಿಲ್ಲದಿರುವುದು ದೇವರ ದಯೆ. ಅಘನಾಶಿನಿ ನದಿಗೆ ತಾರಿಬಾಗಿಲದಲ್ಲಿ ನಿರ್ಮಿಸುತ್ತಿರುವ ಸೇತುವೆಯಲ್ಲಿ ಘಟಿಸಿದ ಅವಘಡದ ಬಗ್ಗೆ ತಿಳಿದ ಕೂಡಲೇ ಸ್ಥಳಕ್ಕೆ ಉಪವಿಭಾಗಾಧಿಕಾರಿ ಸಹಿತ ಇತರ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲಿಸಿದ್ದೇನೆ.ಕ್ರೇನ್ ಮೂಲಕ ಕಾಮಗಾರಿ ನಡೆಸುವಾಗ ಆದ ಆಕಸ್ಮಿಕದಿಂದ ಗರ್ಡರ್ ಬೀಮ್ಸ್‌ಗಳು ಸೇತುವೆಯ ಪಿಲ್ಲರ್‌ನಿಂದ ಜಾರಿ ಬೀಳುವಂತಾಯಿತು ಎನ್ನುವುದು ಸ್ಪಷ್ಟ. ಕ್ರೇನ್ ಅಪರೇಟರ್ ಸಮರ್ಪಕವಾಗಿ ಕೆಲಸ ಮಾಡಿಲ್ಲ. ಹೊರತಾಗಿ ಸೇತುವೆ ಬೀಮ್ಸ್ ಕುಸಿದಿದ್ದು, ಕಳಪೆ ಕಾಮಗಾರಿಯಿಂದ ಎಂಬ ಆರೋಪಕ್ಕೆ ಹುರುಳಿಲ್ಲ. ಮುಂದೆ ಎಚ್ಚರಿಕೆಯಿಂದ ಮತ್ತು ಕಾಳಜಿಯಿಂದ ಕೆಲಸ ಮಾಡುವಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದೇನೆ ಎಂದರು.
ಮುಂಬರುವ ಮಳೆಗಾಲದ ಒಳಗೆ ಕೆಲಸ ಮುಗಿಸುವ ಗುರಿ ಇತ್ತು. ಏಕೆಂದರೆ ಮಳೆಗಾಲದಲ್ಲಿ ಅಘನಾಶಿನಿ ನದಿಯಲ್ಲಿ ಪ್ರವಾಹ ಸಮಸ್ಯೆ ಸಂಭವನೀಯ. ಕುಸಿದ ಸೇತುವೆಯ ಭಾಗಗಳನ್ನು ಶೀಘ್ರ ತೆರವುಗೊಳಿಸುವ ಜತೆಗೆ ನದಿಯಲ್ಲಿ ಹಾಕಿದ ಮಣ್ಣನ್ನು ಕೂಡಾ ಶೀಘ್ರ ತೆರವುಗೊಳಿಸಬೇಕು. ಇಲ್ಲದಿದ್ದರೆ ಮಳೆಗಾಲದಲ್ಲಿ ಮತ್ತೊಂದು ಸಮಸ್ಯೆಗೆ ಕಾರಣವಾದೀತು. ಅಧಿಕಾರಿಗಳು ಖುದ್ದು ಹಾಜರಿದ್ದು ಕೆಲಸ ಪೂರ್ಣಗೊಳಿಸಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಖಡಕ್ಕಾಗಿ ಸೂಚಿಸಿದ್ದಾರೆ.ಅವಘಡದಲ್ಲಿ ಮೂರು ಗರ್ಡರ್ ಬೀಮ್ಸ್, ಒಂದು ಹಿಟಾಚಿ, ಒಂದು ಕ್ರೇನ್, ಒಂದು ಸ್ಕೂಟರ್ ಸೇರಿ ಒಟ್ಟೂ ₹೭ ಕೋಟಿ ಹಾನಿ ಎಂದು ಅಂದಾಜಿಸಲಾಗಿದೆ. ಕಾಮಗಾರಿ ಪರಿಶೀಲನೆ ವೇಳೆ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ತಹಸೀಲ್ದಾರ್ ಪ್ರವೀಣ ಕರಾಂಡೆ, ಎಇಇ ಸೋಮನಾಥ ಭಂಡಾರಿ, ಎಇಇ ದುರ್ಗಾದಾಸ ಕೆ., ಎಇಇ ಮೋಹನ ನಾಯ್ಕ, ಪಿಎಸ್‌ಐ ಮಂಜುನಾಥ ಗೌಡ, ಸ್ಥಳೀಯರಾದ ಗಣೇಶ ಅಂಬಿಗ ಇತರರು ಇದ್ದರು.
;Resize=(128,128))
;Resize=(128,128))
;Resize=(128,128))