ಬೀದಿಬದಿಯಲ್ಲಿ ವ್ಯಾಪಾರ ನಡೆಸುತ್ತಿರುವ ಸಮುದಾಯದ ಸದಸ್ಯರ ಪರಿಸ್ಥಿತಿಯನ್ನೂ ಅವರು ಉಲ್ಲೇಖಿಸಿದರು. ವಿಶೇಷವಾಗಿ ಬೇಲೂರಿನ ಮಾರುಕಟ್ಟೆಯಲ್ಲಿ ಹೂ ಮಾರಾಟ ಮಾಡುವವರಲ್ಲಿ ಸುಮಾರು 90 ಶೇಕಡಾ ಮಂದಿ ತಮ್ಮ ಜನಾಂಗದವರೇ ಇದ್ದು, ಅವರಿಗೆ ಸರಿಯಾದ ಸೌಲಭ್ಯಗಳ ಕೊರತೆಯಿದೆ ಎಂದು ಹೇಳಿದರು. ಮಳೆ, ಬಿಸಿಲು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವ ಹೂ ವ್ಯಾಪಾರಿಗಳಿಗೆ ಶಾಶ್ವತ ಅಂಗಡಿಗಳು, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಅಗ್ನಿವಂಶ ಕ್ಷತ್ರಿಯ ತಿಗಳರ ಆರಾಧ್ಯ ದೈವ ಶ್ರೀ ಅಗ್ನಿ ಬನ್ನಿರಾಯ ಸ್ವಾಮಿ ಜಯಂತಿಯನ್ನು ಬೇಲೂರಿನಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.ಸಮುದಾಯದ ಮುಖಂಡರ ನೇತೃತ್ವದಲ್ಲಿ ತಾಲೂಕು ಕಚೇರಿಯಿಂದ ಬಸವೇಶ್ವರ ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯುದ್ದಕ್ಕೂ “ಅಗ್ನಿ ಬನ್ನಿರಾಯ ಜಯಂತಿಗೆ ಜಯವಾಗಲಿ” ಎಂಬ ಘೋಷಣೆಗಳು ಮೊಳಗಿದವು. ಸಾಂಪ್ರದಾಯಿಕ ವಾದ್ಯಗಳೊಂದಿಗೆ, ಧಾರ್ಮಿಕ ಆಚರಣೆಗಳೊಂದಿಗೆ, ವಿವಿಧ ಹಳ್ಳಿಗಳಿಂದ ಆಗಮಿಸಿದ ಭಕ್ತರು ಉತ್ಸಾಹಭರಿತರಾಗಿ ಪಾಲ್ಗೊಂಡರು. ಮಹಿಳೆಯರು, ಯುವಕರು, ಹಿರಿಯರು ಎಲ್ಲರೂ ಭಾಗವಹಿಸಿದ್ದು ಮೆರವಣಿಗೆಗೆ ವಿಶೇಷ ಕಳೆ ನೀಡಿತು.ಕಾರ್ಯಕ್ರಮದ ವೇಳೆ ಮಾತನಾಡಿದ ಸಮುದಾಯದ ಅಧ್ಯಕ್ಷ ಚನ್ನೇಗೌಡ ಎಚ್ ಪಿ, ತಮ್ಮ ಜನಾಂಗದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರದ ಗಮನಕ್ಕೆ ಹಲವು ಪ್ರಮುಖ ಬೇಡಿಕೆಗಳನ್ನು ತಂದು ಬೇಲೂರು ತಾಲೂಕಿನಲ್ಲಿ ಜನಾಂಗದ ಸಮಗ್ರ ಅಭಿವೃದ್ಧಿಗಾಗಿ ಕನಿಷ್ಠ ಎರಡು ಎಕರೆ ಜಾಗವನ್ನು ಮೀಸಲಿಡಬೇಕು ಎಂದು ಒತ್ತಾಯಿಸಿದರು. ಆ ಜಾಗದಲ್ಲಿ ಸಮುದಾಯ ಭವನ, ಶಿಕ್ಷಣ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಅನುಕೂಲವಾಗುವ ಮೂಲಸೌಕರ್ಯಗಳನ್ನು ನಿರ್ಮಿಸಲು ಅವಕಾಶ ಕಲ್ಪಿಸಬೇಕು. ಇದಲ್ಲದೆ, ಬಡ ಕುಟುಂಬಗಳಿಗೆ ವಸತಿ ಸೌಲಭ್ಯ ಒದಗಿಸುವುದು ತುರ್ತು ಅಗತ್ಯವಾಗಿದೆ ಎಂದು ಅವರು ವಿವರಿಸಿದರು. ಆಶ್ರಯವಿಲ್ಲದೆ ಸಂಕಷ್ಟ ಅನುಭವಿಸುತ್ತಿರುವ ಅನೇಕ ಕುಟುಂಬಗಳನ್ನು ಗುರುತಿಸಿ, ಅವರಿಗೆ ಸರ್ಕಾರದ ಯೋಜನೆಗಳಡಿ ಮನೆಗಳನ್ನು ಒದಗಿಸಬೇಕು ಎಂದು ಮನವಿ ಮಾಡಿದರು. “ಇಲ್ಲಿಯವರೆಗೂ ನಮ್ಮ ಜನಾಂಗದ ಸಮಸ್ಯೆಗಳನ್ನು ಕೇಳಲು ಯಾರೂ ಮುಂದೆ ಬಂದಿಲ್ಲ” ಎಂಬ ಅಸಮಾಧಾನವನ್ನು ವ್ಯಕ್ತಪಡಿಸಿದರು.ಬೀದಿಬದಿಯಲ್ಲಿ ವ್ಯಾಪಾರ ನಡೆಸುತ್ತಿರುವ ಸಮುದಾಯದ ಸದಸ್ಯರ ಪರಿಸ್ಥಿತಿಯನ್ನೂ ಅವರು ಉಲ್ಲೇಖಿಸಿದರು. ವಿಶೇಷವಾಗಿ ಬೇಲೂರಿನ ಮಾರುಕಟ್ಟೆಯಲ್ಲಿ ಹೂ ಮಾರಾಟ ಮಾಡುವವರಲ್ಲಿ ಸುಮಾರು 90 ಶೇಕಡಾ ಮಂದಿ ತಮ್ಮ ಜನಾಂಗದವರೇ ಇದ್ದು, ಅವರಿಗೆ ಸರಿಯಾದ ಸೌಲಭ್ಯಗಳ ಕೊರತೆಯಿದೆ ಎಂದು ಹೇಳಿದರು. ಮಳೆ, ಬಿಸಿಲು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವ ಹೂ ವ್ಯಾಪಾರಿಗಳಿಗೆ ಶಾಶ್ವತ ಅಂಗಡಿಗಳು, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸಂಘದ ಖಜಾಂಚಿ ಬಿ ಎ ಮಂಜುನಾಥ್, ಗೋವಿಂದೇಗೌಡ ಹಾಗೂ ನಿರ್ದೇಶಕರು ಸಮಾಜದ ಬಾಂಧವರು ಹಾಜರಿದ್ದರು.