ಸಾರಾಂಶ
ಮರಾಠ ಲಘು ಪದಾತಿ ದಳ ಕೇಂದ್ರದ ಭೇಟಿಯಲ್ಲಿ ಲೆಫ್ಟಿನೆಂಟ್ ಜನರಲ್ ಅನಿಲ ಚೌಹಾಣ್ ಅಭಿಪ್ರಾಯ
ಕನ್ನಡಪ್ರಭ ವಾರ್ತೆ ಬೆಳಗಾವಿ
ದೇಶದ ರಕ್ಷಣೆಯಲ್ಲಿ ಯೋಧರ ಪಾತ್ರ ಪ್ರಮುಖವಾಗಿದ್ದು, ಅಗ್ನಿವೀರರು ಕೇವಲ ಯೋಧರಷ್ಟೇ ಅಲ್ಲ. ರಾಷ್ಟ್ರದ ಸಾರ್ವಭೌಮತ್ವದ ನಾಯಕರು. ನಾವೀನ್ಯಕಾರರು ಮತ್ತು ರಕ್ಷಕರು ಆಗಿದ್ದಾರೆ ಎಂದು ಸೇನಾ ಸಿಬ್ಬಂದಿ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಅನಿಲ ಚೌಹಾಣ್ ಹೇಳಿದರು.ಇಲ್ಲಿಯ ಮರಾಠ ಲಘು ಪದಾತಿ ದಳ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ ಅಗ್ನಿವೀರ ಸೇನಾ ಪ್ರಶಿಕ್ಷಣಾರ್ಥಿ ಯೋಧರಿಗೆ ಮಾರ್ಗದರ್ಶನ ನೀಡಿ ಮಾತನಾಡಿದ ಅವರು, ದೇಶ ಸೇವೆ ಮಾಡುವ ಯೋಧರಿಗೆ ಬುದ್ದಿವಂತಿಕೆ, ದೃಢತೆ ಮತ್ತು ದೂರದೃಷ್ಟಿ ಇರಬೇಕು. ಇತ್ತೀಚೆಗೆ ಸೈಬರ್ ವಾರ್‌ಫೇರ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಕೆ ಮಾಡಲಾಗುತ್ತಿದೆ. ತಂತ್ರಜ್ಞಾನದ ನವೀಕರಣ ಮತ್ತು ನಿರಂತರ ಕಲಿಕೆಯು ಯುದ್ಧಭೂಮಿಯ ಅವಿಭಾಜ್ಯ ಅಂಗವಾಗಿದೆ. ಇತ್ತೀಚಿನ ಪ್ರಗತಿಗಳೊಂದಿಗೆ ಯುದ್ಧದ ಕಡೆಗೆ ನವೀನ ವಿಧಾನವನ್ನು ಪ್ರದರ್ಶಿಸುವ ಅವಶ್ಯಕತೆಯಿದೆ ಎಂದು ತಿಳಿಸಿದರು.
ಸಶಸ್ತ್ರ ಪಡೆಗಳನ್ನು ವೃತ್ತಿಯಾಗಿ ಆಯ್ಕೆ ಮಾಡುವ ಮೂಲಕ ಅಗ್ನಿವೀರರು ತಮ್ಮ ಬದ್ಧತೆ ಮೆರೆದಿದ್ದಾರೆ. ರಾಷ್ಟ್ರ ಸೇವೆಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸೈನಿಕರು ಮತ್ತು ಅವರ ಕುಟುಂಬ ವೈಯಕ್ತಿಕವಾಗಿ ಸವಾಲುಗಳನ್ನು ಎದುರಿಸುತ್ತಿವೆ. ಸವಾಲುಗಳ ನಡುವೆಯೂ ಅಗ್ನಿವೀರರು ದೇಶದ ರಕ್ಷಣೆಗೆ ನಿಂತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.ಬೆಳಗಾವಿ ಎಂಎಲ್‌ಆರ್‌ಸಿ ಕೇಂದ್ರದಲ್ಲಿ ಅಗ್ನಿವೀರ ಸೇನಾ ಯೋಧರಿಗೆ ಅತ್ಯುತ್ತಮ ತರಬೇತಿ ನೀಡಲಾಗುತ್ತಿದೆ. ಸೂಕ್ತ ಬೋಧಕರ ತಂಡ ಇದೆ. ಸಶಸ್ತ್ರ ಪಡೆಗಳ ಭವಿಷ್ಯ ರೂಪಿಸುವಲ್ಲಿ ವೃತ್ತಪರ ಬೋಧಕರ ಪಾತ್ರವು ಮಹತ್ವದ್ದಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಎಂಎಲ್‌ಐಆರ್‌ಸಿ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.