ಸಾರಾಂಶ
ಗ್ರಾಹಕರು ಜಿಲ್ಲಾ ಗ್ರಾಹಕ ಆಯೋಗದ ಸಹಾಯದೊಂದಿಗೆ ಶೋಷಣೆ, ಮೋಸ, ವಂಚನೆ ಮುಂತಾದ ಅನ್ಯಾಯಗಳಿಗೆ ನ್ಯಾಯ ಪಡೆಯಲು ಸಾಧ್ಯವಾಗುತ್ತದೆ
ಕನ್ನಡಪ್ರಭ ವಾರ್ತೆ ಮೈಸೂರು
ಗ್ರಾಹಕರು ತಮಗೆ ಆಗುತ್ತಿರುವ ವಂಚನೆಗಳನ್ನು ತಮ್ಮಲ್ಲಿ ಇಟ್ಟುಕೊಳ್ಳದೆ ಗ್ರಾಹಕ ಆಯೋಗದ ಮುಂದೆ ತಂದು ಸೂಕ್ತವಾದ ಪರಿಹಾರವನ್ನು ಪಡೆದುಕೊಳ್ಳುವಲ್ಲಿ ಮುಂದೆ ಬರಬೇಕು ಎಂದು ಜಿಲ್ಲಾ ಗ್ರಾಹಕ ಆಯೋಗದ ಅಧ್ಯಕ್ಷೆ ನವೀನಕುಮಾರಿ ತಿಳಿಸಿದರು.ನಗರದ ಅಗ್ರಹಾರದ ಕಲ್ಯಾಣ ಭವನದಲ್ಲಿ ಭಾನುವಾರ ನಡೆದ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಜಿಲ್ಲಾ ಅಭ್ಯಾಸ ವರ್ಗವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಹಕರು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಅದಕ್ಕಾಗಿ ಗ್ರಾಹಕರು ಜಿಲ್ಲಾ ಗ್ರಾಹಕ ಆಯೋಗದ ಸಹಾಯದೊಂದಿಗೆ ಶೋಷಣೆ, ಮೋಸ, ವಂಚನೆ ಮುಂತಾದ ಅನ್ಯಾಯಗಳಿಗೆ ನ್ಯಾಯ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಪ್ರಾಂತ ಮಾರ್ಗದರ್ಶಕರಾದ ಡಾ. ಜ್ಯೋತಿಶಂಕರ್ ಮಾತನಾಡಿ, ಗ್ರಾಹಕರು ಸಣ್ಣ ವಿಚಾರದಿಂದ ಹಿಡಿದು ದೊಡ್ಡ ದೊಡ್ಡ ಬೆಲೆ ಬಾಳುವಂತಹ ವಸ್ತುಗಳ ಖರೀದಿಯಲ್ಲಿಯೂ ಜಾಗೃತಿ ವಹಿಸುವುದು ಅತಿ ಮುಖ್ಯ. ಗ್ರಾಹಕರಿಗೆ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಣ ಪಡೆಯುವಲ್ಲಿ ಆಗುತ್ತಿರುವ ಶೋಷಣೆಗಳು ಅವುಗಳಿಂದ ಹೊರಬರಲು ಪ್ರಯತ್ನಿಸಬೇಕು ಎಂದರು.ಶಿಕ್ಷಣವು ವ್ಯಾಪಾರಿಕರಣವಾಗಿ ಎಲ್ಲರಿಗೂ ಉತ್ತಮವಾದ ಶಿಕ್ಷಣಕ್ಕಾಗಿ ಬೆಲೆ ತೆತ್ತರೂ ಉತ್ತಮ ಶಿಕ್ಷಣ ಪಡೆಯುವಲ್ಲಿ ಹಲವಾರು ನ್ಯೂನತೆಗಳನ್ನು ಪೋಷಕರು ಗಮನಿಸಿದರೂ ಅದನ್ನು ಸಹಿಸಿಕೊಂಡು ಹೋಗುವ ಮನೋಭಾವದೊಂದಿಗೆ ಇಂದಿಗೂ ಇದ್ದಾರೆ. ಎಲ್ಲವನ್ನು ತಿಳಿದುಕೊಳ್ಳುವ ಹಕ್ಕನ್ನು ಪಡೆದಿದ್ದರೂ, ಎಲ್ಲಿಯವರೆಗೆ ಗ್ರಾಹಕ ಪ್ರಶ್ನೆ ಮಾಡುವುದಿಲ್ಲವೋ ಗ್ರಾಹಕ ಶೋಷಿತ ನಾಗಿಯೇ ಇರುತ್ತಾನೆ. ಎಷ್ಟೋ ವಿಷಯಗಳನ್ನು ಶಿಕ್ಷಣ ಮಾರುಕಟ್ಟೆಯೂ ಮರೆಮಾಚುತ್ತಿವೆ. ಇದರ ಸುಧಾರಣೆ ಅತ್ಯಗತ್ಯ ಎಂದು ಅವರು ತಿಳಿಸಿದರು.ಇದೇ ವೇಳೆ ಗ್ರಾಹಕ ಪಂಚಾಯತಿನ ಜಿಲ್ಲಾ ಕಾರ್ಯಕಾರಿಣಿಯ ಘೋಷಣೆ ನಡೆಯಿತು. ಜಿಲ್ಲಾ ಗ್ರಾಹಕ ಪಂಚಾಯತ್ ಅಧ್ಯಕ್ಷರಾಗಿ ಸಿ.ಎಸ್. ಚಂದ್ರಶೇಖರ್ ಅವರು ಪುನರಾಯ್ಕೆಯಾದರು. ಉಪಾಧ್ಯಕ್ಷ- ವಿಕ್ರಂ ಅಯ್ಯಂಗಾರ್, ಕಾರ್ಯದರ್ಶಿ ಶ್ರೀಕಂಠೇಶ್, ಸಹ ಕಾರ್ಯದರ್ಶಿಯಾಗಿ ವಲ್ಲಿನಾಥ್ ಹಾಗೂ ರಕ್ತದಾನಿ ಮಂಜು, ಮಹಿಳಾ ಪ್ರಮುಖರಾಗಿ ಪುಷ್ಪಾ ಹಾಗೂ ಕಾರ್ಯಕಾರಿಣಿಗೆ ಜಿಲ್ಲಾ ಕಾನೂನು ಸಲಹೆಗಾರರಾಗಿ ಪುಷ್ಪಾ ಆಯ್ಕೆಯಾದರು.ಪ್ರಾಂತ ಅಧ್ಯಕ್ಷ ನರಸಿಂಹ ನಕ್ಷತ್ರಿಜಿ, ಕಾರ್ಯದರ್ಶಿ ಗಾಯತ್ರಿ ನಾಡಿಗ್, ಕೋಶಾಧ್ಯಕ್ಷ ಉಮೇಶ್ ಪ್ರಸಾದ್ ಇದ್ದರು.