ಕುಕ್ಕುಟೋದ್ಯಮ ಕಂಪನಿಗಳ ಮಧ್ಯೆ ಒಪ್ಪಂದ

| Published : Jul 03 2025, 11:49 PM IST

ಸಾರಾಂಶ

ಹೈದರಾಬಾದ್‌ನ ಐಸಿಎಆರ್ ಕುಕ್ಕುಟ ಸಂಶೋಧನಾ ನಿರ್ದೇಶನಾಲಯ ಮತ್ತು ಸ್ಥಳೀಯ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಗಳೆರೆಡು ಒಟ್ಟಾಗಿ ಕೆಲಸ ಮಾಡಲು ಮುಂದಾಗಿದ್ದು, ಜ್ಞಾಪನ ಪತ್ರಕ್ಕೆ ಸಹಿ ಹಾಕಿವೆ.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಕೃಷಿ ಸುಸ್ಥಿರತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಗ್ರಾಮೀಣ ಕೋಳಿ ಸಾಕಾಣಿಕೆಯ ಜೊತೆ ವಾಣಿಜ್ಯ ಕೋಳಿ ಉದ್ಯಮಗಳ ಉತ್ತೇಜನ ಗುರಿಯಾಗಿಸಿ ಹೈದರಾಬಾದ್‌ನ ಐಸಿಎಆರ್ ಕುಕ್ಕುಟ ಸಂಶೋಧನಾ ನಿರ್ದೇಶನಾಲಯ ಮತ್ತು ಸ್ಥಳೀಯ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಗಳೆರೆಡು ಒಟ್ಟಾಗಿ ಕೆಲಸ ಮಾಡಲು ಮುಂದಾಗಿದ್ದು, ಜ್ಞಾಪನ ಪತ್ರಕ್ಕೆ ಸಹಿ ಹಾಕಿವೆ. ಹೈದರಾಬಾದ್‌ನ ಐಸಿಎಆರ್ ಕುಕ್ಕುಟ ಸಂಶೋಧನಾ ನಿರ್ದೇಶನಾಲಯದ ಪ್ರೇಕ್ಷಾಗೃಹದಲ್ಲಿ ಆಯೋಜಿಸಲಾಗಿದ್ದ ಸಹಿ ಹಾಕುವ ಸಮಾರಂಭದಲ್ಲಿ ಡಿಪಿಆರ್ ನಿರ್ದೇಶಕ ಡಾ.ಆರ್.ಎನ್ ಚಟರ್ಜಿ ಮತ್ತು ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಅರವಿಂದ ಕೊಪ್ಪ ಇವರು ಪರಸ್ಪರ ಸಹಿ ಹಾಕಿ ಅಧಿಕೃತವಾಗಿ ಸ್ವೀಕರಿಸಿದರು.ಈ ಮೊದಲು ಐಸಿಎಆರ್ ಕುಕ್ಕುಟ ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಡಾ.ಆರ್.ಎನ್.ಚಟರ್ಜಿ ಅಧ್ಯಕ್ಷತೆಯಲ್ಲಿ ಪರಸ್ಪರರಲ್ಲಿ ಮಾಡಿಕೊಳ್ಳಬಹುದಾದ ಒಡಂಬಂಡಿಕೆಗಳ ಕುರಿತು ನಡೆದ ಸಭೆಯಲ್ಲಿ ಗ್ರಾಮೀಣ ಕೋಳಿ ಸಾಕಾಣಿಕೆ ಪ್ರದೇಶ ವಿಸ್ತರಣೆ ಮತ್ತು ವಾಣಿಜ್ಯ ಕುಕ್ಕಟೋದ್ಯಮಕ್ಕೆ ಬೇಕಾದ ಸುಧಾರಿತ ತಳಿಗಳ ಪೂರೈಕೆ, ಸಲಕರಣೆ ಮತ್ತು ಯಂತ್ರಗಳಿಗೆ ಸಂಬಂಧಿತ ತಾಂತ್ರಿಕತೆಗಳ ವಿನಿಮಯ, ವೈಜ್ಞಾನಿಕ ತರಬೇತಿ, ಮರಿ ಉತ್ಪಾದನಾ ಘಟಕ ಸ್ಥಾಪನೆ ಮತ್ತು ನಿರ್ವಹಣೆಗೆ ಬೇಕಾದ ತಾಂತ್ರಿಕ ಮಾರ್ಗದರ್ಶನ, ಕೋಳಿ ಆಹಾರ ಉತ್ಪಾದನಾ ಘಟಕ ಸ್ಥಾಪನೆಗೆ ತಾಂತ್ರಿಕ ಸಲಹೆ ಮತ್ತು ನಿರ್ವಹಣೆ, ಪ್ರಾದೇಶಿಕ ಅಗತ್ಯತೆಗೆ ಪೂರಕವಾದ ಸಂಶೋಧನೆಗಳನ್ನು ಕೈಗೊಳ್ಳುವುದು ಸೇರಿದಂತೆ ಎಫ್‌ಪಿಒ ಮತ್ತು ಡಿಪಿಆರ್‌ಗೆ ಸಹಕಾರಿಯಾಗಬಹುದಾದ ಯೋಜನೆ, ತಂತ್ರಗಾರಿಕೆ ಹಾಗೂ ಸಾಧ್ಯತೆಗಳ ಬಗ್ಗೆ ವಿಸ್ತತವಾಗಿ ಚರ್ಚಿಸಿದರು. ನಂತರದಲ್ಲಿ ತಿಳುವಳಿಕೆ ಜ್ಞಾಪನ ಪತ್ರ ಮಾಡಿಕೊಳ್ಳುವ ಮೂಲಕ ಜಂಟಿ ಕಾರ್ಯಯೋಜನೆಗಳ ಗುರಿ ಸಾಧನೆಯ ಬಗ್ಗೆ ನಿರ್ಧರಿಸಿ ಒಡಬಂಡಿಕೆ ಮಾಡಿಕೊಳ್ಳಲು ನಿರ್ಧರಿಸಲಾಗಿತ್ತು.

ಈ ಸಂದರ್ಭದಲ್ಲಿ ಕುಕ್ಕುಟ ಸಂಶೋಧನಾ ನಿರ್ದೇಶನಾಲಯದ ಪ್ರಧಾನ ವಿಜ್ಞಾನಿ ಡಾ.ಎಂ.ಆರ್.ರೆಡ್ಡಿ, ಹಿರಿಯ ವಿಜ್ಞಾನಿ ಡಾ.ವಿಜಯಕುಮಾರ, ಡಾ.ಸಾಯಿಕಾಂತ ದಮಾ, ಕಂಪನಿ ಕಾನೂನು ತಜ್ಞ ಸಬಜೀತ ಶಹಾ, ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಯ ನಿರ್ದೇಶಕರಾದ ಬಿ.ಜಿ ಮಠ, ಆರ್.ಬಿ ಸಜ್ಜನ, ಆನಂದ ದೇಸಾಯಿ ಉಪಸ್ಥಿತರಿದ್ದರು.