ಭಾರಿ ಮಳೆಗೆ ತುಂಬಿ ಹರಿದ ಗದಗ ಜಿಲ್ಲೆಯ ಕೃಷಿ ಹೊಂಡಗಳು

| Published : May 20 2025, 11:52 PM IST

ಸಾರಾಂಶ

ಕಳೆದೆರಡು ದಿನಗಳಿಂದ ಜಿಲ್ಲೆಯಾದ್ಯಂತ ಕೃತಿಕಾ ಮಳೆ ಉತ್ತಮವಾಗಿ ಸುರಿದಿದ್ದು, ಹೊಲದಲ್ಲಿನ ಕೃಷಿ ಹೊಂಡಗಳು ತುಂಬಿ ಹರಿಯುತ್ತಿದ್ದು, ಪ್ರಸಕ್ತ ವರ್ಷ ಉತ್ತಮ ಮಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಹೊಸ ಭರವಸೆ ಮೂಡಿಸಿದೆ.

ಮಹೇಶ ಛಬ್ಬಿ

ಗದಗ: ಕಳೆದೆರಡು ದಿನಗಳಿಂದ ಜಿಲ್ಲೆಯಾದ್ಯಂತ ಕೃತಿಕಾ ಮಳೆ ಉತ್ತಮವಾಗಿ ಸುರಿದಿದ್ದು, ಹೊಲದಲ್ಲಿನ ಕೃಷಿ ಹೊಂಡಗಳು ತುಂಬಿ ಹರಿಯುತ್ತಿದ್ದು, ಪ್ರಸಕ್ತ ವರ್ಷ ಉತ್ತಮ ಮಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಹೊಸ ಭರವಸೆ ಮೂಡಿಸಿದೆ.

ಈಗಾಗಲೇ ರೈತಾಪಿ ವರ್ಗ ಮುಂಗಾರು ಬಿತ್ತನೆಗೆ ಹೊಲಗಳನ್ನ ರಂಟಿ ಹೊಡೆದು, ಹರಗಿ ಹದಗೊಳಿಸಿ ಬೀಜ ಬಿತ್ತನೆಗೆ ಸಿದ್ಧತೆ ನಡೆಸಿದ್ದ ರೈತರಿಗೆ ಕೃತಿಕಾ ಮಳೆ ಜೀವ ಕಳೆಯನ್ನು ತುಂಬಿದೆ.

ಸತತವಾಗಿ ಅತಿವೃಷ್ಟಿ, ಅನಾವೃಷ್ಟಿಯಿಂದ ಕಂಗಾಲಾದ ರೈತರಿಗೆ ಪ್ರಸಕ್ತ ವರ್ಷ ಮುಂಗಾರು ಪೂರ್ವ ಮಳೆ ಪ್ರಾರಂಭದಲ್ಲಿಯೇ ಉತ್ತಮವಾಗಿ ಸುರಿದಿದ್ದು, ರೈತರ ಸಂತಸವನ್ನ ಇಮ್ಮಡಿಗೊಳಿಸಿದೆ.

3.06 ಲಕ್ಷ ಹೆ. ಪ್ರದೇಶದಲ್ಲಿ ಬಿತ್ತನೆ ಗುರಿ:1ನೇ ಮಾರ್ಚ್‌ 2025ರಿಂದ 17ನೇ ಮೇ 2025ರ ವರೆಗೆ ಸರಾಸರಿ 68 ಮಿ.ಮೀ. ವಾಡಿಕೆ ಮಳೆಗೆ 102 ಮಿ.ಮೀ.ಯಷ್ಟು ಮಳೆಯಾಗಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಮೆಕ್ಕೆಜೋಳ 1.15 ಲಕ್ಷ ಹೆ., 1.33 ಲಕ್ಷ ಹೆ. ಹೆಸರು, 21000 ಹೆ. ಶೇಂಗಾ, 7500 ಹೆ. ಸೂರ್ಯಕಾಂತಿ, ಹಾಗೂ 17000 ಹೆ. ಹತ್ತಿ ಸೇರಿದಂತೆ ಒಟ್ಟು 3.06 ಲಕ್ಷ ಹೆ. ಪ್ರದೇಶದಲ್ಲಿ ಬಿತ್ತನೆ ಕ್ಷೇತ್ರದ ಗುರಿ ಇದೆ.

ಜಿಲ್ಲೆಯ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆಯಾಗದಂತೆ ಕೃಷಿ ಇಲಾಖೆ ಕ್ರಮ ಕೈಗೊಂಡಿದೆ ಎಂದು ಪ್ರಕಟಣೆಯನ್ನು ಕೃಷಿ ಇಲಾಖೆ ನೀಡುತ್ತಿದೆ. ಆದರೆ ಸಕಾಲಕ್ಕೆ ಬಿತ್ತನೆ ಬೀಜ, ರಸಗೊಬ್ಬರ ಸಿಗದೆ ರೈತರು ಪರದಾಡುವುದು ಮಾತ್ರ ತಪ್ಪುವುದಿಲ್ಲ ಎನ್ನುತ್ತಾರೆ ರೈತರು.

ಕಾಳ ಸಂತೆಯಲ್ಲಿ ಮಾರಾಟ ಮಾಡುವವರು ಬೀಜ, ಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಬೀಜ, ಗೊಬ್ಬರ ಮಾರಾಟ ಮಾಡಿ, ರೈತರನ್ನು ಸುಲಿಗೆ ಮಾಡುತ್ತಾರೆ. ಅಂಥವರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಬಿತ್ತನೆ ಬೀಜ, ರಸಗೊಬ್ಬರಗಳನ್ನು ಸಕಾಲದಲ್ಲಿ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಆಗ್ರಹ.

ಹೆಸರು, ತೊಗರಿ ಬೀಜ ದಾಸ್ತಾನಾಗುತ್ತಿವೆ. ಇನ್ನೆರಡು ದಿನಗಳಲ್ಲಿ ಗೋವಿನ ಜೋಳನು ದಾಸ್ತಾನಾಗುತ್ತದೆ. ಬಿತ್ತನೆ ಬೀಜದ್ದು ಯಾವುದೇ ಸಮಸ್ಯೆಯಿಲ್ಲ. ಸೋಮವಾರದೊಳಗೆ ರಿಯಾಯಿತಿ ದರದಲ್ಲಿ ಬೀಜ ವಿತರಣೆ ಮಾಡಲು ಪ್ರಾರಂಭ ಮಾಡಲಾಗುತ್ತದೆ ಎಂದು ಗದಗ ಸಹಾಯಕ ಕೃಷಿ ನಿರ್ದೇಶಕ ಮಲ್ಲಯ್ಯ ಕೊರವನವರ ಹೇಳಿದರು.

ರೈತರ ಬೇಡಿಕೆಗೆ ತಕ್ಕಂತೆ ರಸಗೊಬ್ಬರ ಪೂರೈಕೆ ಮಾಡಬೇಕು. ಯಾವುದೇ ಲಿಂಕ್‌ಗಳನ್ನು ನೀಡದೆ ಎಂಆರ್‌ಪಿ ದರದಲ್ಲಿ ರಸಗೊಬ್ಬರಗಳನ್ನ ಪೂರೈಕೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಮುಳಗುಂದ ರೈತಸಂಘದ ಅಧ್ಯಕ್ಷ ದೇವರಾಜ ಸಂಗನಪೇಟಿ ಹೇಳಿದರು.