ರೈತರಿಗೆ ಕಡಿಮೆ ದರದಲ್ಲಿ ಕೃಷಿ ಉಪಕರಣ

| Published : Sep 16 2025, 12:03 AM IST

ಸಾರಾಂಶ

ಕೃಷಿಗೆ ಉತ್ತೇಜನ ನೀಡುತ್ತಿರುವ ಉತ್ತಮ ಸಹಕಾರಿ ಸಂಸ್ಥೆ ಎಂಬುದು ಕೂಡ ನಮಗೆ ಹೆಮ್ಮೆಯಾಗುತ್ತಿದೆ

ಯಲ್ಲಾಪುರ: ಕಳೆದ ಸಾಲಿನಲ್ಲಿ ₹೪೭.೨೫ ಲಕ್ಷ ಲಾಭ ಗಳಿಸಿ, ಜಿಲ್ಲೆಯಲ್ಲೇ ಕೃಷಿಗೆ ಉತ್ತೇಜನ ನೀಡುತ್ತಿರುವ ಉತ್ತಮ ಸಹಕಾರಿ ಸಂಸ್ಥೆ ಎಂಬುದು ಕೂಡ ನಮಗೆ ಹೆಮ್ಮೆಯಾಗುತ್ತಿದೆ ಎಂದು ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಹೇಳಿದರು.

ಅವರು ಪಟ್ಟಣದ ಅಡಕೆ ಭವನದಲ್ಲಿ ಶುಕ್ರವಾರ ನಡೆದ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡುತ್ತಿದ್ದರು.

ಇಂದು ಯುವಕರು ಕೃಷಿಯಿಂದ ವಿಮುಖರಾಗುತ್ತಿರುವ ಕಾಲಘಟ್ಟದಲ್ಲಿ ಕೃಷಿಯಿಂದ ಉತ್ತಮ ಸಂಪಾದನೆ, ನೆಮ್ಮದಿ ಮತ್ತು ಪರಂಪರೆಯ ಚಿಂತನೆ ಉಳಿಸಿಕೊಂಡಂತೆ ಆಗುತ್ತದೆ ಎಂಬ ದೃಷ್ಟಿಯಿಂದ ಯುವಕರಿಗೆ ಕೃಷಿಗೆ ಒತ್ತು ನೀಡುತ್ತಿದ್ದ ಉತ್ತಮ ಯುವ ಕೃಷಿಕರನ್ನು ಗುರುತಿಸಿ, ಗೌರವಿಸುತ್ತಿದ್ದೇವೆ. ರೈತರಿಗೆ ಕಡಿಮೆ ದರದಲ್ಲಿ ಕೃಷಿ ಉಪಕರಣ ನೀಡುತ್ತಿರುವ ನಮ್ಮ ಸಂಸ್ಥೆಯಲ್ಲಿಯೇ ವ್ಯವಹರಿಸಿ ಸಂಸ್ಥೆಯ ಬೆಳವಣಿಗೆಯಲ್ಲಿ ಸಹಕರಿಸಬೇಕು ಎಂದರು.

ಹಿರಿಯ ಸಹಕಾರಿ ಪ್ರಮೋದ ಹೆಗಡೆ ಮಾತನಾಡಿ, ಯುವಜನಾಂಗ ಕೃಷಿಯಿಂದ ದೂರವಾಗುತ್ತಿರುವ ಈ ಕಾಲಘಟ್ಟದಲ್ಲಿ ಆಧುನಿಕ ಕೃಷಿಗೆ ಶಕ್ತಿನೀಡಿ, ಯುವಕರನ್ನು ಪ್ರೇರೇಪಿಸುವ ಕಾರ್ಯವನ್ನು ಮಲೆನಾಡು ಸಹಕಾರಿ ಸಂಘ ಮಾಡುತ್ತಿದೆ. ಇದು ಸಮಾಜಕ್ಕೆ ಆದರ್ಶವಾದುದು ಎಂದರು.

ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಜಿಲ್ಲೆಯಲ್ಲೇ ಮಲೆನಾಡು ಕೃಷಿ ಸಹಕಾರಿ ಸಂಘ ಆಧುನಿಕ ಕೃಷಿ ಪದ್ಧತಿಗೆ ಒತ್ತು ನೀಡುತ್ತಿರುವುದನ್ನು ಗಮನಿಸಿದ್ದೇನೆ. ಇದು ಇನ್ನು ಹೆಚ್ಚು ವಿಸ್ತಾರಗೊಳ್ಳುವಂತಾಗಬೇಕು ಎಂದರು.

ಯುವ ಕೃಷಿ ಸಾಧಕರಾದ ವಿನಾಯಕ ಭಟ್ಟ ತುಡುಗುಣಿ, ಸುಬ್ರಹ್ಮಣ್ಯ ಭಟ್ಟ ಬಾಗಿನಕಟ್ಟಾ, ಜಯಪ್ರಕಾಶ ಹೆಗಡೆ ಶಿರನಾಲಾ, ವಾಸುದೇವ ಶೆಟ್ಟಿ ಕುಂದರಗಿ, ಅನಂತ ಹೆಗಡೆ ತೋರಣಸರ, ಆದಿತ್ಯ ಹೆಗಡೆ ಹಿರೇಸರ, ಸುಬ್ರಾಯ ಭಟ್ಟ ದಾನ್ಯಾನಕೊಪ್ಪ, ಗಣೇಶ ಭಟ್ಟ ಶಿರಲೆ, ಶಿವರಾಮ ಭಟ್ಟ ಶಿದ್ರಮನೆ, ಮಹೇಶ ಭಟ್ಟ ಹಸ್ರಪಾಲ, ಗಣಪತಿ ನಾಯ್ಕ ಸಾವಗದ್ದೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶಿರಸಿಯ ಲೆಕ್ಕಪರಿಶೋಧಕ ಎಸ್.ಜಿ.ಹೆಗಡೆ ಬೆದೆಹಕ್ಲ ಸಾಂದರ್ಭಿಕವಾಗಿ ಮಾತನಾಡಿದರು. ಸನ್ಮಾನಿತರ ಪರವಾಗಿ ಆದಿತ್ಯ ಹೆಗಡೆ ಹಿರೆಸರ ಮಾತನಾಡಿದರು.

ಸಂಘದ ಉಪಾಧ್ಯಕ್ಷ ಎಂ.ಜಿ.ಭಟ್ಟ ಶೀಗೇಪಾಲ ಹಾಗೂ ನಿರ್ದೇಶಕರು ವೇದಿಕೆಯಲ್ಲಿದ್ದರು. ನಿರ್ದೇಶಕ ಎಂ.ಆರ್.ಹೆಗಡೆ ತಾರೇಹಳ್ಳಿ ಸ್ವಾಗತಿಸಿದರು. ಡಾ.ರವಿ ಭಟ್ಟ ಬರಗದ್ದೆ, ಸಣ್ಣಪ್ಪ ಭಾಗ್ವತ್ ನಿರ್ವಹಿಸಿದರು. ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಹೆಗಡೆ ವಾರ್ಷಿಕ ವರದಿಯನ್ನು ಸಭೆಗೆ ಮಂಡಿಸಿದರು. ನಿರ್ದೇಶಕ ದತ್ತಾತ್ರೇಯ ಬೋಳಗುಡ್ಡೆ ವಂದಿಸಿದರು.