ಸಾರಾಂಶ
ಕಾರವಾರ: ಅಂಕೋಲೆಯ ಸರಯೂ ಬನದಲ್ಲಿ ಇಂದು ಕೃಷಿ ಹಬ್ಬ. ಗದ್ದೆ ಉಳುಮೆ ಮಾಡಿ, ಸಾಮೂಹಿಕ ನಾಟಿ ಮಾಡುವುದು ಕೃಷಿ ಹಬ್ಬದ ವಿಶೇಷ. ಕೃಷಿಯಿಂದ ಯುವಜನತೆ ವಿಮುಖರಾಗುತ್ತಿರುವ ಕೂಗಿನ ನಡುವೆ ಇಲ್ಲಿ ಜನರನ್ನು ಕೃಷಿಯತ್ತ ಸೆಳೆಯುವ ಕೃಷಿ ಹಬ್ಬ ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುತ್ತಿದೆ.
ಕೃಷಿ ಉತ್ಪನ್ನಗಳ ರಫ್ತು ಮತ್ತು ಮಾರಾಟ ಸಂಸ್ಥೆಯ ಮಾಲೀಕರಾದ ಎಚ್.ಎಸ್. ಶೆಟ್ಟಿ ಉದ್ಘಾಟಿಸಲಿದ್ದು, ಪ್ರಗತಿಪರ ಕೃಷಿಕ, ಹಳ್ಳಿಕಾರ ಹಸುಗಳನ್ನು ಸಂರಕ್ಷಿಸುತ್ತಿರುವ ವರ್ತೂರು ಸಂತೋಷ ಅವರಿಗೆ ಕೃಷಿ ಭೀಮ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸ್ಥಳೀಯ ಪ್ರಗತಿಪರ ರೈತರನ್ನು ಸತ್ಕರಿಸಲಾಗುತ್ತಿದೆ.ನ್ಯಾಯವಾದಿ ನಾಗರಾಜ ನಾಯಕ ಪ್ರತಿವರ್ಷ ಗದ್ದೆಯಲ್ಲೇ ಕಾರ್ಯಕ್ರಮ ಸಂಘಟಿಸುತ್ತಿದ್ದಾರೆ. ಕೃಷಿಕರಿಗೆ, ಅತಿಥಿಗಳಿಗೆ ಕಂಬಳಿ ಹೊದೆಸಿ ಸನ್ಮಾನ, ಗದ್ದೆ ಉಳುಮೆ, ನಾಟಿ ಮಾಡುವ ಮೂಲಕ ಯುವಕರನ್ನು ಕೃಷಿಯತ್ತ ಸೆಳೆಯುವ ಉದ್ದೇಶ ಹೊಂದಿದ್ದಾರೆ. ಸಾಕಷ್ಟು ಜನರು ಕೃಷಿ ಹಬ್ಬಕ್ಕೆ ಸಾಕ್ಷಿಯಾಗುತ್ತಿದ್ದಾರೆ. ರೈತರ ಜೊತೆ ಇತರ ಕ್ಷೇತ್ರದ ಉದ್ಯೋಗಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಿರುವುದು ಗಮನಾರ್ಹವಾಗಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾದಾರ ಚೆನ್ನಯ್ಯ ಸ್ವಾಮೀಜಿ, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್, ಸುವರ್ಣ ನ್ಯೂಸ್ ಸಂಪಾದಕ ಅಜಿತ ಹನುಮಕ್ಕನವರ, ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಶಾಸಕ ವೈ.ಎಸ್.ವಿ. ದತ್ತ, ಕವಿತಾ ಮಿಶ್ರ ಮತ್ತಿತರರು ಇಲ್ಲಿನ ಕೃಷಿ ಹಬ್ಬದಲ್ಲಿ ಪಾಲ್ಗೊಂಡು ಗದ್ದೆ ಉಳುಮೆ ಮಾಡಿ ನಾಟಿ ಮಾಡಿದ್ದಾರೆ. ಬಹುಮುಖ ವ್ಯಕ್ತಿತ್ವದ ನಾಗರಾಜ ನಾಯಕ ಈ ಅಪರೂಪದ ಕಾರ್ಯಕ್ರಮ ಸಂಘಟಿಸುವ ಮೂಲಕ ಗಮನ ಸೆಳೆದಿದ್ದಾರೆ. ಕೃಷಿ ಹಬ್ಬಕೃಷಿಯ ಮಹತ್ವ ವಿವರಿಸಿ, ಆ ಕುರಿತು ಜಾಗೃತಿ ಮೂಡಿಸಿ, ಯುವ ಜನತೆಯನ್ನು ಕೃಷಿಯತ್ತ ಹೊರಳುವಂತೆ ಮಾಡುವ ಉದ್ದೇಶದಿಂದ ಕೃಷಿ ಹಬ್ಬವನ್ನು ಸಂಘಟಿಸುತ್ತಿದ್ದೇವೆ. ನಾಡಿನ ಖ್ಯಾತನಾಮರು ಉಳುಮೆ ಮಾಡಿ, ನಾಟಿ ಮಾಡುವುದು ನಾಡಿನಾದ್ಯಂತ ಕೃಷಿಯ ಬಗ್ಗೆ ಪೂರಕ ಸಂದೇಶ ತಲುಪುವಂತಾಗಿದೆ.
ನಾಗರಾಜ ನಾಯಕನ್ಯಾಯವಾದಿ, ಕೃಷಿ ಹಬ್ಬದ ಸಂಘಟಕರು.