ಸಾರಾಂಶ
ರೈತರಿಗೆ ಗುಣಮಟ್ಟದ ಬೀಜ- ರಸಗೊಬ್ಬರ, ಕೀಟ ನಾಶಕಗಳನ್ನು ಮಾರಾಟ ಮಾಡಿ, ಎಂಆರ್ ಪಿ ದರಕ್ಕಿಂತ ಹೆಚ್ಚಿನ ಹಣ ಪಡೆಯಬಾರದು.
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ರೈತರಿಗೆ ಗುಣಮಟ್ಟದ ಬೀಜ, ರಸಗೊಬ್ಬರ, ಕೀಟ ನಾಶಕಗಳನ್ನು ಮಾರಾಟ ಮಾಡಿ, ಎಂಆರ್ ಪಿ ದರಕ್ಕಿಂತ ಹೆಚ್ಚಿನ ಹಣ ಪಡೆಯಬಾರದು ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಕೃಷಿ ಪರಿಕರ ಮಾರಾಟಗಾರರಿಗೆ ತಾಕೀತು ಮಾಡಿದರು.ಪಟ್ಟಣದ ಕೃಷಿ ಇಲಾಖೆ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಕೃಷಿ ಪರಿಕರ ಮಾರಾಟಗಾರರ ಸಭೆ ಉದ್ಘಾಟಿಸಿ ಗುರುವಾರ ಮಾತನಾಡಿದರು.
ಸತ್ವ ಇರುವ ಬೀಜ ಕೊಡಿ, ಸತ್ತು ಹೋಗಿರುವ ಬೀಜಗಳನ್ನು ಕೊಡಬೇಡಿ ಎಂದ ಅವರು, ಕೊಠಿಗೆ ಗೊಬ್ಬರ, ಬೇವಿನ ಹಿಂಡಿ ಹೀಗೆ ಹಳೆ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ರೈತರಿಗೆ ಗೊತ್ತಿಲ್ಲದ ವಿಷಯಗಳನ್ನು ಅನುಭವಸ್ಥ ಮಾರಾಟಗಾರರಾದ ನೀವು ತಿಳಿಸಿ ಕೊಡಿ ಎಂದರು.ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ರೇವಣಸಿದ್ದಪ್ಪ ಮಾತನಾಡಿ, ಮಾರಾಟಗಾರರು, ಕೃಷಿ ಇಲಾಖೆ ರೈತರಿಗೆ ಸೇತುವೆ ಇದ್ದ ಹಾಗೆ, ಉತ್ತಮ ಕೀಟ ನಾಶಕ ಸಿಂಪಡಿಸಲು ಸಲಹೆ ನೀಡಿ, ಮೆಕ್ಕೆಜೋಳ ಬೆಳೆ ಮಧ್ಯೆ ಅಕ್ಕಡಿ ಕಾಳು ಬೆಳೆಯಲು ಉತ್ತೇಜನ ನೀಡಿ ಎಂದು ತಿಳಿಸಿದರು.
ಜಾಗೃತದಳದ ಸಹಾಯಕ ಕೃಷಿ ನಿದೇಶಕ ಕುಮಾರಸ್ವಾಮಿ ಮಾತನಾಡಿ, ಕಾನೂನು ಚೌಕಟ್ಟಿನಲ್ಲಿ ಹಾಗೂ ಗುಣಮಟ್ಟದ ಬೀಜ, ಗೊಬ್ಬರ, ಕೀಟ ನಾಶಕ ಮಾರಾಟ ಮಾಡಬೇಕು ಎಂದು ಹೇಳಿದರು. ಕಡ್ಡಾಯವಾಗಿ ಜಿಎಸ್ ಟಿ ಬಿಲ್ ಕೊಡಬೇಕು, ಚೀಟಿ ಕೊಡಬಾರದು, ಅನಧಿಕೃತ ಬೀಜ, ಗೊಬ್ಬರ ಮಾರಾಟ ಮಾಡಬಾರದು, ರೈತರಿಂದ ದೂರು ಬರಬಾರದು ಎಂದ ಅವರು, ಕಾನೂನು ಚೌಕಟ್ಟು ಉಲ್ಲಂಘನೆ ಮಾಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.ಸ್ಥಳೀಯ ಸಹಾಯಕ ಕೃಷಿ ನಿರ್ದೆಶಕ ಉಮೇಶ ಮಾತನಾಡಿ, ನಮ್ಮ ಕಡೆಯಿಂದ ತಾಲೂಕಿನ ನಾಲ್ಕು ಹೋಬಳಿಗಳಲ್ಲಿ ಜೂ. 1ರಿಂದ ಬೀಜ, ರಸಗೊಬ್ಬರ, ಕೃಷಿ ಉಪಕರಣಗಳನ್ನು ವಿತರಣೆ ಮಾಡುತ್ತೇವೆ. ಕಾಯ್ದೆ ಅಡಿ ಕೃಷಿ ಉಪಕರಣಗಳನ್ನು ಮಾರಾಟ ಮಾಡಬೇಕು ಇಲ್ಲದಿದ್ದರೆ ಕ್ರಮ ಖಂಡಿತ ಎಂದು ಮಾರಾಟಗಾರರಿಗೆ ತಿಳಿಸಿದರು.
ಈ ಸಂದರ್ಭ ಬ್ರಾಂಡೆಂಡ್ ಬೀಜ, ರಸಗೊಬ್ಬರಗಳಿಗೆ ಡಿಮೆಂಡ್ ಮಾಡದೆ ಪರ್ಯಾಯ ಗೊಬ್ಬರಗಳನ್ನು ಉಪಯೋಗಿಸಲು ತಿಳುವಳಿಕೆ ನೀಡುವ ಕರಪತ್ರ ಹಾಗೂ ಖರೀದಿಯಾಗುವ ರಸಗೊಬ್ಬರ ನೊಂದಣಿ ಮಾಡುವ ಪಿಒಎಸ್ ಯಂತ್ರಗಳನ್ನು ಮಾರಾಟಗಾರರಿಗೆ ಶಾಸಕರು ವಿತರಣೆ ಮಾಡಿದರು.ಕೃಷಿ ಪರಿಕರ ಮಾರಾಟಗಾರರ ಸಂಘಕ್ಕೆ ಪಟ್ಟಣದಲ್ಲಿ ನಿವೇಶನ ನೀಡುವಂತೆ ಸಂಘದ ಅಧ್ಯಕ್ಷರು, ಸದಸ್ಯರು ಶಾಸಕರಲ್ಲಿ ಮನವಿ ಸಲ್ಲಿಸಿದರು.
ಪುರಸಭಾ ಹಿರಿಯ ಸದಸ್ಯ ಎಂ.ವಿ. ಅಂಜಿನಪ್ಪ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಎಸ್.ಮಡಿವಾಳಪ್ಪ,ಸಹಾಯಕ ಕೃಷಿ ನಿರ್ದೆಶಕ ಉಮೇಶ, ಕೃಷಿ ಪರಿಕರ ಮಾರಾಟಗಾರರ ತಾಲೂಕು ಅಧ್ಯಕ್ಷ ನಾಗಲಿಂಗಯ್ಯ, ಶಿವಲಿಂಗಯ್ಯ ಕಳಸದಮಠ್, ಪುರಸಭಾ ಸದಸ್ಯ ಲಾಟಿದಾದಾಪೀರ, ತಾಪಂ ಮಾಜಿ ಸದಸ್ಯ ಹುಲ್ಲಿಕಟ್ಟಿ ಚಂದ್ರಪ್ಪ, ಕೃಷಿ ಅಧಿಕಾರಿ ನಾಗರಾಜ ಸಕ್ರೀಗೌಡ ಉಪಸ್ಥಿತರಿದ್ದರು.