ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಸರ್ಕಾರ ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ರಾಜ್ಯಾದ್ಯಂತ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಆರಂಭಿಸಿದೆ. ಈ ಕೇಂದ್ರಗಳ ಮೂಲಕ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಯಂತ್ರೋಪಕರಣಗಳನ್ನು ರಿಯಾಯಿತಿ ದರದಲ್ಲಿ ಬಾಡಿಗೆಗೆ ಒದಗಿಸಲಾಗುತ್ತಿದೆ.
ಬಂಗಾರಪೇಟೆ: ರೈತರಿಗೆ ಕೈಗೆಟುಕುವ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ಒದಗಿಸುವ ಮೂಲಕ ತಾಲೂಕಿನ ಬೂದಿಕೋಟೆ ಕೃಷಿ ಯಂತ್ರಧಾರೆ ಕೇಂದ್ರವು ರಾಜ್ಯದಲ್ಲೇ ಮೊದಲ ಸ್ಥಾನ ಕಾಯ್ದುಕೊಂಡಿದೆ ಎಂದು ಕೃಷಿ ಯಂತ್ರಧಾರೆ ಕೇಂದ್ರಗಳ ಯೋಜನಾಧಿಕಾರಿ ಪಾಂಡ್ಯನ್ ಹೇಳಿದರು.
ತಾಲೂಕಿನ ಬೂದಿಕೋಟೆ ಗ್ರಾಮದ ಕೃಷಿ ಯಂತ್ರಧಾರೆ ಕಚೇರಿಯಲ್ಲಿ ಆಯೋಜಿಸಿದ್ದ ಆಯುಧ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಸರ್ಕಾರ ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ರಾಜ್ಯಾದ್ಯಂತ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಆರಂಭಿಸಿದೆ. ಈ ಕೇಂದ್ರಗಳ ಮೂಲಕ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಯಂತ್ರೋಪಕರಣಗಳನ್ನು ರಿಯಾಯಿತಿ ದರದಲ್ಲಿ ಬಾಡಿಗೆಗೆ ಒದಗಿಸಲಾಗುತ್ತಿದೆ. ಇದರಿಂದ ರೈತರು ಕೃಷಿ ಕಾರ್ಯಗಳಿಗೆ ಹೆಚ್ಚಿನ ಹಣ ವ್ಯಯಿಸುವುದನ್ನು ತಪ್ಪಿಸಿ, ಕಡಿಮೆ ವೆಚ್ಚದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ ಎಂದರು.
ಆಧುನಿಕ ಕೃಷಿ ಪದ್ಧತಿಯಲ್ಲಿ ನೂತನ ತಂತ್ರಜ್ಞಾನದ ಯಂತ್ರೋಪಕರಣಗಳ ಬಳಕೆ ಹೆಚ್ಚಾಗಿದೆ. ಆದರೆ ಖಾಸಗಿ ವ್ಯಕ್ತಿಗಳಿಂದ ಕೃಷಿ ಯಂತ್ರಗಳನ್ನು ಬಾಡಿಗೆಗೆ ಪಡೆಯಲು ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳು ರೈತರಿಗೆ ವರದಾನವಾಗಿವೆ. ಕಡಿಮೆ ಬಾಡಿಗೆ ದರದಲ್ಲಿ ಯಂತ್ರೋಪಕರಣಗಳನ್ನು ಒದಗಿಸುವ ಮೂಲಕ ಕೃಷಿ ವೆಚ್ಚವನ್ನು ತಗ್ಗಿಸಲು ನೆರವಾಗುತ್ತಿವೆ ಎಂದು ತಿಳಿಸಿದರು.ಸಿಎಚ್ಎಸ್ಸಿ ಪ್ರಬಂಧಕ ಮುಜಾಯಿದ್ ವಿ.ಬಿ., ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ್ ಶೆಟ್ಟಿ, ಜ್ಯೋತೆನಹಳ್ಳಿ ರಾಮಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಆರ್. ಮಂಜುನಾಥ್, ಕಚೇರಿ ಸಹಾಯಕ ಸುರೇಶ್, ಕೇಂದ್ರದ ಚಾಲಕರಾದ ಮಂಜುನಾಥ್, ಪ್ರಕಾಶ್, ನಾಗರಾಜ್, ನಾರಾಯಣಪ್ಪ, ಮುಖಂಡರಾದ ಸಂಪಂಗಿ, ಪ್ರಭು ಸೇರಿ ಇತರರು ಉಪಸ್ಥಿತರಿದ್ದರು.