ಪಾಳು ಭೂಮಿಯಲ್ಲಿ ಈರುಳ್ಳಿ ಬಿತ್ತಿದ ಕೃಷಿ ಅಧಿಕಾರಿಗಳು

| Published : Apr 19 2025, 12:31 AM IST

ಪಾಳು ಭೂಮಿಯಲ್ಲಿ ಈರುಳ್ಳಿ ಬಿತ್ತಿದ ಕೃಷಿ ಅಧಿಕಾರಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಹನುಮನಾಳ ಹೋಬಳಿಯ ಅರ್ಜಿ ಸಂಖ್ಯೆ 1682986 ಅಡಿ ಬರೋಬ್ಬರಿ ಹತ್ತಾರು ರೈತರ ಬೆಳೆ ವಿಮೆ ಪಾವತಿಸಿದ್ದಾರೆ. ಇದೆಲ್ಲವೂ ಪಾಳು ಭೂಮಿಯೇ. ಹೀಗೆ ಬೆಳೆ ವಿಮೆ ಪಾವತಿ ಮಾಡಿದ್ದ ರೈತ (ರೈತರ ಹೆಸರಿನಲ್ಲಿ ) ಬೆಳೆ ದರ್ಶಕದಲ್ಲಿ ಪಾಳು ಭೂಮಿ ಎಂದು ನಮೂದಿಸಲಾಗಿದೆ. ಆದರೂ ಸಹ ಈರುಳ್ಳಿ ಬೆಳೆಗೆ ಬೆಳೆ ವಿಮೆ ಪಾವತಿಸಲಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಅಕ್ರಮ ಬಗೆದಷ್ಟು ಬಯಲಿಗೆ ಬರುತ್ತಿವೆ. ಬೆಳೆ ವಿಮೆ ಪಾವತಿಸಿದ ರೈತನೇ ಆಕ್ಷೇಪ ಸಲ್ಲಿಸದೇ ಇದ್ದರೂ ಸಹ ಕೃಷಿ ಇಲಾಖೆಯ ಅಧಿಕಾರಿಗಳೇ ತಾವೇ ಬೆಳೆ ತಿದ್ದುಪಡಿ ಮಾಡಿ ಈರುಳ್ಳಿ ಬೆಳೆ ಬಿತ್ತಿದ್ದಾರೆ.

ಹನುಮನಾಳ ಹೋಬಳಿಯ ಅರ್ಜಿ ಸಂಖ್ಯೆ 1682986 ಅಡಿ ಬರೋಬ್ಬರಿ ಹತ್ತಾರು ರೈತರ ಬೆಳೆ ವಿಮೆ ಪಾವತಿಸಿದ್ದಾರೆ. ಇದೆಲ್ಲವೂ ಪಾಳು ಭೂಮಿಯೇ. ಹೀಗೆ ಬೆಳೆ ವಿಮೆ ಪಾವತಿ ಮಾಡಿದ್ದ ರೈತ (ರೈತರ ಹೆಸರಿನಲ್ಲಿ ) ಬೆಳೆ ದರ್ಶಕದಲ್ಲಿ ಪಾಳು ಭೂಮಿ ಎಂದು ನಮೂದಿಸಲಾಗಿದೆ. ಆದರೂ ಸಹ ಈರುಳ್ಳಿ ಬೆಳೆಗೆ ಬೆಳೆ ವಿಮೆ ಪಾವತಿಸಲಾಗಿದೆ. ರೈತ ಬೆಳೆ ಕುರಿತು ಆಕ್ಷೇಪ ಸಲ್ಲಿಸಿಯೇ ಇಲ್ಲ. ಆದರೂ ಕೃಷಿ ಇಲಾಖೆ ಅಧಿಕಾರಿಗಳೇ ತಾವೇ ಬೆಳೆ ಬದಲಾವಣೆ ಮಾಡಿದ್ದಾರೆ. ರೈತರು ಆಕ್ಷೇಪ ಸಲ್ಲಿಸಿದ ಹೊರತು ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ಬದಲಾಯಿಸುವುದಕ್ಕೆ ಅವಕಾಶವಿಲ್ಲ. ಆದರೂ ಪಾಳು ಬಿದ್ದ ಭೂಮಿಯಲ್ಲಿ ಈರುಳ್ಳಿ ಬೆಳೆಯನ್ನು ಕೃಷಿ ಇಲಾಖೆಯ ಅಧಿಕಾರಿಗಳು ತಿದ್ದುಪಡಿ ಮಾಡಿ, ದಾಖಲಿಸಿದ್ದಾರೆ. ಬೆಳೆ ದರ್ಶಕದಲ್ಲಿ ಇದೆಲ್ಲವೂ ಬಯಲಾಗಿದೆ. ಪಾಳು ಬಿದ್ದ ಭೂಮಿಯ ಚಿತ್ರವೂ ಇದೆ. ನಂತರ ಅದನ್ನು ಈರುಳ್ಳಿಯಾಗಿ ಪರಿವರ್ತಿಸಿದ ಮಾಹಿತಿಯೂ ಇದೆ.

ಈ ರೀತಿ ರಂಗಾಪುರ, ಎಂ. ಕುರ್ಬನಾಳ, ಬಿಳೇಕಲ್ ಗ್ರಾಮಗಳ ಸರ್ವೇ ನಂಬರ್‌ನಲ್ಲಿ ಒಂದೇ ಅರ್ಜಿಯಡಿ ಬೆಳೆ ವಿಮೆ ಪಾವತಿಸಲಾಗಿದೆ ಮತ್ತು ಬೆಳೆ ವಿಮಾ ಪರಿಹಾರ ಪಡೆಯಲಾಗಿದೆ. ಇದು ಈಗ ತನಿಖೆಯ ವೇಳೆಯಲ್ಲಿ ಬಯಲಾಗಿದೆ. ಇದರಲ್ಲಿ ರೈತರು ತಪ್ಪಾಗಿ ನಮೂದಿಸಿಲ್ಲ. ಬದಲಾಗಿ ಕೃಷಿ ಇಲಾಖೆಯ ಅಧಿಕಾರಿಗಳೇ ಯಾವುದೇ ಆಕ್ಷೇಪ ಇಲ್ಲದಿದ್ದರೂ ಪಾಳು ಬಿದ್ದ ಭೂಮಿಯಲ್ಲಿ ಈರುಳ್ಳಿ ಬೆಳೆ ತುಂಬಿದ್ದಾರೆ. ಈ ಮೂಲಕ ಹತ್ತಾರು ಲಕ್ಷ ರುಪಾಯಿ ಬೆಳೆ ವಿಮಾ ಪರಿಹಾರ ಪಡೆದಿದ್ದಾರೆ. ಇದು ಕೇವಲ ಉದಾಹರಣೆ ಅಷ್ಟೇ. ಇಂಥ ಸಾಲು ಸಾಲು ಅಕ್ರಮಗಳು ನಡೆದಿರುವುದು ಈಗ ಒಂದೊಂದಾಗಿಯೇ ಬೆಳಕಿಗೆ ಬರಲಾರಂಭಿಸಿವೆ.

ರೈತನಲ್ಲದವನು ಬೇರೊಬ್ಬರ ಜಮೀನಿಗೆ ಬೆಳೆ ವಿಮೆ ಪರಿಹಾರ ಪಡೆದುಕೊಂಡಿದ್ದು ಸಾಬೀತಾದ ಹಿನ್ನೆಲೆ ಆತನ ಬ್ಯಾಂಕ್‌ ಖಾತೆ ಫ್ರೀಜ್‌ ಮಾಡಿರುವ ಕೃಷಿ ಇಲಾಖೆಯ ಅಧಿಕಾರಿಗಳು ಈಗ ತಮ್ಮ ಅಧಿಕಾರಿಗಳೇ ಈ ಅಕ್ರಮದಲ್ಲಿ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು ಯಾವ ರೀತಿಯ ಕ್ರಮಕೈಗೊಳ್ಳುತ್ತಾರೆ ಎಂಬುದು ಕಾದುನೋಡಬೇಕಿದೆ.

ಕೇವಲ ಇದ್ದ ರೈತರ ಹೆಸರಿನಲ್ಲಿ ಮಾತ್ರವಲ್ಲ ಸತ್ತವರ ಹೆಸರಿನಲ್ಲೂ ಬೆಳೆ ವಿಮೆ ಪಾವತಿಸಿ ಪರಿಹಾರ ಪಡೆದುಕೊಂಡಿರುವ ಉದಾಹರಣೆಗಳು ಇವೆ ಎನ್ನುವುದು ಗಮನಾರ್ಹ ಸಂಗತಿ.ಪಾಳು ಬಿದ್ದ ಭೂಮಿಯ ಹೆಸರಿನಲ್ಲಿ ಈರುಳ್ಳಿ ಬಿತ್ತನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ರೈತರು ಆಕ್ಷೇಪ ಸಲ್ಲಿಸದೆ ಇರದ್ದೂ ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ಬದಲಾಯಿಸಿರುವುದು ದಾಖಲೆಯಲ್ಲಿ ಪತ್ತೆಯಾಗಿದೆ.

ರವಿರಾಜ ಕುಲಕರ್ಣಿ ವಕೀಲರು