ಮೃತ್ಯಕೂಪವಾಗಿರುವ ಕೃಷಿ ಹೊಂಡ

| Published : Mar 25 2025, 12:46 AM IST

ಸಾರಾಂಶ

ಕೃಷಿ ಹೊಂಡದಲ್ಲಿ ಯಾವುದೇ ಅನಾಹುತಗಳು ನಡೆಯುವುದನ್ನು ತಪ್ಪಿಸಲು ಸುತ್ತಲೂ ತಂತಿ ಬೇಲಿಯನ್ನು ನಿರ್ಮಿಸುವುದನ್ನು ಸರ್ಕಾರ ಕಡ್ಡಾಯ ಮಾಡಿದೆ. ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿಯನ್ನು ನಿರ್ಮಿಸಲು ಶೇ. 40 ರಿಂದ 50 ರಷ್ಟು ಸಹಾಯಧನವನ್ನು ಸಹ ನೀಡಲಾಗುತ್ತದೆ. ಆದರೂ ರೈತರು ಹೊಂಡಕ್ಕೆ ತಂತಿಬೇಲಿ ನಿರ್ಮಿಸುತ್ತಿಲ್ಲ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಕೃಷಿ ಭಾಗ್ಯ ಸೇರಿದಂತೆ ವಿವಿಧ ಯೋಜನೆಗಳಲ್ಲಿ ನಿರ್ಮಿಸಿರುವ ಕೃಷಿ ಹೊಂಡಗಳಿಗೆ ತಂತಿ ಬೇಲಿಯನ್ನು ನಿರ್ಮಿಸದೇ ಕಡೆಗಣಿಸಿರುವುದರಿಂದ ಜನ ಹಾಗೂ ಜಾನುವಾರುಗಳಿಗೆ ಮೃತ್ಯುಕೂಪಗಳಾಗಿ ಮಾರ್ಪಡುತ್ತಿದ್ದರೂ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ. ತಾಲೂಕಿನ ಬಹುತೇಕ ಜನರು ಹೆಚ್ಚಿನ ಪ್ರಮಾಣದಲ್ಲಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಕೃಷಿಗೆ ನೀರನ್ನು ಸಂಗ್ರಹಿಸಲು ಸರ್ಕಾರ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು, ಯೋಜನೆಯ ಅನ್ವಯ ರೈತರು ಕೃಷಿ ಹೊಂಡಗಳನ್ನು ನಿರ್ಮಿಸಿ ಅದಕ್ಕೆ ಪಾಲಿಥೀನ್ ಹೊದಿಕೆ ಮಾಡಿಕೊಂಡು ನೀರನ್ನು ಸಂಗ್ರಹಣೆ ಮಾಡಿ ಬೇಸಾಯಕ್ಕೆ ಬಳಸುತ್ತಿದ್ದಾರೆ.

ಹೊಂಡಕ್ಕೆ ತಂತಿಬೇಲಿ ಕಡ್ಡಾಯ

ಹೀಗೆ ನಿರ್ಮಾಣ ಮಾಡಿರುವಂತಹ ಕೃಷಿ ಹೊಂಡದಲ್ಲಿ ಯಾವುದೇ ಅನಾಹುತಗಳು ನಡೆಯುವುದನ್ನು ತಪ್ಪಿಸಲು ಸುತ್ತಲೂ ತಂತಿ ಬೇಲಿಯನ್ನು ನಿರ್ಮಿಸುವುದನ್ನು ಸರ್ಕಾರ ಕಡ್ಡಾಯ ಮಾಡಿದೆ. ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿಯನ್ನು ನಿರ್ಮಿಸಲು ಶೇ. 40 ರಿಂದ 50 ರಷ್ಟು ಸಹಾಯಧನವನ್ನು ಸಹ ನೀಡಲಾಗುತ್ತದೆ. ಆದರೆ ಬಹುತೇಕ ರೈತರು ತಾವು ತಮ್ಮ ಜಮೀನಿನಲ್ಲಿ ನಿರ್ಮಿಸಿರುವಂತಹ ಕೃಷಿ ಹೊಂಡಗಳಿಗೆ ತಂತಿ ಬೇಲಿಗಳನ್ನು ನಿರ್ಮಿಸುವುದನ್ನು ಕಡೆಗಣಿಸಿದ್ದಾರೆ. ಇದರಿಂದಾಗಿ ನೀರು ಕುಡಿಯಲು ಅಥವಾ ಈಜಾಡಲು ಕೃಷಿ ಹೊಂಡದ ಬಳಿ ಹೋಗುವಂತಹ ಮಕ್ಕಳು ಸೇರಿದಂತೆ ಇತರರು ನೀರಿಗೆ ಬಿದ್ದು ಸಾವನ್ನಪ್ಪಿರುವ ಘಟನೆಗಳು ಹೆಚ್ಚಾಗುತ್ತಿವೆ. ಬೇಸಿಗೆ ಪರಿಣಾಮ ಕುಂಟೆಗಳು ನೀರಿಲ್ಲದೆ ಖಾಲಿಯಾಗಿರುವುದರಿಂದ ಈಜಾಡಲು ಕೃಷಿ ಹೊಂಡಗಳ ಮೊರೆ ಹೋಗುವುದು ಸಾಮಾನ್ಯವಾಗಿದೆ.

ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ನಿರ್ಮಿಸದೇ ನಿರ್ಲಕ್ಷ್ಯ ತೋರಿರುವುದರಿಂದ ಅನಾಹುತಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ. ಆದ್ದರಿಂದ ರೈತರು ನಿರ್ಮಿಸಿರುವಂತಹ ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿಯನ್ನು ನಿರ್ಮಿಸಲು ಮುಂದಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಕೋಟ್‌...........

ಈಗ ಸರ್ಕಾರದಿಂದ ವಿತರಣೆ ಮಾಡುತ್ತಿರುವ ಕೃಷಿ ಹೊಂಡಗಳಿಗೆ ತಂತಿ ಬೇಲಿಯನ್ನು ನಿರ್ಮಾಣ ಮಾಡುವುದನ್ನು ಕಡ್ಡಾಯ ಮಾಡಿ ಅನುದಾನವನ್ನು ನೀಡುತ್ತಿದೆ. ತಂತಿ ಬೇಲಿ ಇಲ್ಲದೆ ಕೃಷಿ ಹೊಂಡ ನಿರ್ಮಿಸಿದ ರೈತರಿಗೆ ತಂತಿ ಬೇಲಿ ನಿರ್ಮಿಸಲು ಸೂಚನೆ ನೀಡಲಾಗುತ್ತದೆ.

-- ಪ್ರತಿಭಾ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ.