ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಜಾಗತೀಕರಣ, ಔದ್ಯೋಗೀಕರಣ, ನಗರೀಕರಣ, ಪಾಶ್ಚಾತ್ಯ ಜೀವನ ಶೈಲಿಯ ಅನುಕರಣೆಗಳಿಂದಾಗಿ ನಮ್ಮ ಯುವಕರು ಕೃಷಿಯನ್ನು ಕಷ್ಟ ಹಾಗೂ ನಷ್ಟದ ಕೆಲಸವೆಂದು ಭಾವಿಸಿರುವುದಕ್ಕೆ ನಮ್ಮ ಕೃಷಿ ನೀತಿಯೂ ಕಾರಣವಾಗಿದೆ ಎಂದು ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ ತಿಳಿಸಿದರು.ನಗರದ ಸ್ನಾತಕೋತ್ತರ ಕೇಂದ್ರದ ಎಂ.ಸಿ.ಎ ಮತ್ತು ಎಂ.ಬಿ.ಎ. ವಿದ್ಯಾರ್ಥಿಗಳಿಗಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕೃಷಿ ಪ್ರಜ್ಞೆ-ಪರಿಸರ ಪ್ರಜ್ಞೆ ಮುಖಾಮುಖಿಯೋ? ಅನುಸಂಧಾನವೊ? ಎಂಬ ವಿಷಯದ ಬಗ್ಗೆ ನಡೆದ ಸಂವಾದ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉನ್ನತ ಶಿಕ್ಷಣ ಪಡೆಯುತ್ತಿರುವ ಯುವ ಜನಾಂಗ ಉನ್ನತ ಉದ್ಯೋಗವನ್ನೇ ಬಯಸುವುದು, ಅದು ಸಾಧ್ಯವಾಗದಿದ್ದಾಗ ನಿರಾಶಾವಾದಿಗಳಾಗಿ ಸಮಾಜದ ಬಗ್ಗೆಯೇ ನಂಬಿಕೆ ಕಳೆದುಕೊಂಡು ಸಮಾಜ ಕಂಟಕರಾಗಿ ಬೆಳೆಯುವುದಕ್ಕೆ ಕಾರಣ ನಮ್ಮ ಉದ್ಯೋಗಕ್ಕಾಗಿಯೇ ಇರುವ ಶಿಕ್ಷಣ ವ್ಯವಸ್ಥೆ. ಇದು ಉದ್ಯೋಗಾಧಾರಿತ ಶಿಕ್ಷಣ ನೀತಿಯಾಗಬೇಕಿತ್ತು. ಮಳೆ ಬಂದರೆ ಬೆಳೆ, ಬೆಳೆ ಬಂದರೂ ಬೆಲೆ ಸಿಗದಿರುವುದು, ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು, ಉದ್ಯೋಗಕ್ಕೂ ಶಿಕ್ಷಣಕ್ಕೂ ಸಂಬದವಿಲ್ಲದಿರುವುದು ಇತ್ಯಾದಿ ಕಾರಣಗಳಿಂದಾಗಿ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಇದು ನಮ್ಮ ಭವಿಷ್ಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಲ್ಲ. ಹೊಸ ರೀತಿಯಲ್ಲಿ ಕೃಷಿಗೆ ಮಹತ್ವ ಗೌರವ ತಂದುಕೊಡುವ ಕೆಲಸ ಮಾಡಬೇಕಿದೆ ಎಂದರು. ಕತೆಗಾರ ಎಸ್.ಗಂಗಾಧರಯ್ಯ ಮಾತನಾಡಿ ಕಳೆದ ಒಂದೂವರೆ ದಶಕಗಳಲ್ಲಿ 2, 87, 000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಯಾವುದೇ ಯುದ್ಧದಲ್ಲಿ ಈ ರೀತಿಯ ಸಾವು ಸಂಭವಿಸಿಲ್ಲ. ನಮ್ಮ ಹಿರಿಯರು ಯಾವುದೇ ಪ್ರಾಕೃತಿಕ ವಿಕೋಪ, ತೀವ್ರ ಬರಗಾಲ ಬಂದಾಗಲೂ ಆತ್ಮಹತ್ಯೆಯಂತಹ ಹೇಡಿ ಕೆಲಸಕ್ಕೆ ಮನಸ್ಸು ಮಾಡಿರಲಿಲ್ಲ. ಆದರೆ ಇಂದಿನ ಕೃಷಿ ನೀತಿಯಿಂದಾಗಿ ರೈತರ ಬದುಕುವ ಧೈರ್ಯವನ್ನೇ ಕಸಿದುಕೊಂಡಿದೆ ಎಂದು ವಿಷಾದಿಸಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಸವರಾಜಪ್ಪ, ಪರಿಷತ್ತು ಕೇವಲ ಕನ್ನಡ ನಾಡು, ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಗಮನಹರಿಸದೆ ಅನ್ನದಾತನ ಬದುಕು, ಬವಣೆಗಳನ್ನು ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಕೃಷಿ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳ ಬಗ್ಗೆ ಎರಡು ದಿನಗಳ ಅಧ್ಯಯನ ಶಿಬಿರ ಆಯೋಜಿಸುವ ಉದ್ದೇಶವಿದ್ದು, ಪ್ರಾರಂಬಿಕ ಸಿದ್ದತೆಗಳು ನಡೆಯುತ್ತಿವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸ್ನಾತಕೋತ್ತರ ಕೇಂದ್ರದ ಸಂಯೋಜನಾಧಿಕಾರಿ ಬಿ.ಪಿ. ಮಲ್ಲಿಕಾರ್ಜುನಸ್ವಾಮಿ ಮಾತನಾಡಿ ಇಂದಿನ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳು ಕೇವಲ ಪದವಿ ಪ್ರಮಾಣ ಪತ್ರಕ್ಕಾಗಿ ಇದ್ದು, ಬದುಕಿನ ಪಾಠಗಳನ್ನು ಕಲಿಯಲು, ಸಮಸ್ಯೆಗಳನ್ನು ಸಮರ್ಪಕವಾಗಿ ಎದುರಿಸುವಂತಾಗಲು ಇಂತಹ ವಿಚಾರ ಸಂಕಿರಣಗಳು ಅತ್ಯಗತ್ಯ. ಕೆಲವೇ ದಿನಗಳಲ್ಲಿ ಸ್ನಾತಕೋತ್ತರ ಕೆಂದ್ರ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾಗಲಿದ್ದು, ಕನ್ನಡ ಸಾಹಿತ್ಯ ಪರಿ?ತ್ತಿನ ಎಲ್ಲ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಕ.ಸಾ.ಪ ಪದಾಧಿಕಾರಿಗಳಾದ ಬಿ. ನಾಗರಾಜು,ಷೆಹೆಚ್.ಎಸ್. ಮಂಜಪ್ಪ, ಗೋವಿಂದರಾಜು, ಶಾರದಮ್ಮ, ಉಪನ್ಯಾಸಕರಾದ ದಿವ್ಯ, ಗಿರೀಶ್ ಮತ್ತಿತರರಿದ್ದರು.