ಕೃಷಿಕ ಸಮಾಜ ಸರ್ಕಾರ, ಕೃಷಿ ಇಲಾಖೆ-ರೈತರ ನಡುವೆ ಸೇತುವೆ: ಪಿ.ಕೆ.ಬಸವರಾಜ್

| Published : Jan 26 2025, 01:30 AM IST

ಕೃಷಿಕ ಸಮಾಜ ಸರ್ಕಾರ, ಕೃಷಿ ಇಲಾಖೆ-ರೈತರ ನಡುವೆ ಸೇತುವೆ: ಪಿ.ಕೆ.ಬಸವರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಕೃಷಿಕ ಸಮಾಜ ಸರ್ಕಾರ, ಕೃಷಿ ಇಲಾಖೆ ಹಾಗೂ ರೈತರ ಮಧ್ಯೆ ಸೇತುವೆಯಂತೆ ಕೆಲಸ ಮಾಡುತ್ತದೆ ಎಂದು ಜಿಲ್ಲಾ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಬಸವರಾಜ್‌ ತಿಳಿಸಿದರು.

- ಜಿಲ್ಲಾ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಬಸವರಾಜ್ ಮಾಹಿತಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕೃಷಿಕ ಸಮಾಜ ಸರ್ಕಾರ, ಕೃಷಿ ಇಲಾಖೆ ಹಾಗೂ ರೈತರ ಮಧ್ಯೆ ಸೇತುವೆಯಂತೆ ಕೆಲಸ ಮಾಡುತ್ತದೆ ಎಂದು ಜಿಲ್ಲಾ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಬಸವರಾಜ್‌ ತಿಳಿಸಿದರು.

ಶನಿವಾರ ಪ್ರವಾಸಿ ಮಂದಿರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ವರ್ಷ ಹೊಸದಾಗಿ ನರಸಿಂಹರಾಜಪುರ ತಾಲೂಕು ಕೃಷಿಕ ಸಮಾಜದ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ತಾಲೂಕು ಮಟ್ಟದಲ್ಲಿ 13 ಸರ್ಕಾರಿ ಇಲಾಖೆಗಳು ಕೃಷಿಕ ಸಮಾಜದ ಅಧೀನಕ್ಕೆ ಬರುತ್ತದೆ. ತಾಲೂಕು ಕೃಷಿಕ ಸಮಾಜ ಸರ್ಕಾರದ ಯೋಜನೆಗಳನ್ನು ಕೃಷಿ ಇಲಾಖೆಯೊಂದಿಗೆ ಸೇರಿಸಿ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡುತ್ತದೆ. ತಾಲೂಕು ಕೃಷಿಕ ಸಮಾಜದ ಎಲ್ಲಾ 15 ನಿರ್ದೇಶಕರು ಒಂದು ತಂಡವಾಗಿ ಕೆಲಸ ಮಾಡಿ ಸರ್ಕಾರದ ಆಶಯಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇವೆ ಎಂದರು.

ಸರ್ಕಾರದ ಎಲ್ಲಾ ಇಲಾಖೆ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಸಕರ ಆಶಯದಂತೆ ಸರ್ಕಾರದ ಎಲ್ಲಾ ಯೋಜನೆಗಳನ್ನು ರೈತರಿಗೆ ತಲುಪಿಸುವ ಕೆಲಸ ಮಾಡುತ್ತೇವೆ. ಜಿಲ್ಲಾ ಮಟ್ಟದ ಕೃಷಿಕ ಸಮಾಜಕ್ಕೆ ಹೆಚ್ಚು ಅನುದಾನ ಬರ ಬೇಕಾದರೆ ಜಿಲ್ಲೆಯಲ್ಲಿ ಕನಿಷ್ಠ 25 ಸಾವಿರ ಹೆಕ್ಟೇರ್‌ ಭತ್ತದ ಗದ್ದೆ ಇರಬೇಕು ಎಂಬ ನಿಯಮ ಇದೆ. ಆದರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ 13 ಸಾವಿರ ಹೆಕ್ಟೇರ್‌ ಭತ್ತದ ಗದ್ದೆ ಮಾತ್ರ ಇದೆ. ಇದರಿಂದ ಅನುದಾನ ಕಡಿಮೆ ಬರುತ್ತದೆ. ರಾಜ್ಯ ಕೃಷಿ ಮಂತ್ರಿ ಚೆಲುವರಾಯಸ್ವಾಮಿ ಅವರನ್ನು ಸಂಪರ್ಕಿಸಿ ಕೃಷಿಕ ಸಮಾಜಕ್ಕೆ ಹೆಚ್ಚು ಅನುದಾನ ತರಲು ಪ್ರಯತ್ನ ನಡೆಸಲಾಗುವುದು. ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ತರುವ ಬೆಳೆ ಬೆಳೆಯಬೇಕು ಎಂದರು.

ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಮಾತನಾಡಿ, ನರಸಿಂಹರಾಜಪುರ ರೈತ ಸಂಪರ್ಕ ಕೇಂದ್ರದ ಕಟ್ಟಡಕ್ಕೆ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದಿಂದ ಶಾಸಕ ಟಿ.ಡಿ.ರಾಜೇಗೌಡ ₹2 ಕೋಟಿ ಅನುದಾನ ಬಿಡುಗಡೆ ಮಾಡಿದ್ದು ಶೀಘ್ರದಲ್ಲೇ ಗುದ್ದಲಿ ಪೂಜೆ ನಡೆಯಲಿದೆ. ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದ್ದು ರೈತರಿಗೆ ಅನುಕೂಲವಾಗಲಿದೆ. ರೈತರಿಗೆ ಬೇಕಾದ ಎಲ್ಲಾ ಮಾಹಿತಿ ರೈತ ಸಂಪರ್ಕ ಕೇಂದ್ರದಲ್ಲಿ ಸಿಗಲಿದೆ ಎಂದರು.

ಸುದ್ದಿ ಗೋಷ್ಠಿಯಲ್ಲಿ ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಡಿ.ಮಂಜಪ್ಪ ಗೌಡ, ಕಾರ್ಯದರ್ಶಿ ನವೀನ್‌, ಖಜಾಂಚಿ ಬಿ.ಎಸ್‌.ಚೇತನ, ನಿರ್ದೇಶಕ ವೈ.ಎಸ್‌.ರವಿ ಇದ್ದರು.