18ರಿಂದ ಕೃಷಿ, ತೋಟಗಾರಿಕೆ ಮೇಳ: ಡಾ. ಜಗದೀಶ್

| Published : Oct 17 2024, 01:38 AM IST

18ರಿಂದ ಕೃಷಿ, ತೋಟಗಾರಿಕೆ ಮೇಳ: ಡಾ. ಜಗದೀಶ್
Share this Article
  • FB
  • TW
  • Linkdin
  • Email

ಸಾರಾಂಶ

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗವು ಕೃಷಿ ಹಾಗೂ ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಅ.18 ರಿಂದ 21 ರವರೆಗೆ ನಾಲ್ಕು ದಿನಗಳ ಕಾಲ ಕೃಷಿ ಮತ್ತು ತೋಟಗಾರಿಕಾ ಮೇಳ-2024 ಅನ್ನು ‘ಪೌಷ್ಠಿಕ ಆಹಾರಕ್ಕಾಗಿ ವಿಕಸಿತ ಕೃಷಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಕೃಷಿ ಮಹಾವಿದ್ಯಾಲಯದ ನವುಲೆ ಆವರಣದಲ್ಲಿ ಆಚರಿಸಲು ಉದ್ದೇಶಿಸಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ.ಜಗದೀಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗವು ಕೃಷಿ ಹಾಗೂ ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಅ.18 ರಿಂದ 21 ರವರೆಗೆ ನಾಲ್ಕು ದಿನಗಳ ಕಾಲ ಕೃಷಿ ಮತ್ತು ತೋಟಗಾರಿಕಾ ಮೇಳ-2024 ಅನ್ನು ‘ಪೌಷ್ಠಿಕ ಆಹಾರಕ್ಕಾಗಿ ವಿಕಸಿತ ಕೃಷಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಕೃಷಿ ಮಹಾವಿದ್ಯಾಲಯದ ನವುಲೆ ಆವರಣದಲ್ಲಿ ಆಚರಿಸಲು ಉದ್ದೇಶಿಸಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ.ಜಗದೀಶ್ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಬಾರಿಯ ಕೃಷಿ ಮೇಳವನ್ನು ವಿಶೇಷವಾಗಿರುವಂತೆ ಯೋಜನೆ ರೂಪಿಸಲಾಗಿದೆ. ಈ ಮೇಳದಲ್ಲಿ ತಂತ್ರಜ್ಞಾನ ಉದ್ಯಾನವನ, ಸಮಗ್ರ ಕೃಷಿ ಪದ್ಧತಿ, ಸಂರಕ್ಷಿತ ಕೃಷಿ, ಹೈ-ಟೆಕ್ ತೋಟಗಾರಿಕೆ- ಹೈಡೋಫೋನಿಕ್ ಕೃಷಿ, ಪುಷ್ಪ ಕೃಷಿ, ಜೇನು ಸಾಕಾಣಿಕೆ ಮತ್ತು ಕೀಟ ಪ್ರಪಂಚ, ದ್ವಿದಳ ಧಾನ್ಯ ತಳಿ ಪ್ರಾತ್ಯಕ್ಷಿಕೆ, ಸಿರಿಧಾನ್ಯಗಳ ಮಹತ್ವ, ಗೋಡಂಬಿ ಬೆಳೆ ಪ್ರಾತ್ಯಕ್ಷಿಕೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಸಾವಯವ ಕೃಷಿ, ಅಣಬೆ ಬೇಸಾಯ, ಸಮಗ್ರ ಜಲಾನಯನ ಅಭಿವೃದ್ಧಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ತಂತ್ರಜ್ಞಾನಗಳು, ಕೊಲ್ಲೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ, ಮೌಲ್ಯವರ್ಧಿತ ಕೃಷಿ ಉತ್ಪನ್ನಗಳು, ಹವಾಮಾನ ಆಧಾರಿತ ಕೃಷಿ, ಅಡಕೆಯಲ್ಲಿ ಬಹುಸ್ತರೀಯ ಪದ್ಧತಿ, ಅಡಕೆ ಬೆಳೆಯ ಸಮಗ್ರ ಕೃಷಿ ಪದ್ಧತಿ, ಪಾರಂಪರಿಕ ಅಡಕೆ ಸಂಸ್ಕರಣಾ ಕ್ರಮಗಳು, ಅಡಕೆಯ ವಿವಿಧ ತಳಿಗಳು, ಅಡಕೆ ಸಂಸ್ಕರಣೆ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳು, ಕೃಷಿ ಪರಿಕರ ಮತ್ತು ಯಂತ್ರೋಪಕರಣಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

ಅಲ್ಲದೇ, ಶ್ರೇಷ್ಟ ರೈತ ಮತ್ತು ರೈತ ಮಹಿಳೆಯರಿಗೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದ ಅವರು, ಅಲ್ಲದೇ ಕೃಷಿ ಮೇಳದ ತಾಂತ್ರಿಕ ಸಮಾವೇಶದಲ್ಲಿ ರೈತರ ಸಮಸ್ಯೆಗಳಿಗೆ ತಜ್ಞರಿಂದ ಸಲಹೆಯನ್ನು ಕೊಡಿಸಲಾಗುವುದು. ಕೃಷಿ ಮತ್ತು ತೋಟಗಾರಿಕಾ ಮೇಳದ ಅಂಗವಾಗಿ ಅ.18ರಂದೇ ತಾಂತ್ರಿಕ ಸಮಾವೇಶದಲ್ಲಿ ವಿಕಸಿತ ಕೃಷಿಯಲ್ಲಿ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ, ಅಡಕೆ ಬೆಳೆಯಲ್ಲಿ ಸಮಗ್ರ ರೋಗ ನಿರ್ವಹಣೆ, ಅಡಕೆ ಉಪ ಉತ್ಪನ್ನಗಳ ಸದ್ಬಳಕೆ, ಅಡಕೆ ಮಾರುಕಟ್ಟೆ ವ್ಯವಸ್ಥೆ ಮತ್ತು ಮೌಲ್ಯವರ್ಧನೆ ಮತ್ತಿತರ ವಿಷಯಗಳ ಬಗ್ಗೆ ವಿಜ್ಞಾನಿಗಳು, ಪ್ರಗತಿಪರ ರೈತ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ಸಂವಾದವನ್ನು ಏರ್ಪಡಿಸಲಾಗಿದೆ ಎಂದರು.

ಅ.19ರಂದು ಸಧೃಡ ಭಾರತಕ್ಕಾಗಿ ವಿಕಸಿತ ಕೃಷಿ, ಕೃಷಿಯಲ್ಲಿ ಸುಸ್ಥಿರತೆಗೆ ಅರಣ್ಯ ಕೃಷಿ, ಪಶು ಸಂಗೋಪನೆ-ಆಹಾರ ಭದ್ರತೆ, ಕೃಷಿಯಲ್ಲಿ ಡೋನ್ ಬಳಕೆ. ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳ ವಿಷಯಗಳ ಬಗ್ಗೆ ವಿಜ್ಞಾನಿಗಳು, ಪ್ರಗತಿಪರ ರೈತ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ಸಂವಾದವನ್ನು ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ವಿಶೇಷ ಸಾಧನೆಗೈದ ರೈತರು ಮತ್ತು ರೈತ ಮಹಿಳೆಯರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು. ಅಲ್ಲದೆ ರೈತ ಸಮೂಹಕ್ಕೆ ಮಾಹಿತಿಗಾಗಿ ವಿವಿಧ ಬೆಳೆ ಮತ್ತು ತಾಂತ್ರಿಕತೆಗಳನ್ನು ಹೊತ್ತ ತಾಂತ್ರಿಹ ಕೈಪಿಡಿಗಳ ಬಿಡುಗಡೆ ಮಾಡಲಾಗುವುದು ಅಲ್ಲದೇ ಕೃಷಿ ಪರಿಕರ ವಿತರಕರು, ವಿಜ್ಞಾನಿಗಳು ಹಾಗೂ ಪ್ರಗತಿಪರ ರೈತ ಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ಸಂವಾದವನ್ನು ಏರ್ಪಡಿಸಲಾಗಿದೆ. ಈ ಮೇಳದಲ್ಲಿ ಮೀನುಗಾರಿಕೆ, ಯಂತ್ರೋಪಕರಣಗಳು, ಪಶು ಸಂಗೋಪನೆ ಸೇರಿದಂತೆ ವಿವಿಧ ರೀತಿಯ 200ಕ್ಕೂ ಹೆಚ್ಚಿನ ಸ್ಟಾಲ್‌ಗಳನ್ನು ತೆರೆಯಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿಸ್ತರಣಾ ನಿರ್ದೇಶಕ ಡಾ.ಕೆ.ಟಿ.ಗುರುಮೂರ್ತಿ, ಶಿಕ್ಷಣ ನಿರ್ದೇಶಕ ಡಾ.ಹೇಮ್ಲಾ ನಾಯ್ಕ್, ಕೃಷಿ ಡೀನ್ ಡಾ.ತಿಪ್ಪೇಶ್ ಡಿ ಸೇರಿದಂತೆ ವಿವಿಯ ವಿವಿಧ ವಿಭಾಗಗಳ ಉಪನ್ಯಾಸಕರು, ತಾಂತ್ರಿಕ ವರ್ಗದವರು ಉಪಸ್ಥಿತರಿದ್ದರು.

20ಕ್ಕೆ ರೈತರೊಂದಿಗೆ ಸಂವಾದ

ಅ.೨೦ರಂದು ವೈಜಾನಿಕ ಶುಂಠಿ ಮತ್ತು ಕಾಳುಮೆಣಸು ಕೃಷಿ, ಕಾಳುಮೆಣಸು ಕೃಷಿ- ರೈತರ ಅನುಭವ, ಗೋಡಂಬಿ ಬೆಳೆ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ, ಕೃಷಿ ನವೋದ್ಯಮ ಮತ್ತು ಸೆಕೆಂಡರಿ ಕೃಷಿ, ಸಾಂಬಾರು ಬೆಳೆಗಳ ಮೌಲ್ಯವರ್ಧನೆ ವಿಷಯಗಳ ಬಗ್ಗೆ ವಿಜ್ಞಾನಿಗಳು, ಪ್ರಗತಿಪರ ರೈತ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ಸಂವಾದವನ್ನು ಏರ್ಪಡಿಸಲಾಗಿದೆ. ಇದರ ಜೊತೆಯಲ್ಲಿ ಶ್ವಾನ ಪ್ರದರ್ಶನವೂ ಇರಲಿದೆ ಎಂದು ವಿವರಿಸಿದರು.

ಕೃಷಿ ಮೇಳಕ್ಕೆ ಸಿಎಂ ಚಾಲನೆ

ಕೃಷಿ ಮೇಳದ ಸಂದರ್ಭದಲ್ಲಿ ಕೃಷಿ ವಸ್ತು ಪ್ರದರ್ಶನ, ವಿವಿಧ ಬೆಳೆಗಳ ಪ್ರಾತ್ಯಕ್ಷಿಕೆಯ ’ಸಸ್ಯಕಾಶಿ’ಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಕೃಷಿ ಮೇಳವನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರು, ಗಣಿ ಭೂ ವಿಜ್ಞಾನ ಮತ್ತು ತೋಟಗಾರಿಕೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್, ಸಂಸದ ಬಿ.ವೈ.ರಾಘವೇಂದ್ರ, ವಿಧಾನಸಭಾ ಶಾಸಕರು ಭಾಗವಹಿಸಲಿದ್ದಾರೆ ಎಂದರು.