ಮಾ. 11 ಕ್ಕೆ ರಂಭಾಪುರಿ ಪೀಠದಲ್ಲಿ ಕೃಷಿ ಸಮ್ಮೇಳನ

| Published : Feb 21 2025, 12:49 AM IST

ಸಾರಾಂಶ

ಬಾಳೆಹೊನ್ನೂರು, ರಂಭಾಪುರಿ ಪೀಠದಲ್ಲಿ ನಡೆಯಲಿರುವ ಯುಗಮಾನೋತ್ಸವದಲ್ಲಿ ಮಾ. 11ರಂದು ಎನ್.ಆರ್.ಪುರ ತಾಲೂಕು ಪತ್ರಕರ್ತರ ಸಂಘದಿಂದ ಮಲೆನಾಡಿನ ಬೆಳೆಗಾರರಿಗೆ ವಿಶೇಷ ಕೃಷಿ ಸಮ್ಮೇಳನ, ಅಡಕೆ, ಕಾಫಿ ಬೆಳೆಗಾರರ ಚಿಂತನ, ಮಂಥನ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಕರ್ತರ ಸಂಘದ ಅಧ್ಯಕ್ಷ ಸಚಿನ್ ಕುಮಾರ್ ಹೇಳಿದರು.

ವಿದ್ಯಾಗಣಪತಿ ಸಮುದಾಯ ಭವನದಲ್ಲಿ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಸಚಿನ್ ಕುಮಾರ್

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ರಂಭಾಪುರಿ ಪೀಠದಲ್ಲಿ ನಡೆಯಲಿರುವ ಯುಗಮಾನೋತ್ಸವದಲ್ಲಿ ಮಾ. 11ರಂದು ಎನ್.ಆರ್.ಪುರ ತಾಲೂಕು ಪತ್ರಕರ್ತರ ಸಂಘದಿಂದ ಮಲೆನಾಡಿನ ಬೆಳೆಗಾರರಿಗೆ ವಿಶೇಷ ಕೃಷಿ ಸಮ್ಮೇಳನ, ಅಡಕೆ, ಕಾಫಿ ಬೆಳೆಗಾರರ ಚಿಂತನ, ಮಂಥನ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಕರ್ತರ ಸಂಘದ ಅಧ್ಯಕ್ಷ ಸಚಿನ್ ಕುಮಾರ್ ಹೇಳಿದರು.ಪಟ್ಟಣದ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿ, ಸಮ್ಮೇಳನಕ್ಕೆ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅನುಗ್ರಹ ನೀಡಿದ್ದು, ಕೃಷಿ, ತೋಟಗಾರಿಕೆ ಸಚಿವರು, ಸಂಸದರು, ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಕೃಷಿ ಸಂಬಂಧಿತ ವಿವಿಧ ಗೋಷ್ಠಿ, ಕೃಷಿ ಉಪಕರಣ ಮಳಿಗೆ ಹಾಗೂ ರೈತರಿಗೆ ಮಾಹಿತಿ ವಿಭಾಗಗಳು ಇರಲಿವೆ ಎಂದರು. ಸಹ್ಯಾದ್ರಿ ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಎಂ.ಕೆ.ಸುಂದರೇಶ್ ಮಾತನಾಡಿ, ಮಲೆನಾಡಿನ ಜ್ವಲಂತ ಸಮಸ್ಯೆಗಳಾದ ಒತ್ತುವರಿ, ಪ್ರಾಣಿ, ಮಾನವ ಸಂಘರ್ಷ, ಕಾರ್ಮಿಕರ ಸಮಸ್ಯೆ, ಮಾರುಕಟ್ಟೆ ಏರಿಳಿತ, ಅಡಕೆ, ಕಾಫಿಗೆ ತಗುಲಿರುವ ಮಾರಕ ರೋಗಗಳ ಕುರಿತು ವಿವರವಾದ ಬೇಡಿಕೆಗಳನ್ನು ಅಂದು ಸಂಬಂಧಪಟ್ಟ ಸಚಿವರ ಗಮನಕ್ಕೆ ತರುವ ಮೂಲಕ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಪತ್ರಕರ್ತರ ಸಂಘ ನೆರವಾಗಬೇಕು ಎಂದರು.ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ ಮಾತನಾಡಿ, ಸಮ್ಮೇಳನಕ್ಕೆ ಹೆಚ್ಚಿನ ರೈತರು ಬಂದಲ್ಲಿ ಕಾರ್ಯಕ್ರಮದ ಪ್ರಯೋಜನ ಪಡೆದು ಕೊಳ್ಳಬಹುದು. ಈ ನಿಟ್ಟಿನಲ್ಲಿ ಪಂಚಾಯಿತಿಯಿಂದ ಎಲ್ಲಾ ಕಡೆ ಪ್ರಚಾರ ಮಾಡುವ ವ್ಯವಸ್ಥೆ ನಿರ್ವಹಿಸಲಿದೆ ಎಂದರು.ಪತ್ರಕರ್ತರ ಸಂಘದ ಕಾರ್ಯದರ್ಶಿ ನಾಗರಾಜ್ ಭಟ್, ಸಹಕಾರ್ಯದರ್ಶಿ ಎ.ಜಿ.ಶಿವಾನಂದಭಟ್, ಮುಖಂಡರಾದ ಟಿ.ಎಂ.ಉಮೇಶ್, ಕೆ.ಟಿ. ವೆಂಕಟೇಶ್, ಡಾ.ನವೀನ್ ಲಾಯ್ಡ್ ಮಿಸ್ಕಿತ್, ಸುರೇಂದ್ರ ಮಾಸ್ತರ್, ಚಂದ್ರಶೇಖರ ರೈ, ಜ್ಯೋತಿ ಮೂರ್ತಿ, ಜಾಹ್ನವಿ ಜಯರಾಮ್, ಸವಿತಾ ಕೃಷ್ಣಮೂರ್ತಿ, ಅರಳಿಕೊಪ್ಪ ಸತೀಶ್, ಚೈತನ್ಯ ವೆಂಕಿ, ಕೃಷ್ಣ ಭಟ್, ಓ.ಡಿ ಸ್ಟೀಫನ್, ಆರ್.ಡಿ.ಮಹೇಂದ್ರ, ಜಗದೀಶ್ಚಂದ್ರ ಬಿ. ಮತ್ತಿತರ ಗಣ್ಯರು ಉಪಸ್ಥಿತರಿದ್ದು, ಸಲಹೆ, ಸಹಕಾರ ನೀಡಿದರು.ಸ್ವಾಗತ ಸಮಿತಿ ರಚನೆ: ಸಮ್ಮೇಳನದ ಅಂಗವಾಗಿ ಸ್ವಾಗತ ಸಮಿತಿ ರಚಿಸಿದ್ದು, ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು (ಮಹಾ ಪೋಷಕರು), ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ (ಅಧ್ಯಕ್ಷ), ಶಾಸಕ ಟಿ.ಡಿ.ರಾಜೇಗೌಡ (ಪ್ರಧಾನ ಪೋಷಕರು) ಅವರನ್ನು ಮೊದಲ ಹಂತ ದಲ್ಲಿ ಆಯ್ಕೆ ಮಾಡಲಾಗಿದ್ದು, ಪೂರ್ಣ ಹಂತದ ಪದಾಧಿಕಾರಿಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಸಚಿನ್ ಕುಮಾರ್ ತಿಳಿಸಿದರು.

೨೦ಬಿಎಚ್‌ಆರ್ ೨:

ಬಾಳೆಹೊನ್ನೂರಿನ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಕೃಷಿ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಸಂಘ, ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು.