ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳಲ್ಲಿ ದೊರೆಯುವ ಹೊಸ ಹೊಸ ಯೋಜನೆಗಳನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ತೋಟಗಾರಿಕೆ ಮಹಾ ವಿದ್ಯಾಲಯ ಮೈಸೂರು, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಮೈಸೂರು ತೋಟಗಾರಿಗೆ ಇಲಾಖೆ ಹಾಗೂ ತೋಟಗಾರಿಕೆ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ನಡೆದ ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಶಿಬಿರ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ತೋಟಗಾರಿಕೆ ರೈತರ ಬದುಕಿಗೆ ಆಸರೆಯಾಗಿವೆ. ತೋಟಗಾರಿಕೆ ಬೆಳೆಗಳಿಂದಲೂ ಸಹ ರೈತರು ಆರ್ಥಿಕವಾಗಿ ಸಲಬಲರಾಗುತ್ತಿದ್ದಾರೆ. ಸರ್ಕಾರಗಳು ಸಹ ತೋಟಗಾರಿಕೆ, ಕೃಷಿಗೆ ಹೆಚ್ಚು ಒತ್ತು ನೀಡುತ್ತಿದ್ದು, ರೈತರಿಗೆ ಅನುಕೂಲವಾಗುವ ಸಾಕಷ್ಟು ಯೋಜನೆ ರೂಪಿಸಿದೆ. ಅವುಗಳನ್ನು ರೈತರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ತೋಟಗಾರಿಕೆ ಕಾಲೇಜಿನ ವಿದ್ಯಾರ್ಥಿಗಳು ಸಹ ರೈತರು ಹೊಸಹೊಸ ತಂತ್ರಜ್ಞಾನಗಳ ಮೂಲಕ ತೋಟಗಾರಿಕೆ ಕೃಷಿಯ ತೊಡಗಿಸಿಕೊಳ್ಳವ ಬಗ್ಗೆ ಇಂತಹ ಅರ್ಥಪೂರ್ಣ ಶಿಬಿರಗಳ ಮೂಲಕ ಅರಿವು ಮೂಡಿಸಿಕೊಡುವ ಕೆಲಸ ಮಾಡಬೇಕು ಎಂದರು.
ತೋಟಗಾರಿಕೆ ಉಪ ನಿರ್ದೇಶಕಿ ರೂಪಶ್ರೀ ಮಾತನಾಡಿ, ಇಂತಹ ಶಿಬಿರಗಳ ಮೂಲಕ ವಿದ್ಯಾರ್ಥಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳ ನೀಡುವ ಮಾಹಿತಿಗಳನ್ನು ರೈತರು ಪಡೆದುಕೊಂಡು ತೋಟಗಾರಿಕೆ ಕೃಷಿಯಲ್ಲಿ ಪ್ರಗತಿ ಸಾಧನೆ ಮಾಡಬೇಕು ಎಂದರು.ಶಿಬಿರದ ಸಂಯೋಜಕ ಡಾ.ಜಿ.ಮಂಜುನಾಥ್ ಮಾತನಾಡಿ, ಕಾರ್‍ಯಾನುಭವ ಶಿಬಿರ ರೈತರ ಪಾರಂಪರಿಕ ಅನುಭವವನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಹೊಸ ತಂತ್ರಜ್ಞಾನಗಳನ್ನು ರೈತರಿಗೆ ವರ್ಗಾಹಿಸಬೇಕು ಎಂದರು.
ಕಾರ್‍ಯಾನುಭವ ಶಿಬಿರವನ್ನು ಮೂರು ತಿಂಗಳ ಕಾಲ ತಾಲೂಕಿನ ಹರವು, ಅರಳಕುಪ್ಪೆ, ಮತ್ತು ಮಲ್ಲೇನಹಳ್ಳಿ ಗ್ರಾಮಗಳಲ್ಲಿ ನಡೆಯಲಿದೆ. ನುರಿತ ತಜ್ಞನರಿಂದ ಹಲವು ತರಬೇತಿ ಶಿಬಿರಗಳನ್ನು ಸಹ ಆಯೋಜಿಸಲಾಗುವುದು. ಇದರಿಂದ ಸುತ್ತಮುತ್ತಲಿನ ರೈತರಿಗೆ ಸಾಕಷ್ಟು ಅನುಕೂಲವಾಗಲಿದ ಎಂದು ತಿಳಿಸಿದರು.ಇದಕ್ಕೂ ಮುನ್ನ ಶಿಬಿರದ ವಿದ್ಯಾರ್ಥಿಗಳು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರನ್ನು ಎತ್ತಿನಗಾಡಿಯ ಮೂಲಕ ವೇದಿಕೆಗೆ ಕರೆತಂದರು. ಸಮಾರಂಭದಲ್ಲಿ ತಾಪಂ ಇಒ ಲೋಕೇಶ್‌ಮೂರ್ತಿ, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಸೇರಿದಂತೆ ಹಲವರು ಹಾಜರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))