ಭಾರತದ ಮೂಲ ಸಂಸ್ಕೃತಿಯೇ ಕೃಷಿ

| Published : Dec 24 2023, 01:45 AM IST

ಸಾರಾಂಶ

ಭಾರತದ ಮೂಲ ಸಂಸ್ಕೃತಿಯೇ ಕೃಷಿ, ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದಲೇ ದೇಶದ ರೈತರು ಇಡೀ ವಿಶ್ವಕ್ಕೆ ಪರಿಯಿಸಿಕೊಂಡಿದ್ದಾರೆ. ಆದಾಗ್ಯೂ ಪ್ರಕೃತಿ ಜೊತೆ ಸಂಘರ್ಷ ನಿರಂತರವಾಗಿದ್ದು, ಕೃಷಿ ನಡೆಸಿದ ರೈತರು ಕೈಸುಟ್ಟುಕೊಳ್ಳುತ್ತಿದ್ದಾರೆ, ಆದರೆ ನಿಮ್ಮಿಂದ ದೇಶವು ಬಹಳಷ್ಟು ನೀರಿಕ್ಷೆಯನ್ನಿಟ್ಟುಕೊಂಡಿದ್ದು ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆಯಂತಹ ಕೃತ್ಯಕ್ಕೆ ಕೈ ಹಾಕದಂತೆ ಶಾಸಕ ಬಸವರಾಜ ಶಿವಣ್ಣನವರ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಕೃಷಿ ಇಲಾಖೆ ವತಿಯಿಂದ ಮಾಜಿ ಪ್ರಧಾನಿ ಚೌಧರಿ ಚರಣಸಿಂಗ್ ಅವರ ಜನ್ಮದಿನಾಚರಣೆ ಅಂಗವಾಗಿ ನಡೆದ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭೂಮಿಯ ಸ್ವರೂಪ, ಮಣ್ಣಿನ ಗುಣಧರ್ಮ, ಹವಾಮಾನದ ಗುಣ ಲಕ್ಷಣಗಳು, ಲಭ್ಯವಿದ್ದ ನೀರಾವರಿ ಸೌಲಭ್ಯಗಳು ಬಳಿಸಿಕೊಳ್ಳುತ್ತಾ ಬಂದಿದ್ದ ರೈತರು 90 ದಶಕದವರೆಗೆ ಆರ್ಥಿಕವಾಗಿ ಬಹಳಷ್ಟು ಸುಭೀಕ್ಷವಾಗಿದ್ದರು. ಆದರೆ ಇತ್ತೀಚೆಗೆ ರಾಸಾಯನಿಕ ಗೊಬ್ಬರ ಬಳಕೆ, ಹವಾಮಾನ ವೈಪರೀತ್ಯ, ಕೃಷಿಚಟುವಟಿಕೆಗಳ ಮೇಲಿನ ಏರಿಕೆಯಾದ ವೆಚ್ಚದ ಪರಿಣಾಮ ದೇಶದ ಕೃಷಿಕರು ಇಕ್ಕಟ್ಟಿನಲ್ಲಿ ಸಿಲುಕಿದ್ದು, ಅದರಿಂದ ಹೊರಬರಲಾರದೇ ಆತ್ಮಹತ್ಯೆಯಂತಹ ಕೃತ್ಯಗಳಿಗೆ ಬಲಿಯಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಕೃಷಿ ಕ್ಷೇತ್ರವು ಭಾರತದ ಆರ್ಥಿಕತೆ ಬೆನ್ನೆಲುಬು. ಕೃಷಿ ಉತ್ಪಾದನೆಯಲ್ಲಿ ವಿಶ್ವದಲ್ಲಿ 2ನೇ ಸ್ಥಾನದಲ್ಲಿದೆ. ಭಾರತೀಯ ಆಹಾರ ಉದ್ಯಮವು ಅಪಾರ ಸಾಮರ್ಥ್ಯ ಹೊಂದಿದೆ. ಆದರೆ ಭಾರತದಲ್ಲಿ ಕೃಷಿಯು ಮಾನ್ಸೂನ್‌ಗಳ ಮೇಲೆ ಹೆಚ್ಚು ಅವಲಂಬಿತವಾಗಿದ್ದು ಕೈಕೊಡುತ್ತಿರುವ ಪ್ರಕೃತಿ, ನೀರಾವರಿ ಸೌಲಭ್ಯಗಳ ಕೊರತೆ, ಕೃಷಿ ಮೇಲಿನ ವೆಚ್ಚಗಳು ಆತನನ್ನು ಹೈರಾಣಾಗಿಸಿದ್ದು, ವಿಶ್ವಕ್ಕೆ ಆಹಾರ ಭದ್ರತೆ ಕೊಟ್ಟಂತಹ ರೈತನ ಜೀವನ ಅಭದ್ರತೆಯತ್ತ ಸಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಂಗಣ್ಣ ಎಲಿ ಮಾತನಾಡಿ, ಭಾರತದ ಆರ್ಥಿಕತೆಯಲ್ಲಿ ಕೃಷಿ ಪ್ರಮುಖ ಪಾತ್ರ ವಹಿಸುತ್ತದೆ. ಶೇ.58 ಕ್ಕಿಂತ ಹೆಚ್ಚು ಗ್ರಾಮೀಣ ಕುಟುಂಬಗಳಿಗೆ ಪ್ರಮುಖ ಜೀವನೋಪಾಯವಾಗಿದೆ. ದೇಶದ ರೈತರು ಸುಭೀಕ್ಷವಾಗಿರಲು ವಿದ್ಯುತ್, ನೀರಾವರಿ, ಮಾರುಕಟ್ಟೆ, ಗುಣಮಟ್ಟದ ಬೀಜ, ಸಾಲ ಸೌಲಭ್ಯ, ತಾಂತ್ರಿಕತೆ ಸೇರಿದಂತೆ ಇತರ ಕಲ್ಯಾಣ ಕಾರ್ಯಕ್ರಮಗಳು ಪ್ರಕಟವಾಗಬೇಕಾಗಿದ್ದು ಸರ್ಕಾರಗಳು ಇನ್ನಾದರೂ ತಮ್ಮ ಕೃಷಿ ನೀತಿಗಳನ್ನು ಬದಲಾವಣೆ ಮಾಡಿಕೊಳ್ಳಬೇಕಾಗಿದೆ ಎಂದರು.

ರೈತ ಮುಖಂಡರಾದ ಶಂಕರಗೌಡ ಪಾಟೀಲ, ಮಲ್ಲಿಕಾರ್ಜುನ ಬಳ್ಳಾರಿ, ರುದ್ರಗೌಡ ಕಾಡನಗೌಡ್ರ, ಬಸವರಾಜ ಸಂಕಣ್ಣನವರ, ದಾನಪ್ಪ ಚೂರಿ ಸೇರಿದಂತೆ ಕೃಷಿ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.