ಆಹಾರ ಭದ್ರತೆ ಸಾಧಿಸುವಲ್ಲಿ ಕೃಷಿಯು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಪೌಷ್ಟಿಕ ಮತ್ತು ಸುರಕ್ಷಿತ ಆಹಾರ ನಿರಂತರವಾಗಿ ಸಿಗುವಂತಾಗಲು ಕೃಷಿ ವಲಯವು ಸುಸ್ಥಿರವಾಗಿ ಬೆಳೆಯಬೇಕು.

ಧಾರವಾಡ:

ಆಹಾರ ಭದ್ರತೆ ಸಾಧಿಸುವಲ್ಲಿ ಕೃಷಿಯು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಪೌಷ್ಟಿಕ ಮತ್ತು ಸುರಕ್ಷಿತ ಆಹಾರ ನಿರಂತರವಾಗಿ ಸಿಗುವಂತಾಗಲು ಕೃಷಿ ವಲಯವು ಸುಸ್ಥಿರವಾಗಿ ಬೆಳೆಯಬೇಕು. ಪೂರಕವಾಗಿ ತರಬೇತಿಗಳೂ ಮುಖ್ಯ ಪಾತ್ರ ವಹಿಸುತ್ತವೆ ಎಂದು ಶಿವಮೊಗ್ಗದ ಕೃಷಿ ಮಹಾವಿದ್ಯಾಲಯದ ವಿಶೇಷ ಅಧಿಕಾರಿ ಡಾ. ತಿಪ್ಪೇಶಪ್ಪ ಜಿ.ಎನ್. ಹೇಳಿದರು.

ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ವತಿಯಿಂದ ಜಲ ಮೂಲಗಳ ಸಂರಕ್ಷಣೆ ಮತ್ತು ಮಣ್ಣು ಮತ್ತು ಮಳೆ ನೀರು ಕೊಯ್ಲು ವಿಷಯ ಕುರಿತು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ತರಬೇತಿ ಉದ್ಘಾಟಿಸಿದ ಅವರು, ವಾಲ್ಮಿ ಸಂಸ್ಥೆಯು ಅಚ್ಚುಕಟ್ಟು ಪ್ರದೇಶದ ರೈತರಿಗೆ ವ್ಯವಸ್ಥಿತವಾಗಿ ಅರ್ಥಪೂರ್ಣ ತರಬೇತಿಗಳನ್ನು ಆಯೋಜಿಸುತ್ತಿದೆ. ಅದರ ಪ್ರಯೋಜನವನ್ನು ರೈತರ, ವಿದ್ಯಾರ್ಥಿಗಳು ಪಡೆಯಬೇಕು, ಪ್ರತಿಯೊಬ್ಬ ವಿದ್ಯಾರ್ಥಿಯು ಮಳೆ ನೀರಿನ ಮಹತ್ವ ಅರಿತು, ಮಣ್ಣು ಮತ್ತು ನೀರಿನ ಸಂರಕ್ಷಣೆ ಬಗ್ಗ ಜಾಗೃತಿ ಮೂಡಿಸುವಲ್ಲಿ ಮುಂದಾಗಬೇಕು ಎಂದರು.

ವಾಲ್ಮಿ ನಿರ್ದೇಶಕ ಡಾ. ಗಿರೀಶ ಮರಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಣ್ಣು ಸಸ್ಯಗಳ ಬೆಳವಣಿಗೆಗೆ ಆಧಾರ. ಆರೋಗ್ಯಕರ ಮಣ್ಣು ಉತ್ತಮ ಆಹಾರ ಉತ್ಪಾದನೆಗೆ ಅಗತ್ಯವಾಗಿದೆ. ನೀರು ಮತ್ತು ಮಣ್ಣು ಅಮೂಲ್ಯ ನೈಸರ್ಗಿಕ ಸಂಪನ್ಮೂಲಗಳಾಗಿರುವುದರಿಂದ ಅವುಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಮಣ್ಣಿನ ಆರೋಗ್ಯದ ಮಹತ್ವ, ನೀರು ಮತ್ತು ಮಣ್ಣಿನ ಸಂರಕ್ಷಣೆಯ ಮಹತ್ವ, ಮಳೆ ನೀರು ಕೊಯ್ಲು ಕ್ರಮಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಸಹ ಪ್ರಾಧ್ಯಾಪಕ ಪ್ರದೀಪ ದೇವರಮನಿ, ರಾಜ್ಯದ ನೀರಾವರಿ ಪರಿಸ್ಥಿತಿ ಮತ್ತು ನೀರಾವರಿ ವ್ಯವಸ್ಥೆಯಲ್ಲಿ ನೀರಿನ ಮಹತ್ವ, ಇಂದುಧರ ಹಿರೇಮಠ ಮಣ್ಣಿನ ಆರೋಗ್ಯ ಮತ್ತು ಡಾ. ಗಿರೀಶ ವಿ.ಪಿ., ಬೆಳೆಗಳಲ್ಲಿ ಕೀಟ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು. ಡಾ. ಸಹನಾ ಎಸ್., ಫಕ್ಕಿರೇಶ ಅಗಡಿ ಇದ್ದರು.