ದೇಶದ ಅಭಿವೃದ್ಧಿಯಲ್ಲಿ ಕೃಷಿ ಪ್ರಮುಖ ಪಾತ್ರ: ಜಿಲ್ಲಾಧಿಕಾರಿ ಡಾ.ಕುಮಾರ

| Published : Nov 23 2025, 02:15 AM IST

ಸಾರಾಂಶ

ಕೃಷಿಗೆ ಅನುಕೂಲವಾಗುವ ಸಾಕಷ್ಟು ಪ್ರಾತ್ಯಕ್ಷಿಕೆಗಳನ್ನು ಕೃಷಿ ಮೇಳದಲ್ಲಿ ಕಾಣಬಹುದು. ನೆರೆ ಜಿಲ್ಲೆಯ ರೈತರು ಸಹ ಸದರಿ ಮೇಳದ ಪ್ರಯೋಜನ ಪಡೆದುಕೊಳ್ಳಬಹುದು. ಕೃಷಿ ಮೇಳದಲ್ಲಿ ಮುಖ್ಯಮಂತ್ರಿಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಪೊಲೀಸ್ ಇಲಾಖೆ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೃಷಿ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರೈತರು ದೇಶದ ಬೆನ್ನೆಲುಬಾಗಿದ್ದಾರೆ ಎಂದು ಜಿಲ್ಲಾಕಾರಿ ಡಾ. ಕುಮಾರ ಬಣ್ಣಿಸಿದರು.

ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಕೃಷಿ ಮೇಳ ಪ್ರಚಾರ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಕೃಷಿ ಪ್ರಧಾನವಾಗಿರುವ ಮಂಡ್ಯ ಜಿಲ್ಲೆಯಲ್ಲಿ ಕೃಷಿ ವಿವಿ ಸ್ಥಾಪನೆಗೊಂಡು ವರ್ಷ ಕಳೆಯುತ್ತಿದೆ. ಆರು ತಿಂಗಳಲ್ಲೇ ಯುಜಿಸಿ ಅನುಮೋದನನೆಯೂ ದೊರೆತಿದ್ದು, ಇದು ವಿವಿ ಸಾಧನೆಗೆ ಮೆರುಗು ನೀಡಿದೆ ಎಂದರು.

ಮುಂಬರುವ ಡಿ.೫, ೬ ಮತ್ತು ೭ ಮೂರು ದಿನಗಳ ಕಾಲ ಮಂಡ್ಯ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಕೃಷಿ ಮೇಳ ಆಯೋಜಿಸಲಾಗಿದ್ದು, ಕೃಷಿ ಮೇಳ ರೈತರಿಗೆ ಅತ್ಯಮೂಲ್ಯ ಕಾರ್ಯಕ್ರಮವಾಗಿದೆ. ಕೃಷಿಯಲ್ಲಿ ತಂತ್ರಜ್ಞಾನ ಮತ್ತು ವಿಜ್ಞಾನ ಬಳಸಿ ಆದಾಯ ಹೆಚ್ಚಿಸಿ ರೈತರು ಅಭಿವೃದ್ಧಿ ಹೊಂದಲು ಅರಿವು ಮೂಡಿಸುವ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಕೃಷಿಗೆ ಅನುಕೂಲವಾಗುವ ಸಾಕಷ್ಟು ಪ್ರಾತ್ಯಕ್ಷಿಕೆಗಳನ್ನು ಕೃಷಿ ಮೇಳದಲ್ಲಿ ಕಾಣಬಹುದು. ನೆರೆ ಜಿಲ್ಲೆಯ ರೈತರು ಸಹ ಸದರಿ ಮೇಳದ ಪ್ರಯೋಜನ ಪಡೆದುಕೊಳ್ಳಬಹುದು. ಕೃಷಿ ಮೇಳದಲ್ಲಿ ಮುಖ್ಯಮಂತ್ರಿಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಪೊಲೀಸ್ ಇಲಾಖೆ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ ಎಂದರು.

ಮಂಡ್ಯ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ಹರಿಣಿ ಕುಮಾರ್ ಮಾತನಾಡಿ, ರೈತರಿಗೆ ಅನುಕೂಲವಾಗಲೆಂದು ಕೃಷಿ ಮೇಳ ಆಯೋಜಿಸಲಾಗಿದೆ. ಕೃಷಿ ಮೇಳದಲ್ಲಿ ೩೫೦ಕ್ಕೂ ಹೆಚ್ಚು ಕೃಷಿ ಮಳಿಗೆ ತೆರೆಯಲಾಗುವುದು. ಕೃಷಿಯಲ್ಲಿನ ವೈಜ್ಞಾನಿಕ ಹಾಗೂ ತಾಂತ್ರಿಕತೆಯ ಕುರಿತಾಗಿ ಮೇಳದಲ್ಲಿ ತಿಳಿಸಲಾಗುವುದು. ಸುಮಾರು ೬೦ ಎಕರೆ ಜಾಗದಲ್ಲಿ ಕೃಷಿ ಬೆಳೆಗೆ ಬೇಕಾದ ಬೆಳೆಗಳು, ಬೆಳೆಗಳ ಪದ್ಧತಿ, ಅಂತರ ಬೆಳೆಗಳು, ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿಯ ಪ್ರಾತ್ಯಕ್ಷಿಕೆಗಳನ್ನು ಲೈವ್ ಡೆಮೋನ್ಸ್ಟೇಷನ್ (ನೇರ ಪ್ರದರ್ಶನ) ಮೂಲಕ ಕೃಷಿ ಮೇಳದಲ್ಲಿ ಕಾಣಬಹುದು ಎಂದರು.

ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಡೀನ್ ಡಾ. ಫಾತಿಮಾ, ವಲಯ ಕೃಷಿ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಶಿವಕುಮಾರ್, ಭತ್ತದ ತಳಿ ವಿಜ್ಞಾನಿ ಡಾ. ರಾಮಚಂದ್ರ, ಕೃಷಿ ಇಲಾಖೆಯ ವ್ಯವಸ್ಥಾಪಕ ಡಾ.ತಿಮ್ಮೇಗೌಡ, ಕೃಷಿ ವಿಶ್ವವಿದ್ಯಾಲಯದ ಡಾ. ಆಶಾ, ಡಾ.ಸುಮಾ, ಡಾ.ವಿದ್ಯಾ, ಡಾ.ಭಾಗ್ಯಲಕ್ಷ್ಮೀ ಇನ್ನಿತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.