ಕೃಷಿ ವಿವಿ ಯುವ ಜನೋತ್ಸವ: ಸಮುದಾಯ ವಿಜ್ಞಾನ ಕಾಲೇಜ್‌ ಚಾಂಪಿಯನ್

| Published : Nov 29 2024, 01:02 AM IST

ಸಾರಾಂಶ

ಕೃಷಿ ವಿವಿಯಲ್ಲಿ ನಡೆದ 33ನೇ ಅಂತರ್‌ ಕಾಲೇಜುಗಳ ಯುವಜನೋತ್ಸವದಲ್ಲಿ ಸಮುದಾಯ ವಿಜ್ಞಾನ ಕಾಲೇಜು ಸಮಗ್ರ ಚಾಂಪಿಯನ್‌ ಪಟ್ಟ ಪಡೆದರೆ, ಧಾರವಾಡ ಕೃಷಿ ಕಾಲೇಜು ರನ್ನರ್‌ ಅಪ್‌ ಆಗಿ ಹೊರಹೊಮ್ಮಿದೆ.

ಧಾರವಾಡ:

ಇಲ್ಲಿಯ ಕೃಷಿ ವಿವಿಯಲ್ಲಿ ನಡೆದ 33ನೇ ಅಂತರ್‌ ಕಾಲೇಜುಗಳ ಯುವಜನೋತ್ಸವದಲ್ಲಿ ವಿವಿ ವ್ಯಾಪ್ತಿಯಲ್ಲಿ ಭಾಗವಹಿಸಿದ್ದ ಏಳು ತಂಡಗಳ ಪೈಕಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಸಮುದಾಯ ವಿಜ್ಞಾನ ಕಾಲೇಜು ಸಮಗ್ರ ಚಾಂಪಿಯನ್ ಪಟ್ಟ ಪಡೆಯಿತು.

ಧಾರವಾಡ ಕೃಷಿ ಕಾಲೇಜು ರನ್ನರ್ ಅಪ್ ಆಗಿ ಹೊರಹೊಮ್ಮಿತು. ಸಂಗೀತ ಸ್ಪರ್ಧೆಯಲ್ಲಿ ಸಮುದಾಯ ವಿಜ್ಞಾನ ಕಾಲೇಜು, ಸಾಹಿತ್ಯ ವಿಭಾಗದಲ್ಲಿ ಶಿರಸಿ ಕೃಷಿ ಕಾಲೇಜು ಪ್ರಥಮ ಸ್ಥಾನ ಪಡೆದುಕೊಂಡಿತು. ಥಿಯೇಟರ್ ವಿಭಾಗಗಳಲ್ಲಿ ಹನುಮನಮಟ್ಟಿ ಚಾಂಪಿಯನ್, ಚಿತ್ರಕಲೆಯಲ್ಲಿ ವಿಜಯಪುರ ವಿಜೇತವಾಯಿತು. ಯಕ್ಷಗಾನ, ಕರಗ, ಕಂಸಾಳೆ ಮತ್ತು ರಾಜಸ್ಥಾನಿಯಂತಹ ವಿವಿಧ ನೃತ್ಯ ಶೈಲಿಗಳನ್ನು ಯುವಜನೋತ್ಸವದಲ್ಲಿ ಪ್ರದರ್ಶಿಸಲಾಯಿತು. ನೃತ್ಯ ಕಲಾ ಸ್ಪರ್ಧೆಯಲ್ಲಿ ಧಾರವಾಡ ಕೃಷಿ ಕಾಲೇಜು ಹಾಗೂ ಸಮುದಾಯ ವಿಜ್ಞಾನ ಪ್ರಥಮ ಸ್ಥಾನ ಹಂಚಿಕೊಂಡವು.

ನಾಟಕ, ಸಮೂಹ ನೃತ್ಯ, ಮೂಕಾಭಿನಯ, ಶಾಸ್ತ್ರೀಯ ಮತ್ತು ಪಾಶ್ಚಾತ್ಯ ಸಂಗೀತ, ಚಿತ್ರಕಲೆ, ಪೋಸ್ಟರ್ ತಯಾರಿಕೆ, ರಂಗೋಲಿ, ಕ್ವಿಜ್, ಹಾಗೂ ಸಾಹಿತ್ಯ ಚಟುವಟಿಕೆಗಳು ಸೇರಿದಂತೆ ಒಟ್ಟು 30 ವಿವಿಧ ಸ್ಫರ್ಧೆಗಳು ನಡೆದವು.

ಜಾನಪದ ವಿವಿ ಕುಲಪತಿ ಟಿ.ಎಂ. ಬಾಸ್ಕರ್ ಭಾಗವಹಿಸಿ ಮಾತನಾಡಿ, ಕೃಷಿಯಿಂದ ಜಾನಪದ ಸಮೃದ್ಧವಾಗಿದೆ. ನಾಗರಿಕತೆ ಅಥವಾ ಜಾನಪದ ಲೋಕವು ಕೃಷಿಯಿಂದಲೆ ಬಂದಿದೆ. ಕೃಷಿ ವಿದ್ಯಾರ್ಥಿಗಳು ಹೊಲ ಗದ್ದೆಗಳಲ್ಲಿ ಪ್ರಾಯೋಗಿಕ ಚಟುವಟಿಕೆ ಕೈಗೊಂಡು, ಉತ್ತಮ ಹಾಗೂ ಪೌಷ್ಟಿಕಾಂಶಯುಕ್ತ ಸಸ್ಯತಳಿಗಳನ್ನು ಅಭಿವೃದ್ಧಿಪಡಿಸಲು ಸಲಹೆ ನೀಡಿದರು.

ಕೃಷಿ ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪನಾ ಮಂಡಳಿಯ ಶ್ರೀನಿವಾಸ ಕೊಟ್ಯಾನ, ವೀರನಗೌಡ ಪೋಲಿಸ್‌ಗೌಡರ, ಡಾ. ಐ.ಕೆ. ಕಾಳಪ್ಪನವರ, ಡಾ. ಭೀಮಪ್ಪ ಎ, ಡಾ. ಜೆ.ಎಸ್. ಹಿಳ್ಳಿ ಇದ್ದರು.